ADVERTISEMENT

ಕುಂಡ್ರ ಗ್ರಾಮದಲ್ಲಿ ಸೆರೆ ಸಿಕ್ಕಿದ ಕಾಡಾನೆ

ಕುಂದೂರಿನಲ್ಲಿ ಕಾರ್ಯಾಚರಣೆ ಆರಂಭ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2022, 6:07 IST
Last Updated 29 ನವೆಂಬರ್ 2022, 6:07 IST
ಮೂಡಿಗೆರೆ ತಾಲ್ಲೂಕಿನ ಕುಂಡ್ರ ಗ್ರಾಮದಲ್ಲಿ ಸೋಮವಾರ ಸೆರೆಸಿಕ್ಕ ಕಾಡಾನೆಯನ್ನು ಅಭಿಮನ್ಯು ಸಾರಾಥ್ಯದಲ್ಲಿ ಅರಣ್ಯದಿಂದ ಹೊರಕ್ಕೆ ಕರೆತರಲಾಯಿತು.
ಮೂಡಿಗೆರೆ ತಾಲ್ಲೂಕಿನ ಕುಂಡ್ರ ಗ್ರಾಮದಲ್ಲಿ ಸೋಮವಾರ ಸೆರೆಸಿಕ್ಕ ಕಾಡಾನೆಯನ್ನು ಅಭಿಮನ್ಯು ಸಾರಾಥ್ಯದಲ್ಲಿ ಅರಣ್ಯದಿಂದ ಹೊರಕ್ಕೆ ಕರೆತರಲಾಯಿತು.   

ಮೂಡಿಗೆರೆ: ತಾಲ್ಲೂಕಿನ ಕುಂದೂರು ಭಾಗದಲ್ಲಿ ಉಪಟಳ ಮಾಡುತ್ತಿವೆ ಎಂದು ಮೂರು ಕಾಡಾನೆಗಳ ಸೆರೆಗೆ ಸರ್ಕಾರ ಆದೇಶ ನೀಡಿದ್ದು, ಸೋಮವಾರ ಬೆಳಿಗ್ಗೆಯಿಂದ ಕಾರ್ಯಾಚರಣೆ ಆರಂಭವಾಗಿದೆ. ಒಂದು ಆನೆಯನ್ನು ಮಧ್ಯಾಹ್ನ ಸೆರೆ ಹಿಡಿಯಲಾಗಿದೆ.

ಎಂಟು ದಿನಗಳ ಹಿಂದೆ ಕಾಡಾನೆ ದಾಳಿ ನಡೆಸಿ ಶೋಭಾ ಎಂಬುವವರು ಸಾವನ್ನಪ್ಪಿದ್ದರು. ನಂತರ ಸರ್ಕಾರವು ಮೂರು ಕಾಡಾನೆಗಳನ್ನು ಸೆರೆ ಹಿಡಿದು ಸ್ಥಳಾಂತರಿಸಲು ಆದೇಶ ಹೊರಡಿಸಿತ್ತು. ಆದೇಶ ಹೊರಬಂದ ದಿನದಿಂದಲೂ ಅರಣ್ಯ ಇಲಾಖೆ ಕಾಡಾನೆಗಳ ಸೆರೆಗೆ ಸಿದ್ಧತೆ ನಡೆಸಿದ್ದು, ಮೂಡಿಗೆರೆ ಹಾಗೂ ಆಲ್ದೂರು ವಲಯಕ್ಕೆ ಒಳಪಡುವ ದೊಡ್ಡಳ್ಳ ಗ್ರಾಮದಲ್ಲಿ ಶಿಬಿರ ತೆರೆಯಲಾಗಿದೆ. ಭಾನುವಾರ ರಾತ್ರಿ ಶಿಬಿರಕ್ಕೆ ಮತ್ತಿಗೂಡು ಆನೆ ಶಿಬಿರದಿಂದ ದಸರಾ ಆನೆಗಳಾದ ಅಭಿಮನ್ಯು, ಭೀಮ, ಮಹೇಂದ್ರ ಹಾಗೂ ದುಬಾರೆ ಆನೆ ಶಿಬಿರದಿಂದ ಕೃಷ್ಣಾ, ಪ್ರಶಾಂತ್, ಹರ್ಷ ಸೇರಿದಂತೆ ಒಟ್ಟು ಆರು ಆನೆಗಳನ್ನು ಕರೆತರಲಾಗಿತ್ತು. ಕಾರ್ಯಾಚರಣೆಗಾಗಿ ನೂರಕ್ಕೂ ಅಧಿಕ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ಸೋಮವಾರ ಬೆಳಿಗ್ಗೆ ಶಿಬಿರದ ಬಳಿಯಿರುವ ದೊಡ್ಡಳ್ಳದಲ್ಲಿ ಆನೆಗಳಿಗೆ ಸ್ನಾನ ಮಾಡಿಸಿ, ವಿಶೇಷ ಪೂಜೆ ಸಲ್ಲಿಸಿ, ಆನೆಗಳಿಗೆ ಆಹಾರಗಳನ್ನು ನೀಡಿ ಕಾರ್ಯಾಚರಣೆಗೆ ಚಾಲನೆ ನೀಡಲಾಯಿತು.

