ADVERTISEMENT

ಮೂಡಿಗೆರೆ | ಕಾಡುಕೋಣ ಶಿಕಾರಿ: ಆರು ಜನರ ಬಂಧನ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2025, 4:49 IST
Last Updated 9 ನವೆಂಬರ್ 2025, 4:49 IST
ಮೂಡಿಗೆರೆ ತಾಲ್ಲೂಕಿನ ನಿಡುವಾಳೆ ಗ್ರಾಮದ ಸೇಂಟ್ ಮೇರಿಸ್ ಕಲ್ಮನೆ ಎಸ್ಟೇಟಿನಲ್ಲಿ ನಡೆದ ಶಿಕಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿ ಆರೋಪಗಳನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ
ಮೂಡಿಗೆರೆ ತಾಲ್ಲೂಕಿನ ನಿಡುವಾಳೆ ಗ್ರಾಮದ ಸೇಂಟ್ ಮೇರಿಸ್ ಕಲ್ಮನೆ ಎಸ್ಟೇಟಿನಲ್ಲಿ ನಡೆದ ಶಿಕಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿ ಆರೋಪಗಳನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ   

ಮೂಡಿಗೆರೆ: ಕಾಫಿ ಎಸ್ಟೇಟ್‌ನಲ್ಲಿ ಮಾಂಸಕ್ಕಾಗಿ ಕಾಡುಕೋಣ ಶಿಕಾರಿ ಮಾಡಿದ ಆರೋಪದಡಿ ಎಸ್ಟೇಟ್ ವ್ಯವಸ್ಥಾಪಕ ಸೇರಿ ಆರು ಮಂದಿಯನ್ನು ಬಂಧಿಸಿದ ಘಟನೆ ತಾಲ್ಲೂಕಿನ ನಿಡುವಾಳೆ ಗ್ರಾಮದ ಸೇಂಟ್ ಮೇರಿಸ್ ಕಲ್ಮನೆ ಎಸ್ಟೇಟಿನಲ್ಲಿ ನಡೆದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮೂಡಿಗೆರೆ ವಲಯ ಅರಣ್ಯಾಧಿಕಾರಿ ಕಚೇರಿಯಿಂದ ಪತ್ರಿಕಾ ಹೇಳಿಕೆ ನೀಡಿದ್ದು, ವಲಯ ಅರಣ್ಯಾಧಿಕಾರಿಗೆ ಶುಕ್ರವಾರ ಬೆಳಿಗ್ಗೆ ತಾಲ್ಲೂಕಿನ ಭಾರತೀಬೈಲ್ ಅರಣ್ಯ ವ್ಯಾಪ್ತಿಯ ಬಾಳೂರು ಗ್ರಾಮದ ಮಂಜಯ್ಯ ಎಂಬುವರ ಮನೆಯಲ್ಲಿ ಕಾಡು ಪ್ರಾಣಿಯ ಮಾಂಸವನ್ನು ಶೇಖರಿಸಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ, ಅವರ ಮನೆಯನ್ನು ತಪಾಸಣೆ ಮಾಡಲಾಗಿದೆ.

