ಚಿಕ್ಕಮಗಳೂರು: ಸಮ ಸಮಾಜ ನಿರ್ಮಾಣ ಮಾಡಲು ವಿಶ್ವಕರ್ಮ ಮಹಾ ಪುರುಷರು ಶ್ರಮಿಸಿದ್ದಾರೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.
ಜಿಲ್ಲಾಡಳಿತದ ವತಿಯಿಂದ ನಗರದ ಕುವೆಂಪು ಕಲಾಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ವಿಶ್ವಕರ್ಮ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜಕ್ಕೆ ಬಸವಣ್ಣ, ಕನಕದಾಸರು, ವಿಶ್ವಕರ್ಮರು, ಅಂಬೇಡ್ಕರ್, ಮಹರ್ಷಿ ವಾಲ್ಮೀಕಿ ಅವರಂತಹ ಮಹನೀಯರ ಕೊಡುಗೆ ಅಪಾರ. ಈ ಮಹಾಪುರುಷರು ತಮ್ಮ ವಿಚಾರಧಾರೆಗಳಿಂದ ಪ್ರಪಂಚ ಇರುವ ತನಕ ಬದುಕಿರುತ್ತಾರೆ ಎಂದು ತಿಳಿಸಿದರು.
ವಿಶ್ವಕರ್ಮ ಸಮಾಜದವರು ಅವರದೇ ಆದ ವಿಶಿಷ್ಟವಾದ ಕಲೆಯನ್ನು ಕರಗತ ಮಾಡಿಕೊಂಡವರು. ದೊಡ್ಡ ಬಂಡೆಕಲ್ಲುಗಳನ್ನು ಶಿಲೆಯನ್ನಾಗಿಸಬಲ್ಲರು. ದೊಡ್ಡ ದೊಡ್ಡ ಮರದ ತೊಲೆಗಳನ್ನು ಕೆತ್ತನೆ ಮಾಡುವ ಮೂಲಕ ಮೂರ್ತಿಯ ಸ್ವರೂಪ ನೀಡಬಲ್ಲರು. ಅವರ ಕಲೆ ನಿಜಕ್ಕೂ ವಿಶೇಷವಾದದ್ದು ಎಂದರು.
ವಿಶ್ವದ ಶಿಲ್ಪಕಲೆಯ ಪ್ರಥಮ ಗುರುಗಳು ಎಂದರೆ ವಿಶ್ವಕರ್ಮರು. ಇತ್ತೀಚೆಗೆ ವೈವಿಧ್ಯಮಯವಾದ ವಾಸ್ತುಶಿಲ್ಪಗಳು, ತಂತ್ರಜ್ಞಾನಗಳು ಬಂದಿರಬಹುದು. ವಿಶ್ವಕರ್ಮರು ಹಾಗೂ ಅವರ ಶಿಲ್ಪಕಲೆಯನ್ನು ಮರೆಯಲು ಸಾಧ್ಯವಿಲ್ಲ. ಮಹತ್ತರ ನಗರಗಳನ್ನು, ಪುಷ್ಪಕ ವಿಮಾನ, ಬಗೆಬಗೆಯ ಅಸ್ತ್ರ-ಶಸ್ತ್ರಗಳನ್ನು ಸೃಷ್ಟಿಸಿ ಕೊಟ್ಟಿದ್ದಾರೆ. ಅವರು ಸಮಾಜಕ್ಕೆ ನೀಡಿರುವ ಕೊಡುಗೆ ವರ್ಣನೆಗೂ ಮೀರಿದ್ದು ಎಂದು ಬಣ್ಣಿಸಿದರು.
ಬೇಲೂರು ಮತ್ತು ಹಳೇಬೀಡು ದೇವಾಲಯಗಳನ್ನು ನಿರ್ಮಿಸಿದ ಜಕಣಾಚಾರಿ ಹಾಗೂ ಡಂಕಣಾಚಾರಿ ಅವರನ್ನು ಮರೆಯುವಂತಿಲ್ಲ. ಬಂಗಾರದ ಒಡವೆಗಳ ತಯಾರಿಕೆ ಕೂಡ ವಿಶ್ವಕರ್ಮ ಸಮುದಾಯದ ವಿಶೇಷತೆ ಎಂದೇ ಹೇಳಬೇಕು. ಆದ್ದರಿಂದ ವಿಶ್ವಕರ್ಮ ಸಮುದಾಯದ ಶ್ರಮ ಹಾಗೂ ನಿರಂತರ ಕ್ರಿಯಾಶೀಲತೆ ಅವರ ಆದರ್ಶ ಬಿಂಬಿಸುತ್ತದೆ ಎಂದು ಹೇಳಿದರು.
ವಿಶ್ವಕರ್ಮರ ಬಗ್ಗೆ ಹಾಸನದ ಎಚ್.ಕೆ.ಎಸ್. ಕಾಲೇಜಿನ ಕನ್ನಡ ಉಪನ್ಯಾಸಕ ಎಂ.ರಮೇಶ್ ಉಪನ್ಯಾಸ ನೀಡಿ, ‘ವಿಶ್ವಕರ್ಮರಿಗೆ ಕಲೆ ರಕ್ತಗತವಾಗಿ, ವಂಶಪಾರಂಪರ್ಯವಾಗಿ ಕರಗತವಾಗಿದೆ. ಅವರು ದೈವಸಂಭೂತ ಅಂಶಗಳನ್ನು ಹೊಂದಿದ್ದವರು’ ಎಂದು ವರ್ಣಿಸಿದರು.
ತಾಲ್ಲೂಕು ಕಚೇರಿ ಉಪತಹಶೀಲ್ದಾರ್ ರಾಮರಾವ್ ದೇಸಾಯಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ವಿಶ್ವಕರ್ಮ ಸಮಾಜದ ಅಧ್ಯಕ್ಷ ಉಮಾಶಂಕರ್, ಶಿಲ್ಪ ಕಲಾವಿದ ವಿಶ್ವಕರ್ಮ ಆಚಾರ್, ತಾಲ್ಲೂಕು ಘಟಕದ ಅಧ್ಯಕ್ಷ ದಿವಾಕರ್, ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ ಹಾಗೂ ವಿಶ್ವಕರ್ಮ ಸಮಾಜದ ಮುಖಂಡರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.