ADVERTISEMENT

ವಿಧಾನಸಭೆ ಚುನಾವಣೆ: ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ

​ಪ್ರಜಾವಾಣಿ ವಾರ್ತೆ
Published 7 ಜನವರಿ 2023, 4:33 IST
Last Updated 7 ಜನವರಿ 2023, 4:33 IST
ಕೆ.ಎನ್‌.ರಮೇಶ್‌
ಕೆ.ಎನ್‌.ರಮೇಶ್‌   

ಚಿಕ್ಕಮಗಳೂರು: ವಿಧಾನಸಭೆ ಚುನಾವಣೆಗೆ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ನಡೆಸಿ ಅಂತಿಮ ಪಟ್ಟಿಯನ್ನು ಇದೇ 5ರಂದು ಮತಗಟ್ಟೆ, ತಾಲ್ಲೂಕು ಕಚೇರಿ, ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರಕಟಿಸಲಾಗಿದ್ದು, 9,451,51 ಮತದಾರರು ಇದ್ದಾರೆ ಎಂದು ಜಿಲ್ಲಾಧಿಕಾರಿ ಕೆ.ಎನ್‌.ರಮೇಶ್‌ ತಿಳಿಸಿದರು.

ಕಳೆದ ನವೆಂಬರ್‌ 9 ರಂದು ಪ್ರಕಟಿಸಿದ್ದ ಕರಡು ಮತದಾರರ ಪಟ್ಟಿಯಲ್ಲಿ 9,34,769 ಮತದಾರರು ಇದ್ದರು. ಪರಿಷ್ಕರಣೆ (ಸೇರ್ಪಡೆ, ಕೈಬಿಡುವುದು) ಪ್ರಕ್ರಿಯೆ ನಂತರ 10,382ರಷ್ಟು ಮತದಾರರ ಸಂಖ್ಯೆ ಜಾಸ್ತಿಯಾಗಿದೆ. ನಾಮಪತ್ರ ಸಲ್ಲಿಕೆ ದಿನವರೆಗೆ ಸೇರ್ಪಡೆ, ಕೈಬಿಡುವುದು ಇತ್ಯಾದಿಗೆ ಅವಕಾಶ ಇದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಪರಿಷ್ಕರಣೆ ಪ್ರಕ್ರಿಯೆಯಲ್ಲಿ ವಿಶೇಷವಾಗಿ ಯುವ ಮತದಾರರ ನೋಂದಣಿ ಗುರಿಯಾಗಿಸಿಕೊಂಡಿದ್ದೆವು. ಒಟ್ಟು 10,268 ಯುವ ಮತದಾರರು ಇದ್ದಾರೆ. ಈ ಪೈಕಿ ನವೆಂಬರ್‌ ನಂತರ ನಡೆದ ಪರಿಷ್ಕರಣೆ ಪ್ರಕ್ರಿಯೆ 6,154 ಮಂದಿ ಸೇರ್ಪಡೆಯಾದವರು. ಪರಿಷ್ಕರಣೆ ಕಾರ್ಯಕ್ಕೆ ನೇಮಕವಾಗಿದ್ದ ಅಧಿಕಾರಿಗಳು, ಸಿಬ್ಬಂದಿ ಕಾಲೇಜು
ಗಳನ್ನು ಸಂಪರ್ಕಿಸಿ ನೋಂದಣಿ ಮಾಡಿಸಿ
ದ್ದಾರೆ ಎಂದು ವಿವರ ನೀಡಿದರು.

ADVERTISEMENT

ಈಗ ಪ್ರಕಟಿಸಿರುವ ಮತದಾರರ ಪಟ್ಟಿಯನ್ನು ಪರಿಶೀಲಿಸಿ ತಮ್ಮ ಹೆಸರು ಇದೆಯೇ ಎಂಬುದನ್ನು ಮತದಾರರು ಖಾತ್ರಿಪಡಿಸಿಕೊಳ್ಳಬೇಕು. ಮತಗಟ್ಟೆ, ತಾಲ್ಲೂಕು ಕಚೇರಿ, ceokarnataka.kar.nic.in ವೆಬ್‌ಸೈಟ್‌ನಲ್ಲಿ ಪಟ್ಟಿ ಇದೆ. ಪಟ್ಟಿಯಲ್ಲಿ ಹೆಸರು ಕೈಬಿಟ್ಟು ಹೋಗಿದ್ದರೆ, ಹೊಸದಾಗಿ ಸೇರ್ಪಡೆ ಮಾಡಲು ಈಗಲೂ ಅವಕಾಶ ಇದೆ ಎಂದು ಹೇಳಿದರು.

