ADVERTISEMENT

ನೀರಿಗಾಗಿ ರಾತ್ರಿಯೆಲ್ಲಾ ನಿದ್ದೆಗೆಡಬೇಕೇನ್ರಿ...

ಅಜ್ಜಂಪುರ: ಬಹುತೇಕ ಗ್ರಾಮಗಳಲ್ಲಿ ಮುಂದುವರಿದ ನೀರಿನ ಬವಣೆ

ಜೆ.ಒ.ಉಮೇಶ್ ಕುಮಾರ್
Published 10 ಮೇ 2019, 13:17 IST
Last Updated 10 ಮೇ 2019, 13:17 IST
ಅಜ್ಜಂಪುರ ಸಮೀಪದ ಚನ್ನಾಪುರದಲ್ಲಿ ನೀರಿಗಾಗಿ ನಳವೊಂದರಲ್ಲಿ ಮಹಿಳೆಯರು ನೀರಿಗಾಗಿ ಕೊಡ ಹಿಡಿದು ನಿಂತಿರುವುದು.
ಅಜ್ಜಂಪುರ ಸಮೀಪದ ಚನ್ನಾಪುರದಲ್ಲಿ ನೀರಿಗಾಗಿ ನಳವೊಂದರಲ್ಲಿ ಮಹಿಳೆಯರು ನೀರಿಗಾಗಿ ಕೊಡ ಹಿಡಿದು ನಿಂತಿರುವುದು.   

ಅಜ್ಜಂಪುರ: ತಾಲ್ಲೂಕಿನಲ್ಲಿ ಮಳೆಯ ಸುಳಿವಿಲ್ಲ. ಬಿಸಿಲಿನ ತಾಪ ತಾರಕಕ್ಕೇರಿದೆ. ಕೊಳವೆ ಬಾವಿಗಳು ಬತ್ತಿವೆ. ಹಲವೆಡೆ ಕುಡಿಯುವ ಮತ್ತು ಬಳಸುವ ನೀರಿನ ಕೊರತೆ ಕಾಡುತ್ತಿದೆ.

ಸಮೀಪದ ಬಗ್ಗವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚನ್ನಾಪುರದಲ್ಲಿ ನೀರು ಪೂರೈಸುವ ಬಹುತೇಕ ಕೊಳವೆ ಬಾವಿಗಳು ಬತ್ತಿದ್ದು, ನೀರಿನ ಅಭಾವ ಕಾಣಿಸಿಕೊಂಡಿದೆ. ಐದಾರು ದಿನಗಳಿಗೊಮ್ಮೆ ನೀರು ಪೂರೈಸಲಾಗುತ್ತಿದೆ. ಅದೂ ಅಸಮರ್ಪಕವಾಗಿದ್ದು, ಜನ-ಜಾನುವಾರು ನೀರಿಗೆ ಪರದಾಡುವಂತಾಗಿದೆ.

ಕುಡ್ಲೂರು ಪಂಚಾಯಿತಿ ವ್ಯಾಪ್ತಿಯ ಕೊರಟಿಕೆರೆ, ನಾಗವಂಗಲದಲ್ಲಿ ನೀರಿನ ಸಮಸ್ಯೆ ತಲೆದೋರಿದ್ದರೆ, ಕುಡ್ಲೂರು ಗ್ರಾಮದಲ್ಲಿ ನಿರ್ವ ಹಣೆ ಕೊರತೆಯಿಂದ ನೀರು ಪೂರೈ ಕೆಯಲ್ಲಿ ವ್ಯತ್ಯಯ ಉಂಟಾಗಿದೆ. ನೀರಿಗಾಗಿ ತೋಟಗಳ ಕೊಳವೆ ಬಾವಿಯತ್ತ ಮುಖ ಮಾಡುವಂತಾಗಿದೆ. ಒಂದು ಕಡೆ ಒವರ್ ಹೆಡ್ ಟ್ಯಾಂಕ್ ತುಂಬಿ ನೀರು ಪೋಲಾದರೆ, ಮತ್ತೊಂದು ಕಡೆ ನೀರು ಪೂರೈಕೆ ಇಲ್ಲವಾಗಿದೆ.

ADVERTISEMENT

ಕೋರನಹಳ್ಳಿ ಸಮೀಪದ ಸಾವೇಮರಡಿ ಗ್ರಾಮವೂ ಕುಡಿಯುವ ನೀರಿನ ಸಮಸ್ಯೆಯಿಂದ ಮುಕ್ತವಾಗಿಲ್ಲ. ಇಲ್ಲಿನ ಬಹುತೇಕ ಕುಟುಂಬಗಳಿಗೆ ಸಾರ್ವಜನಿಕ ನಳವಾಗಲೀ, ವೈಯಕ್ತಿಕ ನಳಗಳನ್ನು ಪಂಚಾಯಿತಿ ವ್ಯವಸ್ಥೆಗೊಳಿಸಿಲ್ಲ. ಹೀಗಾಗಿ ಜನರು ನೀರಿಗಾಗಿ ತೋಟದ ಕೊಳವೆಬಾವಿಗಳನ್ನು ಆಶ್ರಯಿಸಿದ್ದಾರೆ. ಬಿರು-ಬಿಸಿಲಿನ ನಡುವೆಯೂ ಮಕ್ಕಳು, ವಯೋವೃದ್ದರೆನ್ನದೇ ತೋಟಗಳಿಂದ ಬಿಂದಿಗೆಯಲ್ಲಿ ನೀರನ್ನು ಹೊತ್ತು ತರುವಂತಾಗಿದೆ.

