ADVERTISEMENT

ಅನಿಯಮಿತ ವಿದ್ಯುತ್ ಕಡಿತಕ್ಕೆ ಆಕ್ರೋಶ .ಬೆಸ್ಕಾಂ ಕಚೇರಿಗೆ ರೈತರ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2011, 6:10 IST
Last Updated 30 ಮಾರ್ಚ್ 2011, 6:10 IST
ಅನಿಯಮಿತ ವಿದ್ಯುತ್ ಕಡಿತಕ್ಕೆ ಆಕ್ರೋಶ .ಬೆಸ್ಕಾಂ ಕಚೇರಿಗೆ ರೈತರ ಮುತ್ತಿಗೆ
ಅನಿಯಮಿತ ವಿದ್ಯುತ್ ಕಡಿತಕ್ಕೆ ಆಕ್ರೋಶ .ಬೆಸ್ಕಾಂ ಕಚೇರಿಗೆ ರೈತರ ಮುತ್ತಿಗೆ   

ಚಿತ್ರದುರ್ಗ: ವಿದ್ಯುತ್ ಕಡಿತ ಗೊಳಿಸುತ್ತಿರುವುದನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ಕಾರ್ಯಕರ್ತರು ಮಂಗಳವಾರ ಬೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಈಗಾಗಲೇ ಬೇಸಿಗೆ ಆರಂಭವಾಗಿದ್ದು ನೀರಿನ ಸಮಸ್ಯೆ ಎದುರಾಗಿದೆ. ಹಳ್ಳಿಗಳಲ್ಲಿ ವಿದ್ಯುತ್ ಕಡಿತದಿಂದ ನೀರಾವರಿಗೆ ಹಾಗೂ ರೈತ ಮಕ್ಕಳ ವಿದ್ಯಾಭ್ಯಾಸಕ್ಕೆ ತೀವ್ರ ತೊಂದರೆಯಾಗಿದೆ. ದಿನದಲ್ಲಿ 3 ಗಂಟೆಯು ಸಹ ವಿದ್ಯುತ್ ಸರಬರಾಜು ಮಾಡುತ್ತಿಲ್ಲ ಎಂದು ಬೆಸ್ಕಾಂ ಕಚೇರಿ ಆವರಣದಲ್ಲಿ ಧರಣಿ ಕುಳಿತು ಬೆಸ್ಕಾಂ ವಿರುದ್ಧ ಧಿಕ್ಕಾರ ಕೂಗಿದರು.
 

ಪ್ರತಿಭಟನೆ ನೇತೃತ್ವವಹಿಸಿದ್ದ ರೈತಸಂಘ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ಬಿಜೆಪಿ ಅಧಿಕಾರಕ್ಕೆ ಬರುವ ಮುನ್ನ ರೈತರಿಗೆ ದಿನದ 24 ಗಂಟೆ ಗುಣಮಟ್ಟದ ವಿದ್ಯುತ್ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ, ಬಿಜೆಪಿ ಅಧಿಕಾರಕ್ಕೆ ಬಂದರೂ ಇದುವರೆಗೂ ಗುಣಮಟ್ಟದ ವಿದ್ಯುತ್ ನೀಡದೇ ರೈತರನ್ನು ವಂಚಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಈ ಹಿಂದೆ ಇಂಧನ ಸಚಿವರಾಗಿದ್ದ ಕೆ.ಎಸ್. ಈಶ್ವರಪ್ಪ ಹಾಗೂ ಹಾಲಿ ಇಂಧನ ಸಚಿವೆ ಶೋಭಾ ಕರಂದ್ಲಾಜೆ ರೈತರಿಗೆ ಗುಣಮಟ್ಟದ ವಿದ್ಯುತ್ ಸರಬರಾಜು ಮಾಡುತ್ತೇವೆ ಎಂದು ಭರವಸೆ ನೀಡುತ್ತಾ ರೈತರನ್ನು ಮೋಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ವಿದ್ಯುತ್ ಕಡಿತವನ್ನು ತಕ್ಷಣ ನಿಲ್ಲಿಸಬೇಕು. ಇಲ್ಲದಿದ್ದಲ್ಲಿ ಬಾರಿ ಕೋಲು ಹಿಡಿದು ಪ್ರತಿಭಟನೆ ಮಾಡುವ ಬದಲು ಚಪ್ಪಲಿ ಹಿಡಿದು ಪ್ರತಿಭಟನೆ ಮಾಡಲಾಗುವುದು ಎಂದು ಕೋಡಿಹಳ್ಳಿ ಚಂದ್ರಶೇಖರ್ ಎಚ್ಚರಿಸಿದರು.
 

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ರೈತರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ. ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿ, ತಾಲ್ಲೂಕು ದಂಡಾಧಿಕಾರಿ ಇದ್ದರೂ ರೈತರ ಮೇಲಿನ ದೌರ್ಜನ್ಯ ನಿಂತಿಲ್ಲ. ಇಂತಹ ಹುದ್ದೆಗಳು ಅಗತ್ಯವೇ ಎಂದು ಪ್ರಶ್ನಿಸಿದರು. ರೈತಸಂಘ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎಚ್.ಆರ್. ಬಸವರಾಜಪ್ಪ, ಈಚಗಟ್ಟದ ಸಿದ್ಧವೀರಪ್ಪ, ಜಿಲ್ಲಾ ಘಟಕದ ಅಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ, ಚಿಕ್ಕಕಬ್ಬಿಗೆರೆ ನಾಗರಾಜ್, ಎಸ್. ಬಯಲಪ್ಪ ಪಾಲ್ಗೊಂಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.