ADVERTISEMENT

ಅಂಗವಿಕಲರಿಗೆ ಮಾನವೀಯತೆಯೇ ಮಾನದಂಡ

ವಿಶ್ವ ಅಂಗವಿಕಲರ ದಿನಾಚರಣೆಯಲ್ಲಿ ಜಿಲ್ಲಾಧಿಕಾರಿ ವಿ.ಪಿ.ಇಕ್ಕೇರಿ ಅಭಿಮತ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2013, 6:26 IST
Last Updated 4 ಡಿಸೆಂಬರ್ 2013, 6:26 IST

ಚಿತ್ರದುರ್ಗ: ‘ವ್ಯಕ್ತಿಯ ಅಂಗವೈಕಲ್ಯವನ್ನು ಗುರುತಿಸಿ, ಸೌಲಭ್ಯ ನೀಡುವಾಗ ಕಾನೂನಿಗಿಂತ ಮಾನವೀಯತೆಯನ್ನೇ ಮಾನದಂಡ ವಾಗಿಸಿಕೊಳ್ಳಬೇಕು. ಮಾನವೀಯತೆಯಿಂದಲೇ ಅಂಗವಿಕಲರಿಗೆ ಸೌಲಭ್ಯ ದೊರೆಯಲು ಸಾಧ್ಯ, ಇದು ಕಾನೂನಿನ ಉದ್ದೇಶ ಕೂಡ’ ಎಂದು ಜಿಲ್ಲಾಧಿಕಾರಿ ವಿ.ಪಿ.ಇಕ್ಕೇರಿ ಅಭಿಪ್ರಾಯಪಟ್ಟರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ  ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಮತ್ತು ಜಿಲ್ಲೆಯ ಎಲ್ಲಾ ಅಂಗವಿಕಲ ಸೇವಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಅಂಗವಿಕಲರ ದಿನಾಚರಣೆ  ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಾನವೀಯತೆ ಅಥವಾ ಕಾನೂನಿನ ಚೌಕಟ್ಟಿನಲ್ಲಿ ಅಂಗವಿಕಲರನ್ನು ಗುರುತಿಸದೇ, ಸರ್ಕಾರ ಸೌಲಭ್ಯಗಳನ್ನು ತಲುಪಿಸದೇ, ಫಲಾನುಭವಿಗಳನ್ನು ವಂಚಿಸುವ ಅಧಿಕಾರಿಗಳೇ ಅಂಗವಿಕಲರು’ ಎಂದು ಅವರು ಮಾರ್ಮಿಕವಾಗಿ ನುಡಿದರು.

ಅಂಗವಿಕಲರನ್ನು ಗುರುತಿಸಿ, ಸರ್ಕಾರದ ಸೌಲಭ್ಯ ನೀಡಬೇಕೇ ಹೊರತು, ತಾನೊಬ್ಬ ಅಂಗವಿಕಲ ಎಂದು ಹೇಳಿಕೊಂಡು, ಸರ್ಕಾರಕ್ಕೆ ಅವರೇ ಅರ್ಜಿ ಹಾಕಿಕೊಳ್ಳುವಂತಹ ವ್ಯವಸ್ಥೇ ಹೋಗಬೇಕು. ಸರ್ಕಾರದ ಸೌಲಭ್ಯವನ್ನು ಅಂಗವಿಕಲರ ಮನೆ ಬಾಗಿಲಿಗೇ ಅಧಿಕಾರಿಗಳು ತಲುಪಿಸುವಂತಾದರೆ, ಯೋಜನೆಗಳು ಫಲಕಾರಿಯಾಗುತ್ತವೆ ಎಂದು ಸಲಹೆ ನೀಡಿದರು. ಜಿಲ್ಲಾಮಟ್ಟದ ಮೇಲಾಧಿಕಾರಿ ಸೇರಿದಂತೆ ಕೆಳಹಂತದ ಅಧಿಕಾರಿಗಳು ಸೌಲಭ್ಯಗಳನ್ನು ಸಕಾಲದಲ್ಲಿ ತಿಳಿಸುವ ಪ್ರಯತ್ನ ಮಾಡಬೇಕೇ ಹೊರತು ವಿಕಾಲವಾಗದಂತೆ ನೋಡಿಕೊಳ್ಳಿ ಎಂದು ಕಿವಿಮಾತು ಹೇಳಿದರು.

ಪ್ರಧಾನ ಸಿವಿಲ್ ನ್ಯಾಯಾಧೀಶ ಸದಾಶಿವ ಎಸ್. ಸುಲ್ತಾನಪುರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ಮಾನವ ಜನ್ಮ ದೊಡ್ಡದು. ಕೆಲವರಿಗೆ ಹುಟ್ಟಿನಿಂದಲೇ ಅಂಗ ನ್ಯೂನತೆ ಆಗುವುದುಂಟು. ಆದರೆ, ಅದನ್ನೇ ಮನಸ್ಸಿನಲ್ಲಿಟ್ಟುಕೊಂಡು ಕೊರಗಬಾರದು ಎಂದರು.
ಅದೆಷ್ಟೋ ಅಂಗವಿಕಲರು ಒಲಿಂಪಿಕ್ ಕ್ರೀಡಾಕೂಟ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ತೋರಿಸಿದ್ದಾರೆ. ಜ್ಞಾನಯೋಗಿ ಪಂಚಾಕ್ಷರಿ ಗವಾಯಿಗಳು ಸಾವಿರಾರು ಅಂಗವಿಕಲರ ಬಾಳಿಗೆ ದಾರಿದೀಪವಾಗಿದ್ದಾರೆ. ಅವರಂತೆ ನೀವುಗಳು ಆಗಬೇಕಿದೆ’ ಎಂದು ಆತ್ಮಸ್ಥೈರ್ಯ ತುಂಬಿದರು.

