ADVERTISEMENT

ಅನುದಾನ ಸದ್ಬಳಕೆಗೆ ಅಧಿಕಾರಿಗಳಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2011, 6:10 IST
Last Updated 22 ಫೆಬ್ರುವರಿ 2011, 6:10 IST

ಹೊಳಲ್ಕೆರೆ: ಅಭಿವೃದ್ಧಿ ಕಾರ್ಯಗಳಿಗೆ ಬಿಡುಗಡೆಯಾಗಿರುವ ಸರ್ಕಾರದ ಅನುದಾನ ವಾಪಸ್ ಹೋಗದಂತೆ ತ್ವರಿತವಾಗಿ ಕೆಲಸ ಮಾಡಿ ಎಂದು ಶಾಸಕ ಎಂ. ಚಂದ್ರಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದರು.ಪಟ್ಟಣದ ತಾ.ಪಂ. ಸಭಾಂಗಣದಲ್ಲಿ ಸೋಮವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಇಲಾಖಾವಾರು ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.

ವಿವಿಧ ಇಲಾಖೆಗಳ ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು, ಈಗ ನಡೆಯುತ್ತಿರುವ ಕಾಮಗಾರಿಗಳನ್ನು ಮಾರ್ಚ್ ಅಂತ್ಯದ ಒಳಗೆ ಮುಗಿಸಬೇಕು. ಅನಗತ್ಯ ವಿಳಂಬ ಮಾಡದೆ ಎಲ್ಲಾ ಕೆಲಸಗಳನ್ನು ಪೂರ್ಣ ಗೊಳಿಸಬೇಕು. ಬೇಜವಾಬ್ದಾರಿಯಿಂದ ವರ್ತಿಸದೆ, ಅನುದಾನದ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸೂಚಿಸಿದರು.

ತಾಲ್ಲೂಕಿನ ಅನೇಕ ಗ್ರಾಮಗಳಲ್ಲಿ ಸುಸಜ್ಜಿತ ಆಸ್ಪತ್ರೆ ಕಟ್ಟಿಸಲಾಗಿದೆ. ಆದರೆ ವೈದ್ಯರ ಕೊರತೆ ಇದೆ ಎಂಬ ದೂರುಗಳು ಬಂದಿವೆ. ಅಗತ್ಯ ಇರುವ ಕಡೆ ವೈದ್ಯರ ನಿಯೋಜನೆ ಮಾಡಬೇಕು ಎಂದು ಆರೋಗ್ಯಾಧಿಕಾರಿಗೆ ಸೂಚಿಸಿದರು. ಶಾಲೆಗಳಿಗೆ ಬಿಸಿಯೂಟ ತಯಾರಿಕೆಗೆ ಅಡುಗೆ ಅನಿಲ ಮತ್ತು ಪಡಿತರ ಸಾಮಗ್ರಿಗಳನ್ನು ಸಮರ್ಪಕವಾಗಿ ಸರಬರಾಜು ಮಾಡಲು ಕ್ರಮಕೈಗೊಳ್ಳಬೇಕು ಎಂದು ಬಿಇಒ ಮಂಜುನಾಥ್ ಅವರಿಗೆ ಸೂಚನೆ ನೀಡಿದರು.

ಜಿ.ಪಂ. ಎಂಜಿನಿಯರಿಂಗ್ ಮತ್ತು ಲೋಕೋಪಯೋಗಿ ಇಲಾಖೆಗಳ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕರು, ರಸ್ತೆ, ಕುಡಿಯುವ ನೀರು ಮತ್ತಿತರ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಕೋಟಿಗಟ್ಟಲೆ ಅನುದಾನ ಬಂದಿದೆ. ಆದರೂ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಆಗಿಲ್ಲ. ಕೆಲವು ಕಾಮಗಾರಿಗಳು ಮಂದಗತಿಯಲ್ಲಿ ನಡೆಯುತ್ತಿವೆ.ಕಾಮಗಾರಿ ನಡೆಯುವ ಸ್ಥಳದಲ್ಲಿ ಹಾಜರಿದ್ದು, ಮೇಲ್ವಿಚಾರಣೆ ಮಾಡುವ ಮೂಲಕ ಗುಣಮಟ್ಟದ ಕೆಲಸ ಮಾಡಿಸಬೇಕು. ಇಲ್ಲವಾದಲ್ಲಿ ಅನುದಾನ ತಡೆಹಿಡಿಯಲಾಗುವುದು ಎಂದು ಎಚ್ಚರಿಸಿದರು.

ಚಿಕ್ಕಜಾಜೂರು ಸುತ್ತಲಿನ ಹಳ್ಳಿಗಳಿಗೆ ಸರಬರಾಜಾಗುವ ಸೂಳೆಕೆರೆ ನೀರು ಹೆಚ್ಚಾಗಿ, ವ್ಯರ್ಥವಾಗುತ್ತಿದೆ ಎಂಬ ದೂರು ಬಂದಿದೆ. ಆದ್ದರಿಂದ ಆ ಭಾಗದ ಎಲ್ಲಾ ಹಳ್ಳಿಗಳಲ್ಲಿ ಓವರ್‌ಹೆಡ್ ಟ್ಯಾಂಕ್ ನಿರ್ಮಿಸಲು ಕ್ರಮಕೈಗೊಳ್ಳಬೇಕು. ಪಟ್ಟಣದಲ್ಲಿ ಸಮರ್ಪಕವಾಗಿ ಕಂದಾಯ ವಸೂಲಿ ಮಾಡಬೇಕು. ಪಟ್ಟಣದ ಗಣಪತಿ ರಸ್ತೆ ಕಾಮಗಾರಿ ಕೆಲಸ ನಿಂತಿದೆ.

ಇದರಿಂದ ಅಲ್ಲಿನ ನಿವಾಸಿಗಳಿಗೆ ತೊಂದರೆಯಾಗಿದ್ದು, ಎಲ್ಲರ ಮೇಲೆ ಹಿಡಿಶಾಪ ಹಾಕುತ್ತಿದ್ದಾರೆ. ಇನ್ನು ಒಂದು ವಾರದಲ್ಲಿ ಕಾಮಗಾರಿ ಪೂರ್ಣಗೊಳಿಸಿ, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಪ.ಪಂ. ಮುಖ್ಯಾಧಿಕಾರಿ ವೀರಯ್ಯ ಮತ್ತು ಎಂಜಿನಿಯರ್‌ಗೆ ಚಂದ್ರಪ್ಪ ಸೂಚಿಸಿದರು.ತಾ.ಪಂ. ಅಧ್ಯಕ್ಷೆ ಪ್ರೇಮಾ ಧನಂಜಯ, ಉಪಾಧ್ಯಕ್ಷೆ ಪುಟ್ಟೀಬಾಯಿ, ಇಒ ಡಾ.ಶ್ರೀಧರ್ ಮತ್ತು ತಾಲ್ಲೂಕುಮಟ್ಟದ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.