ADVERTISEMENT

ಅಸಮಾನತೆ ಹೋಗಲಾಡಿಸಿ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2011, 6:20 IST
Last Updated 11 ಏಪ್ರಿಲ್ 2011, 6:20 IST
ಅಸಮಾನತೆ ಹೋಗಲಾಡಿಸಿ
ಅಸಮಾನತೆ ಹೋಗಲಾಡಿಸಿ   

ಮೊಳಕಾಲ್ಮುರು: ಸಮಾಜಕ್ಕೆ ಮಾರಕವಾಗಿ ಕಾಡುತ್ತಿರುವ ಅಸಮಾನತೆ ಹಾಗೂ ಜಾತಿವ್ಯವಸ್ಥೆಯನ್ನು ಹೋಗಲಾಡಿಸಲು ಬಸವಣ್ಣ ಅವರ ಆದರ್ಶಗಳನ್ನು ರೂಢಿಸಿಕೊಳ್ಳಬೇಕು ಎಂದು ಮಾಜಿ ಶಾಸಕ ಎಚ್. ಆಂಜನೇಯ ಹೇಳಿದರು.

ತಾಲ್ಲೂಕಿನ ಸಿದ್ದಯ್ಯನಕೋಟೆಯಲ್ಲಿ ನಡೆಯುತ್ತಿರುವ ಶರಣ ಸಂಸ್ಕೃತಿ ಉತ್ಸವ ಮತ್ತು ಬಸವತತ್ವ, ಜಾನಪದ, ಸಾಹಿತ್ಯೋತ್ಸವದಲ್ಲಿ ಭಾನುವಾರ ಸಂಜೆ ಮಹಾಂತ ಗುರುಕಾರುಣ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜಾಗತೀಕರಣ ಕಾಲದಲ್ಲಿಯೂ ಜಾತಿಪದ್ಧತಿ ಎಂಬ ಪೆಡಂಭೂತ ಕಾಡುತ್ತಿರುವುದು ದುರದೃಷ್ಟಕರ ಸಂಗತಿ. ಇದನ್ನು ಹೋಗಲಾಡಿಸಲು ಶ್ರಮಿಸುತ್ತಿರುವ ಮಠಗಳ ಜತೆಯಲ್ಲಿ ಇಡೀ ಸಮುದಾಯ ಕಾರ್ಯಗತವಾಗಬೇಕಿದೆ ಎಂದು ಹೇಳಿದರು.

ನಿವೃತ್ತ ಅಬಕಾರಿ ಉಪ ಆಯುಕ್ತ ಸಾವಕ್ಕನವರ್ ಮಾತನಾಡಿ ಹಿಂದುಳಿದ ಪಂಗಡದ ವಿದ್ಯಾಂತವರು ಮುಂದಿನ ಪೀಳಿಗೆಗೆ ಜಾತಿಪದ್ಧತಿ ಅನಿಷ್ಠ ಹೋಗದಂತೆ ತಡೆಯಲು ಜಾಗೃತಿ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕು. ಸಮಾಜದಲ್ಲಿ ನೆಮ್ಮದಿಯನ್ನು ಹುಡುಕಲು ಮೊದಲು ಸಮಾನತೆ ಉಂಟು ಮಾಡಬೇಕು ಎಂದರು.ಇದೇ ವೇಳೆ ಹಾಸ್ಯನಟ ಟೆನಿಸ್‌ಕೃಷ್ಣ ಅವರಿಗೆ 2010-11ನೇ ಸಾಲಿನ ಮಹಾಂತ ಗುರುಕಾರುಣ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಇಳಕಲ್ ವಿಜಯ ಮಹಾಂತೇಶ್ವರ ಮಠದ ಡಾ.ಮಹಾಂತ ಅಪ್ಪಗಳು ನೇತೃತ್ವ ವಹಿಸಿದ್ದರು.ಚಿತ್ತರಗಿ ಸಂಸ್ಥಾನಮಠದ ಡಾ.ಮಹಾಂತ ಶಿವಯೋಗಿ, ಸಿಂಧನೂರು ಕಲ್ಯಾಣಾಶ್ರಮದ ಮಹಾಂತ ಸ್ವಾಮೀಜಿ ಸಾಲಿಮಠ, ಲಿಂಗಸಗೂರಿನ ಸಿದ್ದಲಿಂಗ ಸ್ವಾಮೀಜಿ, ಮರೇಗುದ್ದಿ ಗುರುಮಹಾಂತ ಮಠದ ಗುರುಮಹಾಂತ ಸ್ವಾಮೀಜಿ, ಸಿದ್ದಯ್ಯನಕೋಟೆ ಶಾಖಾಮಠದ ಬಸವಲಿಂಗ ಸ್ವಾಮೀಜಿ, ಮಠದ ಅಧ್ಯಕ್ಷ ಭೋಗೇಶ್‌ಗೌಡ, ಕಾರ್ಯದರ್ಶಿ ಪಿ. ಕಾಂತರಾಜ್, ವಸಂತ್ ಮಾಸ್ತರ್, ಡಿ.ಒ. ಮೊರಾರ್ಜಿ, ಕಲಾವಿದರ ವೇದಿಕೆ ಅಧ್ಯಕ್ಷ ಜಿ. ಶ್ರೀನಿವಾಸಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.