ಕೊಪ್ಪ: ‘ಅಂತರಂಗದಲ್ಲಿ ಏಕತೆ ಇದ್ದಾಗ ಮಾತ್ರ ಸಮಾನತೆ ಜಾಗೃತವಾಗಿರುತ್ತದೆ’ ಎಂದು ಹರಿಹರಪುರ ಮಠದ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ಮಠದಲ್ಲಿ ಏ. 12ರವರೆಗೆ ಆಯೋಜಿಸಿರುವ ಬ್ರಹ್ಮೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ‘ಸಾಮರಸ್ಯ ಮತ್ತು ಸಮಾಜದ ಹಿತ ಬ್ರಹ್ಮೋತ್ಸವ ಸಂಕಲ್ಪ. ಸಾಮರಸ್ಯ ಇದ್ದಾಗ ಸಮಾಜದ ಹಿತ ಇರುತ್ತದೆ. ಮಾತು ಮಾತಿಗೆ ಏಕತೆ ಎನ್ನುತ್ತೇವೆ. ಆದರೆ, ಮಾತಿಗೆ ಮಾತ್ರ ಸೀಮಿತವಾಗಿದೆ’ ಎಂದರು.
‘ದೇಶದ ಸಂಸ್ಕೃತಿ ವಿಶ್ವ ಸಾಮರಸ್ಯಕ್ಕೆ, ವಿಶ್ವ ಶಾಂತಿಗೆ ಮೂಲಾಧಾರವಾಗಿದೆ. ಎಲ್ಲಿ ವೈವಿಧ್ಯವನ್ನು ಒಪ್ಪಿಕೊಳ್ಳುವ ವಿಶಾಲ ದೃಷ್ಟಿಕೋನ ಇರುತ್ತದೆಯೋ ಅಲ್ಲಿ ಸಾಮರಸ್ಯ ಇರುತ್ತದೆ. ಸಮಾಜದಲ್ಲಿ ಸಾಮರಸ್ಯ ಬೆಳೆಯಬೇಕಾದರೆ, ಎಲ್ಲರೊಂದಿಗೆ ಸೇರಿ ಜೀವಿಸಬೇಕು. ಭಾರತೀಯ ಸಂಸ್ಕೃತಿ ಸಾರವೇ ವೈವಿಧ್ಯದಿಂದ ಕೂಡಿದೆ’ ಎಂದು ತಿಳಿಸಿದರು.
‘ಒಬ್ಬ ಅವತಾರ ಪುರುಷ, ಆಚಾರ್ಯ, ಗುರುವಿನಿಂದ, ಒಬ್ಬ ಮಹಾತ್ಮನಿಂದ ಭಾರತೀಯ ಸಂಸ್ಕೃತಿ ಕಾಪಾಡಲು ಸಾಧ್ಯವಿಲ್ಲ. ಏಕತೆಯನ್ನು ಬಲಪಡಿಸುವ ಒಕ್ಕೂಟ ವ್ಯವಸ್ಥೆಯಿಂದ ಸಂಸ್ಕೃತಿ ರಕ್ಷಿಸಲ್ಪಡುತ್ತದೆ. ಸಂತರು ಒಂದಾದರೆ ಮಾತ್ರ ಸಮಾಜ ಒಂದಾಗುತ್ತದೆ. ಭಾರತೀಯ ಸಂಸ್ಕೃತಿಯ ಮಹೋನ್ನತಿ ಬ್ರಹ್ಮೋತ್ಸವದ ಸಂಕಲ್ಪವಾಗಿದೆ ಎಂದು ಹೇಳಿದರು.
ಆನೆಗುಂದಿ ಮಹಾ ಸಂಸ್ಥಾನ ಪೀಠದ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ, ವನಕಲ್ಲು ಮಲ್ಲೇಶ್ವರ ಮಹಾ ಸಂಸ್ಥಾನ ಮಠದ ಬಸವರಾಮಾನಂದ ಸ್ವಾಮೀಜಿ, ವೇದಾಂತ ವಿದ್ವಾಂಸ ಪ್ರೊ. ಶಿವರಾಮ್ ಅಗ್ನಿಹೋತ್ರಿ, ವಾಸ್ತು ತಜ್ಞ ರಮಾನಂದ ಗುರೂಜಿ, ಮಠದ ಆಡಳಿತಾಧಿಕಾರಿ ಚಂದ್ರನ್, ಹಿಂದೂ ಜನಜಾಗೃತಿ ವೇದಿಕೆ ರಾಜ್ಯಾಧ್ಯಕ್ಷ ಮೋಹನ್ ಗೌಡ, ಅರಳುಮಲ್ಲಿಗೆ ಪಾರ್ಥಸಾರಥಿ, ತಾಲ್ಲೂಕು ವಿಶ್ವಕರ್ಮ ಸಂಘದ ನವೀನ್, ಬ್ರಾಹ್ಮಣ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ ಕೆಸಕೊಡಿಗೆ, ಬ್ರಹ್ಮೋತ್ಸವ ಸ್ವಾಗತ ಸಮಿತಿ ಅಧ್ಯಕ್ಷ ಎಸ್.ಎನ್. ರಾಮಸ್ವಾಮಿ ಇದ್ದರು.
ನೋಂದಣಿ ಕಾರ್ಯಕ್ಕೆ ಚಾಲನೆ
ಬ್ರಹ್ಮೋತ್ಸವ ಪ್ರಯುಕ್ತ ಮಠದ ಆವರಣದಲ್ಲಿ ಆಯೋಜಿಸಿರುವ ಕೃಷಿ ಮತ್ತು ಮಲೆನಾಡು ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮೇಳದಲ್ಲಿ ಮಲೆನಾಡಿನ ವಿಶೇಷ ವಸ್ತುಗಳು ಗಮನ ಸೆಳೆದವು. ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟಕ್ಕೆ ವ್ಯಾಪಾರಸ್ಥರು ಸಿದ್ಧತೆ ಮಾಡಿಕೊಂಡಿದ್ದರು. ವಿವಿಧ ಕಂಪನಿಗಳ ವಾಹನಗಳ ಪ್ರದರ್ಶನ ಸಹಿತ ಖರೀದಿಗೆ ನೋಂದಣಿ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.