ADVERTISEMENT

ಕೊಪ್ಪ: ಬೆಳೆ ಹಾನಿ ಮಾಡಿದ ಕಾಡಾನೆ

​ಪ್ರಜಾವಾಣಿ ವಾರ್ತೆ
Published 27 ಜುಲೈ 2025, 5:11 IST
Last Updated 27 ಜುಲೈ 2025, 5:11 IST
ಕೊಪ್ಪದ ಕುಂಚೂರು ಗ್ರಾಮದಲ್ಲಿ ರೈತರು ನಾಟಿ ಮಾಡಲು ಸಿದ್ಧಪಡಿಸಿದ್ದ ಭತ್ತದ ಸಸಿಯನ್ನು ಕಾಡಾನೆ ತುಳಿದಿರುವುದು
ಕೊಪ್ಪದ ಕುಂಚೂರು ಗ್ರಾಮದಲ್ಲಿ ರೈತರು ನಾಟಿ ಮಾಡಲು ಸಿದ್ಧಪಡಿಸಿದ್ದ ಭತ್ತದ ಸಸಿಯನ್ನು ಕಾಡಾನೆ ತುಳಿದಿರುವುದು   

ಕೊಪ್ಪ: ಕಳೆದೊಂದು ವಾರದಿಂದ ಜನವಸತಿ ಪ್ರದೇಶದಲ್ಲಿ ಸಂಚರಿಸಿ, ಆತಂಕ ಸೃಷ್ಟಿಸಿರುವ ಕಾಡಾನೆ ಶುಕ್ರವಾರ ನರಸೀಪುರ ಗ್ರಾ.ಪಂ. ವ್ಯಾಪ್ತಿಯ ಕುಂಚೂರಿನ ಜಮೀನಿಗೆ ನುಗ್ಗಿ ಅಡಿಕೆ, ಬಾಳೆಗೆ ಹಾನಿ ಮಾಡಿದೆ. ಜೊತೆಗೆ ನಾಟಿ‌ ಮಾಡಲು ಅಗಡಿಯಲ್ಲಿ ಸಿದ್ಧಪಡಿಸಿದ್ದ ಭತ್ತದ ಸಸಿಗಳನ್ನು ತುಳಿದು ಹಾಕಿದೆ.

ಕಳಸಾಪುರ, ಜಾರ್ಗಲ್, ಅಂದಗಾರು ಭಾಗದಲ್ಲಿ ಕಾಣಿಸಿಕೊಂಡಿದ್ದ ಕಾಡಾನೆ ಕ್ರಮೇಣ ಪಟ್ಟಣಕ್ಕೆ ಹತ್ತಿರದಲ್ಲಿ ಎನ್.ಕೆ.ರಸ್ತೆ ಬಳಿ ಬಂದು ಕುಂಚೂರು ಘಾಟಿ ಇಳಿದು ತೋಟ–ಗದ್ದೆಯಲ್ಲಿ ಓಡಾಡಿ ಬೆಳೆ ಹಾನಿ ಮಾಡಿತ್ತು. ಗುಡ್ಡ ಪ್ರದೇಶ ಹತ್ತಲಾಗದೆ ಹಾದಿ ಬದಲಾಯಿಸಿ ಮತ್ತೆ ಘಾಟಿ ಪ್ರದೇಶ ಏರಿ, ಶನಿವಾರ ಬೆಳಿಗ್ಗೆ ಮರಿತೊಟ್ಟಿಲು ಭಾಗಕ್ಕೆ ಬಂದು ಅಲ್ಲಿಂದ ವಾಪಸ್‌ ಹೆಜ್ಜೆ ಹಾಕಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ವಾರದ ಹಿಂದೆ ಕಾಣಿಸಿಕೊಂಡಿದ್ದ ಆನೆ ಮರಿತೊಟ್ಟಿಲು, ಕುಂಚೂರು ಗ್ರಾಮದಲ್ಲಿ ಓಡಾಡುತ್ತ ರೈತರ ಜಮೀನುಗಳಿಗೆ ನುಗ್ಗಿ ಬೆಳೆ ಹಾನಿ ಮಾಡಿದ್ದು, ಈ ದಿನ ಮರಿತೊಟ್ಟಿಲು ಸೂರ್ಯಸ್ತಮಾನ ವೀಕ್ಷಣಾ ಗೋಪುರ ಸಮೀಪ ಮೇಲಿನ ಓಣಿತೋಟ (ಅಂಚೆಕಟ್ಟೆ) ಸುತ್ತಮುತ್ತ ಸಂಚರಿಸುತ್ತಿದೆ. ವಲಯ ಅರಣ್ಯಾಧಿಕಾರಿಗೆ ವಿಷಯ ತಿಳಿಸಿದರೆ ಫಾರೆಸ್ಟರ್, ಗಾರ್ಡ್, ವಾಚ್‌ಮ್ಯಾನ್‌ಗಳನ್ನು ಜೀಪಿನೊಂದಿಗೆ ಕಳುಹಿಸಿದ್ದಾರೆ. ಅವರು ಮುಖ್ಯರಸ್ತೆಯಲ್ಲಿ ಜೀಪ್ ನಿಲ್ಲಿಸಿ, ಕಾಲಹರಣ ಮಾಡುತ್ತಿದ್ದಾರೆಯೇ ಹೊರತು ರೈತರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಎಂದು ಮರಿತೊಟ್ಟಿಲು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

ADVERTISEMENT

ಅಧಿಕಾರಿಗಳು ಆನೆಗಳ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳದೆ, ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ವಲಯ ಅರಣ್ಯಾಧಿಕಾರಿ ಕೊಡಲೇ ಇದನ್ನು ಗಮನಿಸಿ, ರೈತರಿಗೆ ನ್ಯಾಯ ಕೊಡುವ ದೃಷ್ಟಿಯಿಂದ ಅವರನ್ನು ಅಮಾನತುಗೊಳಿಸಬೇಕು. ಇಲ್ಲವಾದಲ್ಲಿ ರೈತರು ಅರಣ್ಯ ಇಲಾಖೆ ಎದುರು ಪ್ರತಿಭಟನೆ ಕೈಗೊಳ್ಳಲಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.

ಕುಂಚೂರು ಕಡೆಗೆ ಬಂದಿದ್ದ ಕಾಡಾನೆ ಮರಳಿ ಅಂದಗಾರು ಕಡೆಗೆ ಹೋಗಿದ್ದು, ಬಂದ ಹಾದಿಯಲ್ಲಿ ವಾಪಾಸ್ ಹೋಗುತ್ತಿದೆ. ಇನ್ನೆರಡು ದಿನಗಳಲ್ಲಿ ಅದು ಭದ್ರ ವನ್ಯಜೀವಿ ವಲಯದತ್ತ ತೆರಳಲಿದೆ. ರೈತರಿಗೆ ಬೆಳೆ ಹಾನಿ ಪರಿಹಾರ ಕಲ್ಪಿಸಿ ಕೊಡಲಾಗುವುದು ಎಂದು ಕೊಪ್ಪ ವಲಯ ಅರಣ್ಯಾಧಿಕಾರಿ ರಂಗನಾಥ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.