ಜಿಲ್ಲಾ ಪಂಚಾಯ್ತಿ ಸಿಇಒ ನಾರಾಯಣಸ್ವಾಮಿ ಮಾತನಾಡಿ, ಪ್ರತಿಯೊಬ್ಬ ಮನುಷ್ಯನಲ್ಲೂ ಕೊರತೆ ಇದೆ. ಯಾರು ತಮ್ಮ ಅಂಗಾಂಗಗಳಿಗೆ ಸಮರ್ಪಕ ಕೆಲಸ ನೀಡುವುದಿಲ್ಲವೋ ಅವರು ನಿಜವಾದ ಅಂಗವಿಕಲರು. ಅಂಗವಿಕಲತೆಯನ್ನು ಋಣಾತ್ಮಕವಾಗಿ ನೋಡುವ ಮನಸ್ಥಿತಿಯಿಂದ ಹೊರಬರಲಿಕ್ಕಾಗಿಯೇ ‘ಚೇತನ’ ಎನ್ನುವ ಧನಾತ್ಮಕ ಹೆಸರಿಡಲಾಗಿದೆ ಎಂದು ತಿಳಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಅಂತರರಾಷ್ಟ್ರೀಯ ಅಂಗವಿಕಲ ಕ್ರೀಡಾಪಟು ಕೊಂಡ್ಲಹಳ್ಳಿ ಪ್ರಸನ್ನಕುಮಾರ್‌, ‘ನಾನು ಹುಟ್ಟಿನಿಂದಲೇ ಪೋಲಿಯೊ ರೋಗಕ್ಕೆ ತುತ್ತಾಗಿದ್ದೇನೆ. ಆ ಅಂಗವೈಕಲ್ಯದ ನ್ಯೂನತೆಯೇ ನನ್ನಲ್ಲಿ ಸಾಧಿಸುವ ಛಲ ತುಂಬಿತು. ಅದಕ್ಕಾಗಿ ನಾವು ನಮ್ಮಲಿರುವ ವಿಶೇಷ ಸಾಮರ್ಥ್ಯ ಗುರುತಿಸುವ ಮೂಲಕ ಸಾಧನೆ ಮಾಡಬೇಕು ಎಂದು ತಿಳಿಸಿದರು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಇಂದಿರಾ, ನಗರಸಭೆ ಉಪಾಧ್ಯಕ್ಷ ಖಾದರ್ ಖಾನ್, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಆಶಾ ಮಾತನಾಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ನಂಜೇಗೌಡ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಇಂದಿರಾದೇವಿ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಬಿ.ಗುರಪ್ಪ ಹಾಜರಿದ್ದರು.

ಈ ಸಂದರ್ಭದಲ್ಲಿ ಅಂಗವಿಕಲ ಫಲಾನುಭವಿಗಳಿಗೆ ಚೆಕ್ ವಿತರಿಸಲಾಯಿತು. ಮದಕರಿ ವೃತ್ತದಿಂದ ಕ್ರೀಡಾಂಗಣದವರೆಗೆ ಜಾಥಾ ಕಾರ್ಯಕ್ರಮ ನಡೆಯಿತು.

‘ಅಂಗವೈಕಲ್ಯ ಮನಸ್ಸಿಗಲ್ಲ’
ಅಂಗವಿಕಲರ ಬದುಕಿಗೆ ಸರ್ಕಾರ ನೀಡುವ ವೇತನವೇ ಸಾಕು ಎನ್ನುವ ಮನಸ್ಥಿತಿಯಿಂದ ಮೊದಲು ಹೊರಬನ್ನಿ. ಅಂಗವೈಕಲ್ಯ ದೇಹಕ್ಕೆ ಹೊರತು ಮನಸ್ಸು ಹಾಗೂ ಬುದ್ಧಿ ಶಕ್ತಿಗಲ್ಲ. ನಿಮ್ಮಲಿರುವ ಸಾಮರ್ಥ್ಯ ಹಾಗೂ ಯೋಗ್ಯತೆ ಅರಿಯಲು ಮುಂದಾದರೆ ಸಾಧನೆಗೆ ನೂರಾರು ದಾರಿಗಳು ತೆರೆದುಕೊಳ್ಳುತ್ತವೆ.

– ಸದಾಶಿವ ಎಸ್‌.ಸುಲ್ತಾನಪುರಿ , ನ್ಯಾಯಾಧೀಶ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT