ಕಡೂರು: ಕಾರ್ಮಿಕರು ಆರೋಗ್ಯದ ಕಡೆ ಕಾಳಜಿ ವಹಿಸಬೇಕು ಎಂದು ಕಡೂರು ಎಪಿಎಂಸಿ ಸಹಾಯಕ ಕಾರ್ಯದರ್ಶಿ ಧರ್ಮರಾಜ್ ಸಲಹೆ ನೀಡಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿ ಶನಿವಾರ ಜೀವಿತಾ ಫೌಂಡೇಷನ್, ಎಪಿಎಂಸಿ, ವಿನಾಯಕ ಹಮಾಲಿ ಕಾರ್ಮಿಕರ ಸಂಘ, ಶಿವಮೊಗ್ಗ ಸಹ್ಯಾದ್ರಿ ನಾರಾಯಣ ಹೃದಯಾಲಯ, ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರ ಹಾಗೂ ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದ ಸಹಯೋಗದಲ್ಲಿ ನಡೆದ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿನಿತ್ಯ ದುಡಿಮೆಗೆ ಹೆಚ್ಚಿನ ಒತ್ತು ನೀಡುವ ಕಾರ್ಮಿಕರು ಕುಟುಂಬದ ಹಿತ ಕಾಪಾಡಲು ನಿಮ್ಮ ಆರೋಗ್ಯದ ರಕ್ಷಣೆ ಬಹುಮುಖ್ಯ. ಆರೋಗ್ಯದ ಕಡೆ ಗಮನಹರಿಸದೆ ಹೋದಲ್ಲಿ ಸಾಕಷ್ಟು ಪರಿಣಾಮ ಎದುರಿಸುವಂತಹ, ಅನಾರೋಗ್ಯ ಉಂಟಾದ ಸಂದರ್ಭದಲ್ಲಿ ಕುಟುಂಬದ ಸ್ಥಿತಿಯೇ ಡೋಲಾಯಮಾನ ಆಗುವಂತಹ ಸನ್ನಿವೇಶಗಳು ಎದುರಾಗಬಹುದು. ಆದ್ದರಿಂದ ಮುನ್ನೆಚ್ಚರಿಕೆ ವಹಿಸುವುದು ಒಳಿತು ಎಂದು ಕಿವಿಮಾತು ಹೇಳಿದರು.
ಜೀವಿತಾ ಫೌಂಡೇಷನ್ ನಿರ್ದೇಶಕ ಕೆ.ಜಿ.ಲೋಕೇಶ್ವರ್ ಮಾತನಾಡಿ, ‘ಆರೋಗ್ಯವನ್ನು ನಿರ್ಲಕ್ಷಿಸಿ, ದುಶ್ಚಟಗಳನ್ನು ರೂಢಿಸಿಕೊಂಡು ಜೀವನ ಹಾಳು ಮಾಡಿಕೊಳ್ಳಬಾರದು. ಕಾರ್ಮಿಕರ ಆರೋಗ್ಯದ ಕಾಳಜಿ ಹಿನ್ನೆಲೆಯಲ್ಲಿ ಜೀವಿತಾ ಫೌಂಡೇಷನ್ ಆಯೋಜಿಸಿರುವ ಶಿಬಿರದ ಸದ್ಬಳಕೆ ಮಾಡಿಕೊಳ್ಳಬೇಕು’ ಎಂದರು.
ಜೀವಿತಾ ಫೌಂಡೇಷನ್ ಅಧ್ಯಕ್ಷ ಕೆ.ಪ್ರಕಾಶ್ ಮಾತನಾಡಿ, ಒತ್ತಡದ ಕೆಲಸದ ನಡುವೆ ಆರೋಗ್ಯ ನಿರ್ಲಕ್ಷ್ಯ ಮಾಡುತ್ತಿರುವುದು ವಿಪರ್ಯಾಸ. ಇಂತಹ ಶಿಬಿರಗಳ ಪ್ರಯೋಜನ ಪಡೆದು, ಆರೋಗ್ಯ ಕಾಪಾಡಿಕೊಳ್ಳಲು ಮುಂದಾಗಿ ಎಂದರು.
ಈ ಸಂದರ್ಭದಲ್ಲಿ 75ಕ್ಕೂ ಹೆಚ್ಚು ಕಾರ್ಮಿಕರು ಶಿಬಿರದಲ್ಲಿ ಭಾಗವಹಿಸಿದ್ದರು. ಶ್ರೀ ವಿನಾಯಕ ಹಮಾಲಿ ಕಾರ್ಮಿಕರ ಸಂಘದ ಅಧ್ಯಕ್ಷ ಯೋಗೀಶ್ ಅಧ್ಯಕ್ಷತೆ ವಹಿಸಿದ್ದರು. ನಾರಾಯಣ ಹೃದಯಾಲಯದ ವೈದ್ಯರಾದ ಡಾ. ಯಶಸ್, ಡಾ. ನಿತಿನ್, ಕಿರಣ್, ಶರತ್, ರಾಹುಲ್, ಮಧುಕರ್, ಪತ್ರಕರ್ತ ಎಚ್.ಆರ್. ದೇವರಾಜ್, ಎಪಿಎಂಸಿ ಲೆಕ್ಕಾಧಿಕಾರಿ ಏಳುಕೋಟಿ, ಜೀವಿತಾ, ಪ್ರಶಾಂತ್, ರವಿಕುಮಾರ್ ಇದ್ದರು.
ಸರ್ಕಾರ ಕಾರ್ಮಿಕರಿಗಾಗಿ ಅನೇಕ ಸೌಲಭ್ಯಗಳನ್ನು ನೀಡುತ್ತಿದೆ. ಆರೋಗ್ಯದ ದೃಷ್ಟಿಯಿಂದ ಪ್ರತಿಯೊಬ್ಬ ಕಾರ್ಮಿಕರೂ ಇಲಾಖೆಯ ಕಾರ್ಡ್ ಅನ್ನು ಪಡೆದುಕೊಂಡು ನೋಂದಣಿ ಮಾಡಿಸಿ ಇದರ ಸದ್ಬಳಕೆಗೆ ಮುಂದಾಗಬೇಕಿದೆಪ್ರವೀಣ್, ಇನ್‌ಸ್ಪೆಕ್ಟರ್ ಕಾರ್ಮಿಕ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.