ADVERTISEMENT

ಮಹಿಳೆಯರಿಗೆ ಕಾನೂನು ಅರಿವು ಅಗತ್ಯ: ವಕೀಲೆ ಸುಮಾ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2025, 6:46 IST
Last Updated 23 ಆಗಸ್ಟ್ 2025, 6:46 IST
ನರಸಿಂಹರಾಜಪುರ ತಾಲ್ಲೂಕು ಶೆಟ್ಟಿಕೊಪ್ಪದಲ್ಲಿ ಶುಕ್ರವಾರ ನಡೆದ ಕಡಹಿನಬೈಲು ಗ್ರಾಮ ಪಂಚಾಯಿತಿ ಸಂಜೀವಿನಿ ಒಕ್ಕೂಟದ ವಾರ್ಷಿಕ ಮಹಾಸಭೆಯಲ್ಲಿ ವಕೀಲೆ ಸುಮಾ ಮಾತನಾಡಿದರು. ವಿಂದ್ಯಾ ಹೆಗ್ಡೆ, ಲಿಲ್ಲಿ ಮಾತುಕುಟ್ಟಿ, ಪಿ.ಪಿ.ಬೇಬಿ, ಸುಬ್ರಹ್ಮಣ್ಯ ಭಾಗವಹಿಸಿದ್ದರು
ನರಸಿಂಹರಾಜಪುರ ತಾಲ್ಲೂಕು ಶೆಟ್ಟಿಕೊಪ್ಪದಲ್ಲಿ ಶುಕ್ರವಾರ ನಡೆದ ಕಡಹಿನಬೈಲು ಗ್ರಾಮ ಪಂಚಾಯಿತಿ ಸಂಜೀವಿನಿ ಒಕ್ಕೂಟದ ವಾರ್ಷಿಕ ಮಹಾಸಭೆಯಲ್ಲಿ ವಕೀಲೆ ಸುಮಾ ಮಾತನಾಡಿದರು. ವಿಂದ್ಯಾ ಹೆಗ್ಡೆ, ಲಿಲ್ಲಿ ಮಾತುಕುಟ್ಟಿ, ಪಿ.ಪಿ.ಬೇಬಿ, ಸುಬ್ರಹ್ಮಣ್ಯ ಭಾಗವಹಿಸಿದ್ದರು   

ಶೆಟ್ಟಿಕೊಪ್ಪ(ನರಸಿಂಹರಾಜಪುರ): ‘ಕಾನೂನಿನ ಸೂರಿನಡಿ ಮಹಿಳೆಯರಿಗೆ ರಕ್ಷಣೆಯಿದ್ದು, ಅಂತಹ ಕಾನೂನುಗಳ ಬಗ್ಗೆ ಪ್ರತಿಯೋರ್ವ ಮಹಿಳೆಯು ಅರಿವು ಹೊಂದಬೇಕು’ ಎಂದು ವಕೀಲೆ ಸುಮಾ ಹೇಳಿದರು.

ತಾಲ್ಲೂಕಿನ ಶೆಟ್ಟಿಕೊಪ್ಪದಲ್ಲಿ ಶುಕ್ರವಾರ ನಡೆದ ಕಡಹಿನಬೈಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂಜೀವಿನಿ ಒಕ್ಕೂಟದ ವಾರ್ಷಿಕ ಮಹಾಸಭೆಯಲ್ಲಿ ಮಹಿಳೆಯರಿಗೆ ಕಾನೂನು ಅರಿವು ಬಗ್ಗೆ ಅವರು ಮಾಹಿತಿ ನೀಡಿದರು.

‘ಮಕ್ಕಳನ್ನು ಸರಿಯಾದ ಮಾರ್ಗದಲ್ಲಿ ಬೆಳೆಸಬೇಕಾಗಿರುವುದು ಪ್ರತಿಯೊಬ್ಬ ತಂದೆ–ತಾಯಿಯ ಜವಾಬ್ದಾರಿ. ಪೋಷಕರು ಜವಾಬ್ದಾರಿಯಿಂದ ಹಿಂದೆ ಸರಿದರೆ ಮಕ್ಕಳು ಸಮಾಜಕ್ಕೆ ಮಾರಕವಾಗುವ ಸಾಧ್ಯತೆಯಿದೆ. ಪ್ರಸ್ತುತ ದಿನಗಳಲ್ಲಿ ಕುಟುಂಬಗಳ ಸಂಬಂಧಗಳು ಒಡೆದು ಹೋಗಿವೆ. ಪ್ರೀತಿ, ವಿಶ್ವಾಸ, ಪರಸ್ಪರ ನಂಬಿಕೆಗಳೇ ಇಲ್ಲವಾಗಿದೆ. ಇದರ ಪರಿಣಾಮ ಮದುವೆಯಾದ ಕೆಲವೇ ತಿಂಗಳಲ್ಲಿ ವಿಚ್ಛೇದನ ಪ್ರಕರಣಗಳು ಹೆಚ್ಚಾಗುತ್ತಿವೆ. ಸಂಸಾರದಲ್ಲಿ ಶಾಂತಿ, ನೆಮ್ಮದಿ, ತಾಳ್ಮೆ, ಸಮಾಧಾನ ಇಲ್ಲವಾಗಿದೆ. ಇದರಿಂದ ಕೌಟುಂಬಿಕ ದೌರ್ಜನ್ಯಗಳು ಹೆಚ್ಚಾಗುತ್ತಿವೆ. ವಿವಾಹವಾಗಿ 7ವರ್ಷದೊಳಗೆ ಮಹಿಳೆ ಸಂಶಯಾಸ್ಪದವಾಗಿ ಮರಣ ಹೊಂದಿದರೆ ಅಂಥವರಿಗೆ ಕಾನೂನು ನೆರವು ನೀಡಲಿದೆ’ ಎಂದರು.

