ADVERTISEMENT

ಅಧಿಕಾರಿಗಳ ಮೇಲೆ ಮೊಕದ್ದಮೆ ಎಚ್ಚರಿಕೆ

ಹೊಳಲ್ಕೆರೆ: ಸೂಳೆಕೆರೆಯಿಂದ ಕಲುಷಿತ ನೀರು ಸರಬರಾಜು

​ಪ್ರಜಾವಾಣಿ ವಾರ್ತೆ
Published 14 ಜೂನ್ 2013, 10:02 IST
Last Updated 14 ಜೂನ್ 2013, 10:02 IST

ಹೊಳಲ್ಕೆರೆ: ಪಟ್ಟಣಕ್ಕೆ ಸರಬರಾಜು ಆಗುತ್ತಿರುವ ಸೂಳೆಕೆರೆ ನೀರು ಕೆಸರು ನೀರಿನಂತಿದ್ದು, ಜನ ಅನಿವಾರ್ಯವಾಗಿ ಇದೇ ನೀರನ್ನು ಕುಡಿಯುವ ಪರಿಸ್ಥಿತಿ ಇದೆ.ಕುಡಿಯುವ ನೀರಿನಲ್ಲಿ ಕೆಂಪುಮಣ್ಣು, ಕಸ-ಕಡ್ಡಿ ಬರುತ್ತಿರುವ ಬಗ್ಗೆ ಅನೇಕ ಬಾರಿ ಅಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ.

ಇದರಿಂದ ನಾಗರಿಕರು ಒಂದೆರಡು ದಿನಗಳಲ್ಲಿ ಶುದ್ಧ ಕುಡಿಯುವ ನೀರು ಬಿಡದಿದ್ದರೆ, ಎಂಜಿನಿಯರ್, ಪ.ಪಂ. ಮುಖ್ಯಾಧಿಕಾರಿ ಮತ್ತು ಸಂಬಂಧಿಸಿದ ಅಧಿಕಾರಿಗಳ ಮೇಲೆ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡುವ ತೀರ್ಮಾನ ತೆಗೆದುಕೊಂಡಿದ್ದಾರೆ.

ತಾಲ್ಲೂಕಿನ ಹಿರೇಕಂದವಾಡಿ ಸಮೀಪ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನೀರು ಶುದ್ಧೀಕರಣ ಘಟಕ ಸ್ಥಾಪಿಸಲಾಗಿದೆ. ಇಲ್ಲಿಂದಲೇ ಒಂದು ಮಾರ್ಗದಲ್ಲಿ ಚಿತ್ರದುರ್ಗ, ಮತ್ತೊಂದು ಮಾರ್ಗದಲ್ಲಿ ಬಿ.ದುರ್ಗ, ಚಿಕ್ಕಜಾಜೂರು ಭಾಗದ ಹಳ್ಳಿಗಳ ಮೂಲಕ ಪಟ್ಟಣಕ್ಕೆ ಸಂಪರ್ಕ ಕಲ್ಪಿಸಲಾಗಿದೆ.

ಚಿತ್ರದುರ್ಗಕ್ಕೆ ಸರಬರಾಜು ಆಗುವ ನೀರಿನ ಬಗ್ಗೆ ಇದುವರೆಗೆ ಯಾವುದೇ ದೂರುಗಳಿಲ್ಲ. ಆದರೆ, ಪಟ್ಟಣ ಮತ್ತು ಈ ಮಾರ್ಗದ ಹಳ್ಳಿಗಳಿಗೆ ಸರಬರಾಜು ಆಗುವ ನೀರು ಮಣ್ಣು ಮಿಶ್ರಿತವಾಗಿರುವುದು ಆಶ್ಚರ್ಯ ತಂದಿದೆ. ಎರಡು ಕೊಡ ನೀರನ್ನು ಕೊಳಗದಲ್ಲಿ ಸಂಗ್ರಹಿಸಿದರೆ ಒಂದು ದಿನದ ನಂತರ ತಳದಲ್ಲಿ ಸುಮಾರು ಒಂದು ಇಂಚು ಎತ್ತರದಷ್ಟು ಮಣ್ಣು ತುಂಬಿರುತ್ತದೆ.