ADVERTISEMENT

ಆನೆ ಪರಿಣಿತರು, ಸಹ ಮಾವುತರು, ಅರಣ್ಯ ಸಿಬ್ಬಂದಿ ಬೆಳಿಗ್ಗೆಯಿಂದಲೂ ಕಾರ್ಯಾಚರಣೆ ನಡೆಸಿ ಎಸ್ಟೇಟ್ ಕುಂದೂರು, ಹುಲ್ಲೇಮನೆ, ಭೈರಿಗದ್ದೆ, ಭಟ್ರಗದ್ದೆ, ಕುಂಡ್ರ, ಭಾರತಿಬೈಲ್ ಅರಣ್ಯ ಪ್ರದೇಶಗಳಲ್ಲಿ ಹುಡುಕಾಟ ನಡೆಸಿದರು. ಮಧ್ಯಾಹ್ನದ ವೇಳೆಗೆ ಒಂದು ಕಾಡಾನೆಯು ಕುಂಡ್ರ ಗ್ರಾಮಕ್ಕೆ ಹೊಂದಿಕೊಂಡಿರುವ ಅರಣ್ಯ ಪ್ರದೇಶದಲ್ಲಿ ಕಂಡು ಬಂದಿತು.ಸಾಕಾನೆಗಳೊಂದಿಗೆ ತೆರಳಿದ ವೈದ್ಯರು, ಅರಣ್ಯ ಸಿಬ್ಬಂದಿ, ಕಾಡಾನೆಗೆ ನಾಕಾಬಂದಿ ಹಾಕಿ, ಅರಿವಳಿಕೆ ಚುಚ್ಚು ಮದ್ದು ನೀಡಿದರು. ಬಳಿಕ ಕಾಡಾನೆಗೆ ಹಗ್ಗವನ್ನು ಬಿಗಿದು, ಅಭಿಮನ್ಯು ಸಾರಥ್ಯದಲ್ಲಿ ಉಳಿದ ಆನೆಗಳು ಕಾಡಾನೆಯನ್ನು ಅರಣ್ಯದಿಂದ ಹೊರಕ್ಕೆ ತರುವಲ್ಲಿ ಯಶಸ್ವಿಯಾದವು.

ಬಳಿಕ ಸೆರೆಹಿಡಿದ ಕಾಡಾನೆಯನ್ನು ಎರಡು ಆನೆಗಳ ಸುಪರ್ದಿಯಲ್ಲಿ ಸಕ್ರೆಬೈಲಿನ ಆನೆ ಶಿಬಿರಕ್ಕೆ ಕಳುಹಿಸಿಕೊಡಲಾಯಿತು.

ಎರಡು ದಿನ ಬಳಿಕ: ‘ಒಂದು ದಿನದ ಕಾರ್ಯಾಚರಣೆಯ ಬಳಿಕ ಆನೆಗಳಿಗೆ ವಿಶ್ರಾಂತಿ ಅಗತ್ಯವಿರುವುದರಿಂದ ಎರಡು ದಿನಗಳ ಬಳಿಕ ಕಾರ್ಯಾಚರಣೆಯನ್ನು ನಡೆಸಲಾಗುವುದು’ ಎಂದು ಸ್ಥಳದಲ್ಲಿದ್ದ ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

ಕಾರ್ಯಾಚರಣೆಯ ಸ್ಥಳಕ್ಕೆ ತಂಡಡೋಪತಂಡವಾಗಿ ಜನರು ಬಂದು ವೀಕ್ಷಿಸ ತೊಡಗಿದರು. ಶಿಬಿರದ ಬಳಿಗೆ ಬಾರದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಮನವಿ ಮಾಡಿದರೂ, ಜನ ಬಂದು ಆನೆಗಳೊಂದಿಗೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ದಾಳಿ ನಡೆಸಿದ ಆನೆ ಸೆರೆಯಾಗಲಿ: ಸೋಮವಾರ ಸೆರೆ ಸಿಕ್ಕ ಕಾಡಾನೆಯು ಚಿಕ್ಕ ಗಾತ್ರದ್ದಾಗಿದ್ದು, ಎಂಟು ದಿನಗಳ ಹಿಂದೆ ಎಸ್ಟೇಟ್ ಕುಂದೂರು ಗ್ರಾಮದಲ್ಲಿ ದಾಳಿ ನಡೆಸಿದ ಕಾಡಾನೆಯು ದೊಡ್ಡ ಗಾತ್ರದಾಗಿದೆ.

ಕಾರ್ಯಾಚರಣೆ ನಡೆಸುವ ತಂಡವು ಅದನ್ನು ಸೆರೆ ಹಿಡಿಯಬೇಕು ಎಂದು ಜನರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.