ಕೈಬಿಟ್ಟಿರುವವರ, ಸೇರಿಸಿರುವವರ ಮಾಹಿತಿ ವೆಬ್‌ಸೈಟ್‌ನಲ್ಲಿ ಲಭ್ಯ ಇದೆ. ಡೌನ್‌ಲೋಡ್‌ ಮಾಡಿಕೊಳ್ಳಲು ಅವಕಾಶ ಇದೆ. ಪಕ್ಷಗಳವರು, ಬಿಎಲ್‌ಎಗಳು ಪಟ್ಟಿ ಪರಿಶೀಲಿಸಿ ವಿವರ ಖಾತ್ರಿ ಪಡಿಸಿಕೊಳ್ಳಬೇಕು. ಸಮಸ್ಯೆ ಇದ್ದರೆ ಗಮನಕ್ಕೆ ತರಬೇಕು ಎಂದು ಅವರು ಕೋರಿದರು.

ಜಿಲ್ಲೆಯಲ್ಲಿ ಶೇ 73.29 ಮತದಾರರು ಗುರುತಿನ ಚೀಟಿಗೆ ಆಧಾರ್‌ ಜೋಡಣೆ ಮಾಡಿಸಿದ್ದಾರೆ. ಜಿಲ್ಲೆಯಲ್ಲಿ 8328 ಅಂಗವಿಕಲ ಮತದಾರರು ಇದ್ದಾರೆ. ಅಂಗವಿಕಲರಿಗೆ ಯುಡಿಐಡಿ ಕಾರ್ಡ್‌ ನೀಡಲಾಗಿದೆ, ದಾಖಲೆ ಪರಿಶೀಲಿಸಿ ಪಟ್ಟಿಗೆ ಸೇರಿಸಲಾಗಿದೆ ಎಂದು ತಿಳಿಸಿದರು.

ನೋಂದಾಯಿತ ರಾಜಕೀಯ ಪಕ್ಷಗಳವರ ಸಭೆಯನ್ನು ಇದೇ 7ರಂದು ನಡೆಸಲಾಗುವುದು. ಈ ರಾಜಕೀಯ ಪಕ್ಷಗಳವರಿಗೆ ಮುದ್ರಿತ ಮತ್ತು ಸಾಫ್ಟ್‌ ಪಟ್ಟಿಯನ್ನು ನೀಡುತ್ತೇವೆ. ಅವರು ಪಟ್ಟಿ ಪರಿಶೀಲನೆ ಮಾಡಬಹುದು ಎಂದು ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಕ್ಷೇತ್ರ ವಿಂಗಡಣೆ ಪಟ್ಟಿಯನ್ನು ಪ್ರಕಟಿಸಿ, ಇದೇ 16ರವರೆಗೆ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದೆ. ಜಿಲ್ಲಾ ಪಂಚಾಯಿತಿಗೆ 36, ಹಾಗೂ ತಾಲ್ಲೂಕು ಪಂಚಾಯಿತಿಗೆ 100 ಕ್ಷೇತ್ರ ನಿಗದಿಯಾಗಿದೆ ಎಂದು ಮಾಹಿತಿ ನೀಡಿದರು.

‘ಮತದಾರರ ಪಟ್ಟಿಯಲ್ಲಿ ಹೆಸರಿರಬೇಕು’

ಎಪಿಕ್‌ (ಮತದಾರರ ಗುರುತಿನ ಚೀಟಿ) ಕಾರ್ಡ್‌ ಇದ್ದು, ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ ಮತ ಚಲಾಯಿಸಲು ಆಗುವುದಿಲ್ಲ. ಹೀಗಾಗಿ, ಈಗ ಪ್ರಕಟಿಸಿರುವ ಮತದಾರರ ಪಟ್ಟಿಯಲ್ಲಿ ಹೆಸರು ಇದೆಯೇ ಎಂಬುದನ್ನು ಪ್ರತಿಯೊಬ್ಬ ಮತದಾರ ಕಡ್ಡಾಯವಾಗಿ ಖಾತ್ರಿಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.