ನಲ್ಲಿಯಿಂದ ಬರುವ ನೀರನ್ನು ನೇರವಾಗಿ ಸೋಸಲೂ ಬರುವುದಿಲ್ಲ. ಆರ್‌ಒ ವ್ಯವಸ್ಥೆ ಇರುವ ಫಿಲ್ಟರ್‌ಗಳಲ್ಲಿ ಮಾತ್ರ ನೀರು ಶುದ್ಧೀಕರಿಸಲು ಸಾಧ್ಯವಿದ್ದು, ಇಷ್ಟು ಕಲುಷಿತ ನೀರನ್ನು ಸ್ವಚ್ಛ ಮಾಡುವುದರಿಂದ ಅವುಗಳ ಮೆಂಬ್ರಿನ್‌ಗಳು ಕೂಡ ಒಂದೆರಡು ತಿಂಗಳಿಗೇ ಹಾಳಾಗಿ ಹೋಗುತ್ತವೆ. ಇದರಿಂದ ವರ್ಷಕ್ಕೆ ಎರಡು ಬಾರಿ ಸುಮಾರು ರೂ 9,000 ದುಬಾರಿ ಹಣ ಖರ್ಚು ಮಾಡಬೇಕಾದ ಅನಿವಾರ್ಯತೆ ಇದೆ.

ಅಧಿಕಾರಿಗಳು ಶುದ್ಧೀಕರಣ ಘಟಕ ಕಾರ್ಯನಿರ್ವಹಿಸುವ ಬಗ್ಗೆ ನಾಗರಿಕರಿಗೆ ತೋರಿಸಬೇಕು. ಶುದ್ಧೀಕರಣ ಆದ ನಂತರ ಬರುವ ನೀರನ್ನು ಪರೀಕ್ಷಿಸಬೇಕು. ಇದು ಕುಡಿಯಲು ಯೋಗ್ಯವೇ ಎಂದು ಪರಿಶೀಲಿಸಿದ ನಂತರವೇ ನೀರು ಬಿಡಬೇಕು ಎಂದು ರೋಟರಿಕ್ಲಬ್‌ನ ಮಲ್ಲಿಕಾರ್ಜುನಪ್ಪ, ಸುದರ್ಶನ ಕುಮಾರ್ ಹೇಳುತ್ತಾರೆ.

ಮಕ್ಕಳಿಗೆ ಮಾರಕ: `ಕಲುಷಿತ ನೀರು ಕುಡಿಯುವುದರಿಂದ ದೊಡ್ಡವರಿಗಿಂತ ಮಕ್ಕಳ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಕೊಳಕು ನೀರು ಸೇವಿಸುವುದರಿಂದ ಅನೇಕ ರೋಗಗಳು ತಗಲುವ ಸಾಧ್ಯತೆ ಇದೆ ಎನ್ನುತ್ತಾರೆ ಮಕ್ಕಳತಜ್ಞ ಡಾ.ಮಂಜುನಾಥ್.

ಅಸಮರ್ಪಕ ನಿರ್ವಹಣೆ: ಕುಡಿಯುವ ನೀರಿನ ನಿರ್ವಹಣೆ ಸರಿಯಾಗಿ ನಡೆಯುತ್ತಿಲ್ಲ. ಶುದ್ಧೀಕರಣ ಘಟಕದಿಂದ ಬರುವ ಮಾರ್ಗದಲ್ಲಿ ಎಲ್ಲೆಂದರಲ್ಲಿ ಪೈಪ್‌ಗಳು ಹೊಡೆದಿದ್ದು, ದುರಸ್ತಿ ಮಾಡುವ ಗೋಜಿಗೆ ಅಧಿಕಾರಿಗಳು  ಹೋಗಿಲ್ಲ. ಈಗ ಮಳೆಗಾಲ ಆಗಿರುವುದರಿಂದ ಮಳೆನೀರು ಪೈಪ್‌ಗಳಲ್ಲಿ ಸೇರಿಕೊಂಡು, ನೀರು ಬಿಟ್ಟಾಗ ಕೆಸರು ಮಿಶ್ರಿತ ನೀರು ಬರುತ್ತದೆ ಎನ್ನುವುದು ನಾಗರಿಕರ ದೂರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.