ನರಸಿಂಹರಾಜಪುರ: ಮೆಣಸೂರು ಗ್ರಾ.ಪಂಯ ದ್ವಾರಮಕ್ಕಿ, ಕೋಟೆಬೈಲು, ಗುಡ್ಡದಮನೆಯಲ್ಲಿ ಕಳೆದ 3 ತಿಂಗಳಿಂದ ಒಂಟಿ ಸಲಗ ಬೀಡು ಬಿಟ್ಟಿದ್ದು ರಾತ್ರಿ ವೇಳೆ ಅಡಿಕೆ, ತೋಟ, ಬಾಳೆ ತೋಟ, ತೆಂಗಿನ ಗಿಡ, ಕಾಫಿ ಗಿಡಗಳನ್ನು ನಾಶ ಮಾಡುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಕಳೆದ ಒಂದು ವಾರದಿಂದ ಕೋಟೆಬೈಲು ಸೀತಾರಾಮ, ಕೆ.ಪಿ.ಬಾಬು, ಗುಡ್ಡದಮನೆಯ ಶೇಖರ, ಕೃಷ್ಣಮೂರ್ತಿ, ದ್ವಾರಮಕ್ಕಿಯ ಡಿ.ಎಲ್.ವೆಂಕಟೇಶ, ಭವಾನಿ ಶಂಕರ, ಎಲ್.ಎಂ.ಸತೀಶ್, ಎಲ್.ಸಿ.ಶ್ರೀಧರ, ಜಿ.ಆರ್.ದಿವಾಕರ್, ಡಿ.ಗುರುರಾಜ, ಸುಶೀಲಮ್ಮ ಮುಂತಾದವರ ತೋಟಗಳಿಗೆ ಲಗ್ಗೆ ಇಟ್ಟ ಒಂಟಿ ಸಲಗ ಅಡಿಕೆ, ಬಾಳೆ ಹಾಳು ಮಾಡಿದೆ. ಕೆಲವು ತೋಟಗಳಲ್ಲಿ ನೀರಿನ ಪೈಪ್‌ಗಳು ಪುಡಿಯಾಗಿವೆ.
ಆನೆಯನ್ನು ಸ್ಥಳಾಂತರಿಸಬೇಕು ಎಂದು ಆಗ್ರಹಿಸಿ ಈಗಾಗಲೇ ಗ್ರಾಮಸ್ಥರು ವಲಯ ಅರಣ್ಯಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಅರಣ್ಯ ಇಲಾಖೆಯವರು ಸ್ಥಳಕ್ಕೆ ಭೇಟಿ ನೀಡಿ ಕಾಡಾನೆ ಓಡಿಸಲು ಪಟಾಕಿ ಸಿಡಿಸಿ ಕಾರ್ಯಾಚರಣೆ ಮಾಡಿದ್ದಾರೆ. ಆದರೆ, ಒಂದು ಕಡೆ ಕಾಡಾನೆ ಓಡಿಸಿದರೆ ಮತ್ತೊಂದು ಭಾಗದ ಗ್ರಾಮಕ್ಕೆ ಹೋಗಿ ಅಲ್ಲಿನ ಕಾಡಿಗೆ ಸೇರಿಕೊಳ್ಳುತ್ತಿದೆ ಎನ್ನುತ್ತಾರೆ ಗ್ರಾಮಸ್ಥರು.
ಮೆಣಸೂರು ಗ್ರಾ.ಪಂಗೆ ಹೊಂದಿಕೊಂಡಿರುವ ಆಲಂದೂರು, ಮಳಲಿ, ನೇರ್ಲೆಕೊಪ್ಪದ ಕಡೆಗೂ ಈ ಒಂಟಿ ಸಲಗ ಹೋಗುತ್ತಿದೆ. ಆ ಭಾಗದಲ್ಲೂ ಅಡಿಕೆ, ಬಾಳೆ ಬೆಳಯನ್ನು ನಾಶ ಮಾಡಿ ನಂತರ ಮೆಣಸೂರು ಗ್ರಾ.ಪಂಯ ದ್ವಾರಮಕ್ಕಿ, ಕೋಟೆಬೈಲು, ಗುಡ್ಡದಮನೆಗೆ ಬರುತ್ತಿದೆ. ರಾತ್ರಿಯಾಗುತ್ತಲೇ ಗ್ರಾಮಗಳ ಅಡಿಕೆ ತೋಟಕ್ಕೆ ನುಗ್ಗುವ ಈ ಒಂಟಿ ಸಲಗ ಬೆಳಗಾಗುತ್ತಲೇ ಹತ್ತಿರದ ಮಲ್ಲಂದೂರು ಗುಡ್ಡಕ್ಕೆ ಸೇರುತ್ತಿದೆ. ಕಳೆದ 2 ವರ್ಷದಿಂದಲೂ ಈ ಒಂಟಿ ಸಲಗವು ಮೆಣಸೂರು ಗ್ರಾಮಕ್ಕೆ ಬರುತ್ತಿದ್ದರೂ ಕೆಲವು ದಿನ ಇದ್ದು, ಪುನಃ ಹಿಂದಕ್ಕೆ ಹೋಗುತ್ತಿತ್ತು. ಆದರೆ, ಈ ಬಾರಿ ಕಳೆದ 3 ತಿಂಗಳಿಂದಲೂ ಇದೇ ಗ್ರಾಮಗಳಲ್ಲಿ ಸುತ್ತಾಡುತ್ತಿರುವುದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.
ಬಡಗಬೈಲು ಗ್ರಾಮದ ಕೋಟೆ ಬೈಲಿನಲ್ಲಿ ಸಂಜೆ ಹೊತ್ತಿಗೆ ಒಂಟಿ ಆನೆ ಓಡಾಡುತ್ತಿದೆ. ರಸ್ತೆಯಲ್ಲಿ ಓಡಾಡುವ ಗ್ರಾಮಸ್ಥರು ಆನೆಯ ಓಡಾಟ ಕಂಡು ಭಯ ಪಡುತ್ತಿದ್ದಾರೆ. ರೈತರು ಅಡಿಕೆ ತೋಟಕ್ಕೆ ಹೋಗಲು ಭಯ ಪಡುವಂತಾಗಿದೆ. ಆದ್ದರಿಂದ ಆನೆ ಕಾರ್ಯಪಡೆಯವರು ಈ ಒಂಟಿ ಆನೆಯನ್ನು ಮೂಲ ಸ್ಥಳಕ್ಕೆ ಕಳಿಸಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.
ತಾಲ್ಲೂಕಿನ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ತೋಟಗಳಿಗೆ ದಾಳಿ ಮಾಡುತ್ತಿರುವ ಒಂಟಿ ಸಲಗವನ್ನು ಸೆರೆ ಹಿಡಿಯಲು ಕ್ರಮ ಕೈಗೊಳ್ಳುವಂತೆ ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗಿದ್ದು, ಶೀಘ್ರದಲ್ಲಿಯೇ ಇದನ್ನು ಸೆರೆ ಹಿಡಿಯಲಾಗುವುದು ಎಂದು ವಲಯ ಅರಣ್ಯಾಧಿಕಾರಿ ಪ್ರವೀಣ್ ಕುಮಾರ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.