ಬಾಳೆಹೊನ್ನೂರು(ಚಿಕ್ಕಮಗಳೂರು): ನಾಲ್ಕು ದಿನಗಳ ಅಂತರದಲ್ಲಿ ಕಾಡಾನೆ ದಾಳಿಯಿಂದ ಇಬ್ಬರು ಮೃತಪಟ್ಟ ಬಳಿಕ ಅರಣ್ಯ ಇಲಾಖೆ ಆರಂಭಿಸಿದ್ದ ಕಾರ್ಯಾಚರಣೆಯಲ್ಲಿ ಮೊದಲ ದಿನವೇ ಪುಂಡಾನೆಯೊಂದು ಸೆರೆ ಸಿಕ್ಕಿದೆ.
ಎನ್.ಆರ್.ಪುರ ತಾಲ್ಲೂಕಿನ ಎಲೆಕಲ್ಲು ಬಳಿ ಸುಮಾರು 14 ವರ್ಷ ವಯಸ್ಸಿನ ಗಂಡಾನೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ನಾಲ್ಕು ಸಾಕಾನೆಗಳು ನೆರವಿನೊಂದಿಗೆ ಕಾರ್ಯಾಚರಣೆ ಆರಂಭಿಸಲಾಗಿತ್ತು.
ಅರಿವಳಿಕೆ ಚುಚ್ಚುಮದ್ದು ನೀಡಿದ ಬಳಿಕ ಆನೆ ಕಾಡಿನಲ್ಲಿ ಇಳಿಜಾರಿನ ಕಣಿವೆಯೊಳಗೆ ಓಡಿ ಬಿದ್ದಿತ್ತು. ಎಚ್ಚರಗೊಳ್ಳುವಷ್ಟರಲ್ಲಿ ಹಗ್ಗದಿಂದ ಬಿಗಿಯಲಾಗಿದೆ. ರಸ್ತೆಗೆ ಕರೆ ತರಲು ಸಾಕಾನೆಗಳು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಹೈರಾಣಾದರು. ಚಿಕ್ಕಮಗಳೂರು ವೃತ್ತದ ಸಿಸಿಎಫ್ ಯಶಪಾಲ್ ಕ್ಷೀರಸಾಗರ ಸ್ಥಳದಲ್ಲಿದ್ದು, ಕಾರ್ಯಾಚರಣೆಯ ನೇತೃತ್ವ ವಹಿಸಿದ್ದರು.
ಆನೆ ಸೆರೆ ಸಿಕ್ಕಿರುವ ಸುತ್ತಮುತ್ತಲ ಪ್ರದೇಶದಲ್ಲೇ ನಾಲ್ಕು ದಿನಗಳ ಅಂತರದಲ್ಲಿ ಇಬ್ಬರು ಆನೆ ದಾಳಿಗೆ ಮೃತಪಟ್ಟಿದ್ದರು. ಇದರಿಂದ ರೊಚ್ಚಿಗೆದ್ದಿದ್ದ ಸ್ಥಳೀಯರು ಸೋಮವಾರ ಬಾಳೆಹೊನ್ನೂರಿನಲ್ಲಿ ಬಂದ್ ನಡೆಸಿದ್ದರು. ಆನೆ ಸೆರೆ ಕಾರ್ಯಾಚರಣೆ ಆರಂಭಿಸುವ ತನಕ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ಸಕ್ರೈಬೈಲು ಆನೆ ಶಿಬಿರದಿಂದ ಸೋಮವಾರ ಮಧ್ಯಾಹ್ನದ ವೇಳೆಗೆ ಸಾಕಾನೆಗಳು ಬಂದ ಬಳಿಕ ಪ್ರತಿಭಟನೆ ಕೈಬಿಟ್ಟಿದ್ದರು.
‘ನಾಳೆ ಕಾರ್ಯಾಚರಣೆಗೆ ವಿಶ್ರಾಂತಿ ನೀಡಲಾಗುವುದು. ಪಿಸಿಸಿಎಫ್ ಅವರಿಂದ ಮತ್ತೊಮ್ಮೆ ಅನುಮತಿ ಪಡೆದು ಮತ್ತೊಂದು ಪುಂಡಾನೆ ಸೆರೆ ಹಿಡಿಯುವ ಕಾರ್ಯಾಚರಣೆ ಗುರುವಾರ ಆರಂಭವಾಗಲಿದೆ. ಸೆರೆ ಸಿಕ್ಕಿರುವ ಮರಿಯಾನೆಯನ್ನು ಸಕ್ರೆಬೈಲು ಕ್ಯಾಂಪ್‌ನಲ್ಲಿ ಪಳಗಿಸಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ’ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.