ADVERTISEMENT

ಅಣ್ಣಾ ಹಜಾರೆ ಬೆಂಬಲಿಸಿ ವಿವಿಧೆಡೆ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2011, 8:00 IST
Last Updated 26 ಆಗಸ್ಟ್ 2011, 8:00 IST
ಅಣ್ಣಾ ಹಜಾರೆ ಬೆಂಬಲಿಸಿ ವಿವಿಧೆಡೆ ಪ್ರತಿಭಟನೆ
ಅಣ್ಣಾ ಹಜಾರೆ ಬೆಂಬಲಿಸಿ ವಿವಿಧೆಡೆ ಪ್ರತಿಭಟನೆ   

ಹೊಸದುರ್ಗ: ಭ್ರಷ್ಟಾಚಾರದ ವಿರುದ್ಧ ಅಣ್ಣಾ ಹಜಾರೆ ಅವರು ನಡೆಸುತ್ತಿರುವ ಹೋರಾಟ ಬೆಂಬಲಿಸಿ ಹಾಗೂ ರಾಜ್ಯದಲ್ಲಿ ನಡೆದಿರುವ ಗಣಿ ಅಕ್ರಮ ಕುರಿತಂತೆ ಲೋಕಾಯುಕ್ತರು ಸಲ್ಲಿಸಿರುವ ವರದಿಯಲ್ಲಿರುವ ತಪ್ಪಿತಸ್ಥರ ವಿರುದ್ಧ ತನಿಖೆ ನಡೆಸುವಂತೆ ಆಗ್ರಹಿಸಿ ಗುರುವಾರ ಸಿಪಿಐ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ  ಸಿಪಿಐ ತಾಲ್ಲೂಕು ಕಾರ್ಯದರ್ಶಿ ಕೆ.ಎನ್. ರಮೇಶ್ ಮಾತನಾಡಿ, ಜನಲೋಕಪಾಲ ಮಸೂದೆ ಜಾರಿಗೆ ತರುವಂತೆ ಅಣ್ಣಾ ಹಜಾರೆ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರೂ ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸದೆ ಹೋರಾಟ ಹತ್ತಿಕ್ಕುವ ಪ್ರಯತ್ನ ನಡೆಸುತ್ತಿದೆ ಎಂದು ದೂರಿದರು.

ಪ್ರತಿಭಟನೆಯಲ್ಲಿ ಪಕ್ಷದ ಕಾರ್ಯಕರ್ತರಾದ ಎನ್.ಸಿ. ಕುಮಾರಸ್ವಾಮಿ, ಬಸಣ್ಣ, ಚನ್ನವೀರಪ್ಪ, ರುದ್ರಮ್ಮ, ಕೆಂಚಪ್ಪ, ಬಸವರಾಜನಾಯ್ಕ, ಜಗದೀಶ್  ಲೋಕೇಶ್, ಹನುಮಂತಪ್ಪ ಮತ್ತಿತರರು ಭಾಗವಹಿಸಿದ್ದರು.

ಪಂಜಿನ ಮೆರವಣಿಗೆ: ಜನಲೋಕಪಾಲ ಮಸೂದೆ ಜಾರಿಗೆ ಆಗ್ರಹಿಸಿ ತಾಲ್ಲೂಕು ಬಿಜೆಪಿ ಯುವಮೋರ್ಚಾ ಸದಸ್ಯರು ಬುಧವಾರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪಂಜಿನ ಮೆರವಣಿಗೆ ನಡೆಸಿದರು.
ಟಿ.ಬಿ. ವೃತ್ತದಲ್ಲಿ ಸೇರಿದ್ದ ನೂರಕ್ಕೂ ಅಧಿಕ ಯುವ ಕಾರ್ಯಕರ್ತರು ಪಂಜು ಹಿಡಿದು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಯುವ ಮೋರ್ಚಾ ಅಧ್ಯಕ್ಷ ಎಸ್. ಶಿವಪ್ರಸಾದ್(ಪಚ್ಚಿ), ಪ್ರಧಾನ ಕಾರ್ಯದರ್ಶಿ ಲಿಂಗದೇವರು, ಮುಖಂಡರಾದ ಪ್ರದೀಪ್, ತುಂಬಿನಕೆರೆ ಬಸವರಾಜು, ಶಶಿಕುಮಾರ್,  ಹನುಮಂತಪ್ಪ, ವಿದ್ಯಾರ್ಥಿ ಮುಖಂಡರಾದ ಮಂಜುನಾಥ್, ಪಂಪಾ, ಚನ್ನಬಸವಯ್ಯ ಮತ್ತಿತರರು ನೇತೃತ್ವ ವಹಿಸಿದ್ದರು.

ರೈತಸಂಘ ಧರಣಿ
ಚಳ್ಳಕೆರೆ: ಅಣ್ಣಾ ಹಜಾರೆ ಅವರಿಗೆ ಬೆಂಬಲ ಸೂಚಿಸಿ ಗುರುವಾರ ತಾಲ್ಲೂಕು ರೈತಸಂಘದ ಕಾರ್ಯಕರ್ತರು ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಧರಣಿ ನಡೆಸಿದರು.ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರನ್ನು ಹಿಂಸೆ ಮಾಡಿ ಹಣವನ್ನು ಕೊಳ್ಳೆ ಹೊಡೆಯುತ್ತಿರುವ ರಾಜಕಾರಣಿಗಳನ್ನು ನಿಯಂತ್ರಿಸಲು ಜನ ಲೋಕಪಾಲ ಮಸೂದೆ ಅತ್ಯಗತ್ಯವಾಗಿ ಬೇಕಾಗಿದೆ ಎಂದು ಕಾರ್ಯಕರ್ತರು ಆಗ್ರಹಿಸಿದರು.

ಕೇಂದ್ರ ಸರ್ಕಾರ ಜನಸಾಮಾನ್ಯರಿಗೆ ಒಳಿತಾಗುವ ಯಾವುದೇ ತೀರ್ಮಾನ ತೆಗೆದುಕೊಳ್ಳುವಲ್ಲಿ ಮೀನ-ಮೇಷ ಎಣಿಸುತ್ತಿರುವುದು ಜನವಿರೋಧಿ ಆಡಳಿತಕ್ಕೆ ಹಿಡಿದ ಕನ್ನಡಿ ಆಗಿದೆ ಎಂದು ಕಾರ್ಯಕರ್ತರು ಬೇಸರ ವ್ಯಕ್ತಪಡಿಸಿದರು.  

ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ದಿಕ್ಕಾರ ಕೂಗುತ್ತಾ ಆಗಮಿಸಿದ ರೈತ ಸಂಘದ ಕಾರ್ಯಕರ್ತರು ಉಪತಹಶೀಲ್ದಾರ್ ವಿರೂಪಾಕ್ಷಪ್ಪ ಅವರಿಗೆ ಮನವಿ ಸಲ್ಲಿಸಿದರು.ರೈತ ಮುಖಂಡ ಕೆ.ಪಿ. ಭೂತಯ್ಯ, ಶ್ರೀನಿವಾಸರೆಡ್ಡಿ, ಮಾಜಿ ಪುರಸಭೆ ಸದಸ್ಯ ಎಚ್.ಎಸ್. ಸೈಯ್ಯದ್, ಟಿ. ತಿಪ್ಪೇಸ್ವಾಮಿ, ಓಬಾನಾಯ್ಕ, ಮಲ್ಲೇಶಪ್ಪ, ಸಂಗಮೇಶ ಶಾಸ್ತ್ರಿ ಇನ್ನಿತರರು ಪಾಲ್ಗೊಂಡಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.