ಗಡೀಹಳ್ಳಿ ಪಂಚಾಯಿತಿ ವ್ಯಾಪ್ತಿಯ ನಂದೀಪುರ ಕಾಲೊನಿ ಮತ್ತು ಅರೆಕಲ್ಲಮ್ಮ ದೇವಾಲಯ ಬೀದಿಯ ಹಲವು ಕುಟುಂಬಗಳು ನೀರು ಪೂರೈಕೆಯಿಲ್ಲದೇ ಬಳಲುತ್ತಿವೆ. ಬೇಗೂರು ಪಂಚಾಯಿತಿ ಅರಬಲ, ಅರಬಲ ಗೊಲ್ಲರಹಟ್ಟಿ, ಭೂತನಹಳ್ಳಿ ಗ್ರಾಮಗಳ ಜನರು ನೀರಿಗಾಗಿ ಕೈಪಂಪು ಹಾಗೂ ತೆರೆದ ಬಾವಿಗಳ ಮೊರೆಹೋಗುವಂತಾಗಿದೆ.

ಅಜ್ಜಂಪುರದ ಕೆಲವು ರಸ್ತೆಗಳಲ್ಲಿ ಏಳೆಂಟು ದಿನಗಳಿಗೊಮ್ಮೆ ನೀರು ಪೂರೈಸಲಾಗುತ್ತಿದೆ. ನೀರು ಪೂರೈಕೆಯಲ್ಲಿ ಅಂತರವಿದ್ದರೂ, ಸಮರ್ಪಕವಾಗಿ ನೀರು ಪೂರೈಸುತ್ತಿರುವುದು ನಿವಾಸಿಗಳಿಗೆ ಕೊಂಚ ಮಟ್ಟಿನ ಸಮಾಧಾನ ತರಿಸಿದೆ. ಆದರೆ, ನೀರು ಸಂಗ್ರಹ ಮಾಡಿಕೊಳ್ಳಲು ತೊಟ್ಟಿಗಳಿಲ್ಲದವರು ನೀರಿಗಾಗಿ ಪರದಾಡುವುದು ಮುಂದುವರಿದಿದೆ.

‘ನೀರು ಪೂರೈಕೆಯಲ್ಲಿ ವ್ಯತ್ಯಯ ಇದೆ. ನೀರಿದ್ದರೂ, ನೀರುಗಂಟಿಗಳು ಸರಿಯಾಗಿ ನೀರು ಪೂರೈಸುತ್ತಿಲ್ಲ. ಬಹುತೇಕ ಬೀದಿಗಳಿಗೆ ರಾತ್ರಿ ವೇಳೆ ನೀರು ಪೂರೈಸುತ್ತಿದ್ದಾರೆ. ರಾತ್ರಿಯೆಲ್ಲಾ ನೀರಿಗಾಗಿ ನಿದ್ದೆಗೆಡುವಂತಾಗಿದೆ. ಒವರೆಹೆಡ್ ಟ್ಯಾಂಕ್‌ಗೆ ನೀರು ತುಂಬಿಸಿ, ಬಳಿಕ ನೀರು ಪೂರೈಸುವಂತೆ ಹಿರಿಯ ಅಧಿಕಾರಿಗಳು ನಿರ್ದೇಶನ ನೀಡಬೇಕು’ ಎಂದು ಸಮೀಪದ ನಾರಣಾಪುರದ ನಿವಾಸಿ ಮಹಾಂತೇಶ್ ಆಗ್ರಹಿಸಿದ್ದಾರೆ.

‘ನೀರಿನ ಸಮಸ್ಯೆಯಿದ್ದ ಅನುವನಹಳ್ಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ನೀರಿನ ಕೊರತೆ ಬಗ್ಗೆ ಸ್ಥಳೀಯ ಅಧಿಕಾರಿಗಳಿಂದ ಕೋರಿಕೆ ಬಂದಲ್ಲಿ, ಟಾಸ್ಕ್ ಫೋರ್ಸ್ ಅಡಿಯಲ್ಲಿ ಟ್ಯಾಂಕರ್ ನೀರಿನ ವ್ಯವಸ್ಥೆ ಮಾಡಲಾಗುವುದು’ ಎಂದು ತಾಲ್ಲೂಕು ಪಂಚಾಯಿತಿ ಇಒ ವಿಶಾಲಾಕ್ಷಮ್ಮ ತಿಳಿಸಿದ್ದಾರೆ.

ತಾಲ್ಲೂಕು ಮತ್ತು ಸ್ಥಳೀಯ ಪಂಚಾಯಿತಿಗಳು, ನೀರು ಪೂರೈಕೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿಲ್ಲ. ಹಾಗಾಗಿಯೇ ಹಲವು ಗ್ರಾಮಗಳು ನೀರಿನ ಬವಣೆಯಿಂದ ದೂರವಾಗಿಲ್ಲ ಎಂಬುದು ಸಾರ್ವಜನಿಕರ ಆರೋಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.