ADVERTISEMENT

ಅನುಮತಿ ಇಲ್ಲದೇ ಕಾಮಗಾರಿ ಆರಂಭಿಸಬೇಡಿ: ಶಾಸಕ ತಿಪ್ಪೇಸ್ವಾಮಿ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2017, 8:35 IST
Last Updated 5 ಡಿಸೆಂಬರ್ 2017, 8:35 IST

ಮೊಳಕಾಲ್ಮುರು: ‘ಕ್ಷೇತ್ರದ ಅಭಿವೃದ್ಧಿಗಾಗಿ ಯಾರೇ ಅನುದಾನ ಹಾಕಿಸಿಕೊಂಡು ಬಂದರೂ ಅದನ್ನು ಮುಕ್ತವಾಗಿ ಸ್ವಾಗತಿಸುತ್ತೇನೆ. ಆದರೆ, ಆ ಕಾಮಗಾರಿ ಆರಂಭಕ್ಕೂ ಮುನ್ನ ನನ್ನ ಅನುಮತಿಯನ್ನು ಕಡ್ಡಾಯವಾಗಿ ಅಧಿಕಾರಿಗಳು ಪಡೆಯಲೇಬೇಕು’ ಎಂದು ಶಾಸಕ ಎಸ್‌. ತಿಪ್ಪೇಸ್ವಾಮಿ ಸೂಚಿಸಿದರು. ಇಲ್ಲಿ ಸೋಮವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಹಣದ ಆಸೆಗೆ ಕಾಮಗಾರಿ ಹಾಕಿಸಿಕೊಂಡು ಬರುವುದು ಹೆಚ್ಚಾಗಿದೆ. ಎಸ್‌ಸಿಪಿ, ಟಿಎಸ್‌ಪಿ ಯೋಜನೆಯಲ್ಲಂತೂ ನನಗೆ ಆಶ್ಚರ್ಯವಾಗುವ ರೀತಿ ಕೆಲಸ ಹಾಕಿಸಿಕೊಂಡು ಬರಲಾಗುತ್ತಿದೆ. ನಂತರ ಕಳಪೆ ಕೆಲಸ ಮಾಡಿ ನನ್ನ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡಲಾಗುತ್ತಿದೆ. ಇದಕ್ಕೆ ಕೆಲ ಅಧಿಕಾರಿಗಳು ಸಹ ಕೈಜೋಡಿಸುತ್ತಿದ್ದಾರೆ. ನಿಮಗೆ ಮಾನವೀಯತೆ ಇದ್ದರೆ ತಪ್ಪು ತಿದ್ದಿಕೊಳ್ಳಿ’ ಎಂದು ತಾಕೀತು ಮಾಡಿದರು.

‘ಈಚೆಗೆ ಚಿಕ್ಕನಹಳ್ಳಿ ಸಂಪರ್ಕ ರಸ್ತೆ ಕಾರ್ಯವನ್ನು ₹ 2 ಕೋಟಿ ವೆಚ್ಚದಲ್ಲಿ ಮಾಡಲಾಗಿದೆ. ಇದರ ಕಳಪೆ ಬಗ್ಗೆ ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ. ರಸ್ತೆಯನ್ನು ಬಳ್ಳಾರಿ ಗ್ರಾಮೀಣ ಶಾಸಕ ಎನ್‌.ವೈ.ಗೋಪಾಲಕೃಷ್ಣ ಸೂಚನೆ ಮೇರೆಗೆ ಮಂಜೂರಾಗಿದೆ. ಇದಕ್ಕೆ ಅವರು ಲಂಚ ಪಡೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ನೀವೆಷ್ಟು ಲಂಚ ಪಡೆದಿದ್ದೀರಿ’ ಎಂದು ಭೂಸೇನಾ ನಿಗಮ ಅಧಿಕಾರಿಗಳನ್ನು ಪ್ರಶ್ನಿಸಿದರು.