ADVERTISEMENT

ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಪಿ.ಪಿ.ಬೇಬಿ ಮಾತನಾಡಿ, ‘ಮಾದಕ ಮುಕ್ತ ಕರ್ನಾಟಕ ಮಾಡುವಲ್ಲಿ ಎಲ್ಲರೂ ಕೈಜೋಡಿಸಬೇಕು. ಮಾದಕ ವಸ್ತುಗಳ ವ್ಯಸನದಿಂದ ಸಮಾಜದಲ್ಲಿ ಅನೇಕ ದುರ್ಘಟನೆಗಳು ಸಂಭವಿಸುತ್ತಿವೆ. ಮಾದಕ ವಸ್ತು ಬಳಕೆ ಕೇವಲ ಒಂದು ಕುಟುಂಬಕ್ಕಲ್ಲ ಇಡೀ ದೇಶಕ್ಕೆ ವ್ಯಾಪಿಸಿದೆ. ಯುವಕರು ಕ್ಷಣಿಕ ಸುಖ, ಸಂತೋಷಕ್ಕೆ ಮಾದಕ ವಸ್ತುಗಳ ದಾಸರಾಗುತ್ತಿದ್ದಾರೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಒಕ್ಕೂಟದ ಅಧ್ಯಕ್ಷೆ ವಿಂದ್ಯಾಹೆಗ್ಡೆ ಮಾತನಾಡಿ, ‘ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರಬೇಕು. ಸಂಘಗಳಿಗೆ ಕೇವಲ ಸಾಲ ಪಡೆಯುವುದಕ್ಕೆ ಮಾತ್ರ ಬರಬಾರದು. ಮಹಿಳೆಯರು ಸಮಗ್ರ ಚಟುವಟಿಕೆಗಳ ಕೇಂದ್ರ ಬಿಂದುವಾಗಬೇಕು. ಒಕ್ಕೂಟದಿಂದ ಸಾಲ ಪಡೆದು ಆದಾಯ ಉತ್ಪನ್ನ ಚಟುವಟಿಕೆಗಳನ್ನು ಕೈಗೊಳ್ಳಬೇಕು. ಒಕ್ಕೂಟದ ಪ್ರತಿಯೊಂದು ಕಾರ್ಯಕ್ರಮದಲ್ಲೂ ಮಹಿಳೆಯರು ಭಾಗವಹಿಸಬೇಕು’ ಎಂದರು.

ಕಡಹಿನಬೈಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಿಲ್ಲಿ ಮಾತುಕುಟ್ಟಿ, ಉಪಾಧ್ಯಕ್ಷ ಸುನಿಲ್ ಕುಮಾರ್, ಸದಸ್ಯರಾದ ವಾಣಿನರೇಂದ್ರ, ಶೈಲಾ ಮಹೇಶ್, ಎ.ಬಿ.ಮಂಜುನಾಥ್, ಚಂದ್ರಶೇಖರ್, ಆಪ್ತ ಸಮಾಲೋಚಕಿ ಸುಜಾತ, ವಲಯ ಮೇಲ್ವಿಚಾರಕ ಚೇತನ್, ಒಕ್ಕೂಟದ ಪದಾಧಿಕಾರಿಗಳಾದ ಸಮಿತ್ರ, ವಿನೋದ, ಶೈನಿ, ಕೃಷಿ ಸಖಿ ಮೇರಿ, ಮಾಲಿನಿ, ಸಲೀನಾ, ಶಾಲಿ ಇದ್ದರು. ವಕೀಲೆ ಸುಮಾ, ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಪಿ.ಪಿ.ಬೇಬಿ ಅವರನ್ನು ಸನ್ಮಾನಿಸಲಾಯಿತು. ಮಾದಕ ವಸ್ತುಗಳ ದಾಸರಾಗದಂತೆ ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು.

ವಾರ್ಷಿಕ ₹15 ಲಕ್ಷದವರೆಗೆ ಆದಾಯ ತರುವ ಕೆಲಸ ಮಾಡಿ

‘ಸಂಜೀವಿನಿ ಒಕ್ಕೂಟದಿಂದ ಸ್ವಸಹಾಯ ಸಂಘಗಳು ಜೀವನೋಪಾಯ ಚಟುವಟಿಕೆ ಕೈಗೊಳ್ಳಲು ಮುಂದಾಗಬೇಕು. ಕೃಷಿ ಗೃಹ ಕೈಗಾರಿಕೆ ಅಥವಾ ಉದ್ದಿಮೆಗಳ ಮೂಲಕ ಆದಾಯ ತರುವ ಚಟುವಟಿಕೆ ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಒಕ್ಕೂಟಕ್ಕೆ ಇನ್ನಷ್ಟು ಸ್ವಸಹಾಯ ಸಂಘಗಳ ಸೇರ್ಪಡೆಯಾಗಬೇಕು. ಪ್ರಸ್ತುತ 38 ಇರುವ ಸಂಘಗಳನ್ನು ಮುಂದಿನ ವರ್ಷದೊಳಗೆ 50ಕ್ಕೆ ಹೆಚ್ಚಿಸಬೇಕು. ವಾರ್ಷಿಕವಾಗಿ ₹15 ಲಕ್ಷದವರೆಗೆ ಆದಾಯ ತರುವ ಕೆಲಸ ಮಾಡಬೇಕು’ ಎಂದು ಸಂಜೀವಿ ಒಕ್ಕೂಟ ತಾಲ್ಲೂಕು ಕಾರ್ಯಕ್ರಮಗಳ ವ್ಯವಸ್ಥಾಪಕ ಸುಬ್ರಹ್ಮಣ್ಯ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.