ತಪಾಸಣೆ ವೇಳೆ 1 ಕೆ.ಜಿ.ಯಷ್ಟು ಅರೆ ಬೇಯಿಸಿದ ಮಾಂಸವಿರುವುದು ಕಂಡು ಬಂದಿದ್ದು, ಅದನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಕಾಡುಪ್ರಾಣಿಯ ಮಾಂಸವೆಂದು ಖಚಿತವಾಗಿದೆ. ಕೂಡಲೇ ಮಂಜಯ್ಯ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅದು ಕಾಡುಕೋಣದ ಮಾಂಸವಾಗಿದ್ದು, ಅದನ್ನು ನಿಡುವಾಳೆ ಗ್ರಾಮದ ಸೇಂಟ್ ಮೇರಿಸ್ ಕಲ್ಮನೆ ಎಸ್ಟೇಟ್ ಮರ್ಕಲ್‌ನಲ್ಲಿ ಬೇಟೆಯಾಡಿ ಮಾಂಸವನ್ನು ಮಾಡಿರುವುದಾಗಿ ಮಂಜಯ್ಯ ಮಾಹಿತಿ ನೀಡಿದ್ದಾರೆ. ಕಾಡುಕೋಣವನ್ನು ಜೀವನ್ ಎಂಬುವರು ಕಲ್ಮನೆ ಎಸ್ಟೇಟ್ ಮಾಲೀಕತ್ವದ ಡಿ.ಬಿ.ಬಿ.ಎಲ್. ಬಂದೂಕಿನಿಂದ ಗುಂಡಿಕ್ಕಿದ್ದು, ಅದನ್ನು ಮಾಂಸವನ್ನು ಮಾಡಿ ಎಲ್ಲರು ಹಂಚಿಕೊಂಡಿರುವುದಾಗಿ ತಿಳಿಸಿದ್ದಾರೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಆರೋಪಿಯು ನೀಡಿದ ಮಾಹಿತಿಯಂತೆ ಮರ್ಕಲ್ ಬಳಿಯ ಕೆರೆಯಲ್ಲಿ ಪರಿಶೀಲಿಸಿದಾಗ ಕಾಡುಕೋಣದ ತಲೆಬುರುಡೆ ಪತ್ತೆಯಾಗಿದ್ದು, ಮಾಂಸ, ತಲೆಬುರುಡೆ ಹಾಗೂ ಬಂದೂಕನ್ನು ವಶಪಡಿಸಿಕೊಂಡು, ಕಲ್ಮನೆ ಎಸ್ಟೇಟ್ ಫೀಲ್ಡ್ ಆಫೀಸರ್ ಕೊಪ್ಪ ತಾಲ್ಲೂಕಿನ ನುಗ್ಗಿ ಗ್ರಾಮದ ರವೀಶ್ ಬಿ.ಎಸ್., ತೋಟದ ರೈಟರ್ ಎನ್.ಆರ್.ಪುರ ತಾಲ್ಲೂಕಿನ ಕರ್ಕೇಶ್ವರದ ಪ್ರದೀಪ್, ಎಸ್ಟೇಟ್ ಮೇಸ್ತ್ರಿಗಳಾದ ನಿಡುವಾಳೆ ಗ್ರಾಮದ ದೇಜಪ್ಪ, ನಿಡುವಾಳೆ ಗ್ರಾಮದ ಕಾಡಿನಕೊಂಡದ ಸೀನ, ಎಸ್ಟೇಟಿನ ವಾಹನ ಚಾಲಕ ಬಾಳೂರಿನ ಮಂಜಯ್ಯ, ಕಾರ್ಮಿಕ ನಿಡುವಾಳೆ ಗ್ರಾಮದ ಸುಂದರ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

ಬಾಳೂರು ಗ್ರಾಮದ ಸುಂದರೇಶ್, ದಿಲೀಪ್, ಕೊಪ್ಪ ತಾಲ್ಲೂಕಿನ ನುಗ್ಗಿ ಗ್ರಾಮದ ಜೀವನ್ ಹಾಗೂ ಎಸ್ಟೇಟ್ ಮಾಲೀಕ ಧೀರಜ್ ಪ್ರಭು ಎಂಬ ನಾಲ್ಕು ಆರೋಪಿಗಳು ತಲೆ ಮರೆಸಿಕೊಂಡಿದ್ದು, ಶೋಧ‌ಕಾರ್ಯ ನಡೆಸಲಾಗುತ್ತಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ಅರಣ್ಯ ಸಂರಕ್ಷಣಾಧಿಕಾರಿ ಯಶ್‌ಪಾಲ್ ಕ್ಷೀರಸಾಗರ, ಉಪ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್ ಬಾಬು ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಆಕರ್ಷ್ ಟಿ.ಎಂ. ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ಜಿ. ಮಂಜುನಾಥ ನೇತೃತ್ವದಲ್ಲಿ ಉಪವಲಯ ಅರಣ್ಯಾಧಿಕಾರಿ ಸುಹಾಸ್ ಕೆ.ಟಿ, ಗಸ್ತು ಅರಣ್ಯಪಾಲಕರಾದ ರಘು ಎಸ್.ಆರ್., ಉಮೇಶ್ ಎ.ಬಿ, ಲಕ್ಷ್ಮಣ್ ಬಿ.ಎಂ, ಸಿಬ್ಬಂದಿಗಳಾದ ಸುಮಂತ್, ನವರಾಜ್, ಸುಧೀರ್, ಕೃಷ್ಣಮೂರ್ತಿ, ಗಿರೀಶ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.