ADVERTISEMENT

ಇದಕ್ಕೆ ತಡವರಿಸಿದ ಅಧಿಕಾರಿ ಉಮೇಶ್‌, ‘ಕಾಮಗಾರಿ ಕಳಪೆಯಾಗಿರುವುದು ನಿಜ. ಸರಿಪಡಿಸಲು ಕ್ರಮ ಕೈಗೊಳ್ಳಲಾಗಿದೆ’ ಎಂದು ಸಮಜಾಯಿಷಿ ನೀಡಿದರು. ‘ಎಸ್‌ಇಪಿ, ಟಿಎಸ್‌ಪಿ ಯೋಜನೆಯಲ್ಲಿ ₹ 20 ಲಕ್ಷ ಅನುದಾನ ಹಾಕಿಸಿಕೊಂಡು ಬಂದವರು ದೊಡ್ಡದಾಗಿ ನಾಮಫಲಕ ಹಾಕಿಸಿಕೊಂಡಿದ್ದಾರೆ. ಆದರೆ, ₹ 50 ಕೋಟಿ ಅನುದಾನ ಹಾಕಿಸಿಕೊಟ್ಟಿದ್ದರೂ ನನ್ನ ಹೆಸರು ರಾಜಕೀಯ ಕಾರಣದಿಂದಾಗಿ ಎಲ್ಲಿಯೂ ಹಾಕಿಲ್ಲ. ಕೂಡಲೇ ಎಲ್ಲಾ ಗುತ್ತಿಗೆದಾರರಿಗೆ ಮತ್ತು ಎಂಜಿನಿಯರ್‌ಗಳಿಗೆ ತಕ್ಷಣವೇ ನನ್ನ ಕಾಮಗಾರಿಗಳಲ್ಲಿ ನಾಮಫಲಕವನ್ನು ಕಡ್ಡಾಯವಾಗಿ ಹಾಕಿಸಲು ಕ್ರಮ ಕೈಗೊಳ್ಳಿ’ ಎಂದು ಚಳ್ಳಕೆರೆ ಹಾಗೂ ಮೊಳಕಾಲ್ಮುರು ತಾಲ್ಲೂಕು ಪಂಚಾಯ್ತಿ ಇಒಗಳಿಗೆ ಸೂಚಿಸಿದರು.

‘ಗ್ರಾಮಗಳಲ್ಲಿ ಸ್ವಚ್ಛತೆ ಇಲ್ಲದೇ ರೋಗಗಳು ಹರಡುತ್ತಿವೆ. ಈ ಬಗ್ಗೆ ತಕ್ಷಣವೇ ಪಿಡಿಒಗಳು ಗಮನಹರಿಸಿ ಸ್ವಚ್ಛತೆ, ಫಾಗಿಂಗ್‌ ಮಾಡಿಸಲು ಮುಂದಾಗಬೇಕು. ಆರೋಗ್ಯ ಇಲಾಖೆ ಸಿಬ್ಬಂದಿ ಸಮಸ್ಯೆಯನ್ನೇ ದೊಡ್ಡದು ಮಾಡದೇ ಜನರಿಗೆ ಸೇವೆ ನೀಡಲು ಕ್ರಮ ಕೈಗೊಳ್ಳಬೇಕು. ಅಗತ್ಯವಿರುವ ಎಎನ್‌ಎಂ ಹುದ್ದೆ ಹಾಗೂ ಸ್ಟ್ಯಾಫ್‌ನರ್ಸ್‌ ಪಟ್ಟಿ ನೀಡಿದಲ್ಲಿ ಮಂಜೂರಿಗೆ ಕ್ರಮ ಕೈಗೊಳ್ಳುತ್ತೇನೆ’ ಎಂದು ಆರೋಗ್ಯಾಧಿಕಾರಿ ಡಾ. ರಂಗನಾಥ್‌ ಅವರಿಗೆ ಸೂಚಿಸಿದರು.

ಅಕ್ರಮ– ಸಕ್ರಮ ಯೋಜನೆಯಲ್ಲಿ ಅರ್ಜಿ ಹಾಕಿರುವ ಫಲಾನುಭವಿಗಳಿಗೆ ಸಕ್ರಮ ಮಾಡಿಕೊಡಿಸಲು ಕ್ರಮ ಕೈಗೊಳ್ಳುವಂತೆ ಬೆಸ್ಕಾಂ ಅಧಿಕಾರಿಗಳಿಗೆ, ಮಾತೃಶ್ರೀ ಯೋಜನೆಯಲ್ಲಿ ಗುಣಮಟ್ಟ ಆಹಾರ ನೀಡುವಂತೆ ಸಿಡಿಪಿಒಗೆ, ಸಭೆಗೆ ಗೈರಾಗಿರುವ ಭದ್ರಾಮೇಲ್ದಂಡೆ ಮತ್ತು ಲೋಕೋಪಯೋಗಿ ಎಂಜಿನಿಯರ್‌ಗಳಿಗೆ ಕಾರಣ
ಕೇಳಿ ನೋಟಿಸ್‌ ನೀಡುವಂತೆ ಇಒಗಳಿಗೆ ಶಾಸಕ ತಿಪ್ಪೇಸ್ವಾಮಿ ಸೂಚಿಸಿದರು. ಚಳ್ಳಕೆರೆ ಉಪ ತಹಶೀಲ್ದಾರ್‌ ನಾಗರಾಜ್‌, ತಾಲ್ಲೂಕು ಪಂಚಾಯ್ತಿ ಇಒ ಸಿ.ಎನ್‌. ಚಂದ್ರಶೇಖರ್‌, ಚಳ್ಳಕೆರೆ ಇಒ ಈಶ್ವರ ಪ್ರಸಾದ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.