ಚಿತ್ರದುರ್ಗ: ಚಳ್ಳಕೆರೆ ತಾಲ್ಲೂಕು ಬಂಜಿಗೇರೆ ಕೆರೆಯಲ್ಲಿ ರೈತರು ಕೆರೆ ಹೂಳು ತೆಗೆಯಲು ಹೋದರೆ ಕೆರೆ ಅಭಿವೃದ್ಧಿ ಸಂಘದವರು ಅಡ್ಡಿಪಡಿಸಿ ಹಣ ವಸೂಲು ಮಾಡುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಆರೋಪಿಸಿದೆ.
ರೈತರು ಹೊಲಗಳಿಗೆ ಕೆರೆ ಮಣ್ಣು ಸಾಗಿಸುವ ಸಂದರ್ಭ ಸಂಘದ ಕೆಲವರು ಅಡ್ಡಿಪಡಿಸುತ್ತಿದ್ದಾರೆ. ಕೆಲವರು ಗುಂಪು ಕಟ್ಟಿಕೊಂಡು ರೈತರ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ. ಉರುವಲು ಕಟ್ಟಿಗೆ ಮಹಿಳೆಯರು ಕೆರೆಗಳಿಗೆ ತೆರಳಿದರೆ ಅಲ್ಲಿಯೂ ಅಡ್ಡಿಪಡಿಸುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿ ಗಮನಹರಿಸಬೇಕು ಎಂದು ರೈತ ಸಂಘ ಮನವಿ ಸಲ್ಲಿಸಿದೆ.
ವಿಶ್ವಬ್ಯಾಂಕ್‌ನಿಂದ ಕೆರೆ ಹೊಳೆತ್ತಲು ಲಕ್ಷಾಂತರ ರೂಪಾಯಿ ಕೆರೆ ಅಭಿವೃದ್ಧಿ ಸಂಘಕ್ಕೆ ಬಂದಿದೆ. ಆದರೆ, ಸಂಘದವರು ಕೆರೆ ಹೂಳು ಎತ್ತುತ್ತಿಲ್ಲ. ರೈತರು ಜೆಸಿಬಿ ಮತ್ತು ಟ್ರ್ಯಾಕ್ಟರ್‌ಗಳನ್ನು ತೆಗೆದುಕೊಂಡು ತಮ್ಮ ಸ್ವಂತ ಖರ್ಚಿನಲ್ಲಿ ಮಣ್ಣು ತೆಗೆದುಕೊಂಡು ಹೋಗುತ್ತಿದ್ದಾರೆ. ಬಡವರಿಗೆ ಸಿಗಬೇಕಾದ ಕೆರೆ ಅಂಗಳದಲ್ಲಿನ ಜಾಲಿ ಗಿಡಗಳನ್ನು ಕೆರೆ ಸಂಘದವರು ಹರಾಜು ಮಾಡುತ್ತಿದ್ದಾರೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಸಂಘ ದೂರಿದೆ.
ಕೆರೆ ಅಭಿವೃದ್ಧಿ ಸಂಘ ಮಾಡಬೇಕಾದ ಕಾಮಗಾರಿಗಳನ್ನು ರೈತರು ತಮ್ಮ ಸ್ವಂತ ಖರ್ಚಿನಲ್ಲಿ ಕೆರೆ ಹೂಳು ತೆಗೆಯುತ್ತಿದ್ದರೂ ಸಂಘದವರು ರೈತರಿಂದ ಹಣ ವಸೂಲು ಮಾಡುತ್ತಿದ್ದಾರೆ. ಕೆರೆ ಅಭಿವೃದ್ಧಿ ಸಂಘದವರು ನಡೆಸುತ್ತಿರುವ ಅವ್ಯವಹಾರವನ್ನು ಲೋಕಾಯುಕ್ತರಿಂದ ತನಿಖೆ ನಡೆಸಬೇಕು ಎಂದು ರೈತ ಸಂಘದ ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ಆರ್.ಬಿ. ನಿಜಲಿಂಗಪ್ಪ, ಬಾಗೇನಾಳ್ ಕೊಟ್ರಬಸಪ್ಪ, ಬಿ.ಎಂ. ಬಸವರಾಜ್ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.