ADVERTISEMENT

ಹೆಣ್ಣಿಗೆ ಮನೆ ಮನ ಬೆಳಗುವ ಶಕ್ತಿಯಿದೆ: ರೇಖಾ ಪ್ರೇಮ್‌ಕುಮಾರ್

​ಪ್ರಜಾವಾಣಿ ವಾರ್ತೆ
Published 25 ಜನವರಿ 2026, 7:28 IST
Last Updated 25 ಜನವರಿ 2026, 7:28 IST
ರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು
ರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು   

ಚಿಕ್ಕಮಗಳೂರು: ‘ಹೆಣ್ಣಿಗೆ ಅಪಾರ ಶಕ್ತಿಯಿದೆ. ಮನೆ– ಮನ ಬೆಳಗಿಸುವ, ವಿವಿಧ ಕ್ಷೇತ್ರಗಳಲ್ಲಿ ಸಾಧಿಸುವ ಛಲ, ಮನೆಮಂದಿಯ ಆರೋಗ್ಯ ಕಾಪಾಡುವ ಅಗಾಧ ಕ್ಷಮತೆ ಹೆಣ್ಣಿಗಿದೆ’ ಎಂದು ನಾದಚೈತನ್ಯ ಸಂಸ್ಥಾಪಕಿ ರೇಖಾ ಪ್ರೇಮ್‌ಕುಮಾರ್ ಹೇಳಿದರು.

ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಕಾಲೇಜು ಶಿಕ್ಷಣ ಇಲಾಖೆ, ರೇಂಜರ್ಸ್ ಮತ್ತು ರಾಷ್ಟ್ರೀಯ ಸೇವಾ ಯೋಜನೆಗಳ ಸಹಯೋಗದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಹಿಳೆಯರು ಪ್ರತಿ ಕ್ಷೇತ್ರದಲ್ಲೂ ತೊಡಗಿಸಿಕೊಂಡು ಪುರುಷನಿಗೆ ಸರಿಸಮಾನವಾಗಿ ಬದುಕುತ್ತಿದ್ದಾರೆ. ಆಟೊ ರಿಕ್ಷಾದಿಂದ ಅಂತರಿಕ್ಷಾದವರೆಗೂ ಪಾದಾರ್ಪಣೆ ಮಾಡಿ ದೊಡ್ಡ ಕ್ರಾಂತಿ ಮಾಡಿದ್ದಾರೆ. ವಿವಿಧ ದೃಷ್ಟಿಕೋನದಲ್ಲಿ ಜೀವಿಸುತ್ತಿರುವ ಹೆಣ್ಣಿಗೆ ಸಮಾಜದಲ್ಲಿ ವಿವಿಧ ಅವಕಾಶಗಳಿದ್ದು ಬುದ್ಧಿಶಕ್ತಿ, ವಿವೇಕದಿಂದ ಉಪಯೋಗಿಸಿಕೊಳ್ಳಬೇಕು ಎಂದು ಹೇಳಿದರು.

ADVERTISEMENT

ವಿದ್ಯಾರ್ಥಿನಿಯರ ವ್ಯಕ್ತಿತ್ವ ವಿಕಸನಗೊಳಿಸಲು ಕಾಲೇಜು ವ್ಯಾಸಂಗ ಪೂರಕ. ಶಿಸ್ತುಬದ್ಧ ಕಲಿಕೆ, ಕೌಶಲಯುತ ಗುಣಗಳನ್ನು ಅಳವಡಿಸಿಕೊಂಡು ಸಾಗಿದರೆ ಬದುಕಿನಲ್ಲಿ ಮುಂಬರಬಹುದು. ಕಲಿಯುವ ವಯಸ್ಸಿನಲ್ಲಿ ಬುದ್ದಿವಂತಿಕೆ, ಸಂಯಮ, ವಿವೇಕ ಇರಬೇಕು. ಸಾಮಾಜಿಕ ಜಾಲತಾಣದಲ್ಲಿ ಪ್ರಪಂಚದ ಆಗುಹೋಗುಗಳ ಬಗ್ಗೆ ಅರಿತುಕೊಳ್ಳಬೇಕು, ಸಮಯ ವ್ಯರ್ಥ ಮಾಡಬಾರದು. ಪ್ರತಿದಿನ ಪತ್ರಿಕೆಗಳನ್ನು ಓದಬೇಕು ಎಂದು ಸಲಹೆ ನೀಡಿದರು. 

ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಮೂಡಲಗಿರಿಯ್ಯ, ಸಮಾಜದಲ್ಲಿ ಹೆಣ್ಣಿ ಮೇಲೆ ಕ್ರೌರ್ಯ, ಹಿಂಸೆ ನಡೆಯುತ್ತಿದೆ. ಆ ನಿಟ್ಟಿನಲ್ಲಿ ಹೆಣ್ಣು ಗಟ್ಟಿಯಾಗಲು ಸಮಗ್ರ ವಿದ್ಯಾಭ್ಯಾಸ ಮಾಡಬೇಕು. ಜ್ಞಾನ ವೃದ್ಧಿಸಿ, ವಿವೇಕ ಹೆಚ್ಚಿಸಿ ಕುಟುಂಬದ ಜೊತೆಗೆ ಸಮಾಜದ ಕಣ್ಣಾಗಬೇಕು ಎಂದು ಹೇಳಿದರು.

ಇತಿಹಾಸ ವಿಭಾಗದ ಮುಖ್ಯಸ್ಥ ಜಿ. ಮಹೇಶ್ವರಪ್ಪ, ವಾಣಿಜ್ಯಶಾಸ್ತ್ರ ಮುಖ್ಯಸ್ಥ ನಟೇಶ್, ಸಿಬ್ಬಂದಿ ಲೋಕೇಗೌಡ, ಸಮಾಜಶಾಸ್ತ್ರ ಮುಖ್ಯಸ್ಥ ಶಿವರಾಜ್, ರಾಜ್ಯಶಾಸ್ತ್ರ ಪ್ರಾಧ್ಯಾಪಕ ಎ.ಸಿ. ಪುಟ್ಟಸ್ವಾಮಿ, ಕಾಲೇಜು ಶಿಕ್ಷಣ ಇಲಾಖೆ ವ್ಯವಸ್ಥಾಪಕಿ ಹೇಮಮಾಲಿನಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.