ಮೂಡಿಗೆರೆ ತಾಲ್ಲೂಕಿನ ಬಣಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾಡುಕೋಣ ದಾಳಿಯಿಂದ ಗಾಯಗೊಂಡ ಕುಮಾರ್ ಅವರಿಗೆ ಚಿಕಿತ್ಸೆ ನೀಡಲಾಯಿತು
ಮೂಡಿಗೆರೆ: ತಾಲ್ಲೂಕಿನ ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಮತ್ತಿಕಟ್ಟೆ ಗ್ರಾಮದ ರಸ್ತೆಯಲ್ಲಿ ಬುಧವಾರ ರಾತ್ರಿ ಬೈಕ್‌ನಲ್ಲಿ ತೆರಳುತ್ತಿದ್ದ ಬೈಕ್ ಸವಾರನ ಮೇಲೆ ಕಾಡುಕೋಣ ದಾಳಿ ನಡೆಸಿ ಗಾಯಗೊಳಿಸಿದೆ.
ಮತ್ತಿಕಟ್ಟೆ ಗ್ರಾಮದ ಕುಮಾರ್ ಗಾಯಗೊಂಡವರು. ಬಣಕಲ್ ಪಟ್ಟಣದಿಂದ ಮತ್ತಿಕಟ್ಟೆ ಗ್ರಾಮಕ್ಕೆ ರಾತ್ರಿ 7ರ ಸುಮಾರಿಗೆ ತೆರಳುತ್ತಿದ್ದಾಗ ನಾಲ್ಕೈದು ಕಾಡು ಕೋಣಗಳು ಅರಣ್ಯ ಪ್ರದೇಶದಿಂದ ಕಾಫಿತೋಟಗಳತ್ತ ತೆರಳಲು ಹೊರ ಬಂದಿವೆ. ಈ ವೇಳೆ ಒಂದು ಕೋಣ ಬೈಕಿನಲ್ಲಿದ್ದ ಕುಮಾರ್ ಅವರ ಮೇಲೆ ದಾಳಿ ನಡೆಸಿದೆ. ಕುಮಾರ್ ಗಾಯಗೊಂಡು ಬಿದ್ದಿದ್ದು, ಸ್ಥಳೀಯರು ಬಣಕಲ್ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಕಾಡಾನೆಗಳ ದಾಳಿಯಿಂದ ತತ್ತರಿಸಿದ್ದ ಗ್ರಾಮಸ್ಥರಿಗೆ ಇದೀಗ ಕಾಡುಕೋಣಗಳು ಗುಂಪಾಗಿ ದಾಳಿ ಮಾಡುತ್ತಿರುವುದು ನುಂಗಲಾರದ ತುತ್ತಾಗಿದೆ. ಮತ್ತಿಕಟ್ಟೆ, ಹೆಗ್ಗುಡ್ಲು, ಬಸನಿ ಗ್ರಾಮಗಳ ಸುತ್ತಮುತ್ತಲ ಪ್ರದೇಶಗಳಲ್ಲಿ ಕಾಡುಕೋಣಗಳು ಬೆಳೆಹಾನಿ ಮಾಡುತಿದ್ದು, ಅರಣ್ಯ ಇಲಾಖೆಯು ಕಾಡುಕೋಣಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕುʼ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.