ADVERTISEMENT

ಆತಂಕವಾದದಿಂದ ಅಭಿವೃದ್ಧಿ ಕುಂಠಿತ:ವಿಷಾದ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2012, 10:15 IST
Last Updated 18 ಫೆಬ್ರುವರಿ 2012, 10:15 IST

ಚಿತ್ರದುರ್ಗ: ಆತಂಕವಾದದಿಂದ ದೇಶದ ಅಭಿವೃದ್ಧಿ ಕುಂಠಿತವಾಗುತ್ತಿದೆ ಎಂದು ಎಬಿವಿಪಿಯ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ರವಿಕುಮಾರ್ ಆತಂಕ ವ್ಯಕ್ತಪಡಿಸಿದರು.

ಕಬೀರಾನಂದ ಆಶ್ರಮದಲ್ಲಿ ನಡೆಯುತ್ತಿರುವ 82ನೇ ಮಹಾಶಿವರಾತ್ರಿ ಮಹೋತ್ಸವದಲ್ಲಿ  ರಾಷ್ಟ್ರೀಯ ಸಮಗ್ರತೆಗೆ ಆತಂಕವಾದದ ಸವಾಲುಗಳು ಕುರಿತು ಶುಕ್ರವಾರ ಮಾತನಾಡಿದರು.

ವಿಶ್ವದಲ್ಲಿ ಅತಿ ಹೆಚ್ಚು ಆತಂಕವಾದಕ್ಕೆ ಒಳಗಾಗಿರುವ ದೇಶ ಭಾರತ. ದೇಶದಲ್ಲಿ 800ಕ್ಕೂ ಹೆಚ್ಚು ಭಯೋತ್ಪಾದನೆ ಗುಂಪುಗಳಿವೆ. 600ಕ್ಕಿಂತ ಹೆಚ್ಚು ಜಿಲ್ಲೆಗಳಲ್ಲಿ ಆತಂಕವಾದದ ಚಟುವಟಿಕೆಗಳು ನಡೆಯುತ್ತಿವೆ. 2004ರಿಂದ 2007ರಲ್ಲಿ ಭಯೋತ್ಪಾದಕರಿಂದ 3,500 ಮಂದಿ ಮೃತಪಟ್ಟಿದ್ದಾರೆ. ನಕ್ಸಲೀಯರಿಂದ 2000- 2008ರವರೆಗೆ 2,700 ಮಂದಿ ಹತ್ಯೆಗೀಡಾಗಿದ್ದಾರೆ ಎಂದು ವಿವರಿಸಿದರು.

ಸಮಾಜದಲ್ಲಿ ಆತಂಕ ನಿರ್ಮಿಸಿದರೆ ಅಭಿವೃದ್ಧಿ ಸಾಧ್ಯವಿಲ್ಲ. ಪ್ರಜಾಪ್ರಭುತ್ವಕ್ಕೆ ದೊಡ್ಡ ಸವಾಲಾಗಿರುವುದು ಭಯೋತ್ಪಾದನೆ. ಇಂದಿನ ಆತಂಕವಾದದ ದಿನಗಳಲ್ಲಿ ರಾಷ್ಟ್ರೀಯ ಐಕ್ಯತೆ, ಭಾವೈಕ್ಯತೆ, ಸಮಗ್ರತೆಗೆ ಧಾರ್ಮಿಕ ಆಚರಣೆಗಳು ಬಹು ಮುಖ್ಯವಾಗಿವೆ. ಇಂತಹ ಸಂಧರ್ಭಗಳಲ್ಲಿ ದೇಶದ ಬದಲಾವಣೆಗಳಾಗಬೇಕಾದರೆ ಜನ ಸಾಮಾನ್ಯರೂ ಸಹಕಾರಿಯಾಗಬೇಕು ಎಂದು ಸಲಹೆ ನೀಡಿದರು.

ಕರ್ನಾಟಕ ರಕ್ಷಣಾ ವೇದಿಕೆ ರಾಕಜ್ಯ ಘಟಕದ ಅಧ್ಯಕ್ಷ ಟಿ. ನಾರಾಯಣ ಗೌಡ ಮಾತನಾಡಿ, ಒಂದೊಮ್ಮೆ ಕರ್ನಾಟಕದ ರಾಜಕಾರಣ ಭಾರತದ ರಾಜಕಾರಣಕ್ಕೆ ಮಾದರಿಯಾಗಿತ್ತು ಆದರೆ ಇಂದಿನ ದಿನಗಳಲ್ಲಿ ಅದು ಅಸಹ್ಯ ಪಟ್ಟುಕೊಳ್ಳುವ ಪರಿಸ್ಥಿತಿಯಲ್ಲಿದೆ ಎಂದರು. ಧರ್ಮವನ್ನು ಹುಡುಕುವ ಸ್ಥಿತಿಯಲ್ಲಿರುವ ಇಂದಿನ ದಿನಗಳಲ್ಲಿ ಧರ್ಮ, ಸಂಸ್ಕೃತಿ, ಸಂಸ್ಕಾರ ಉಳಿದಿದೆ ಎನ್ನುವುದಾದರೆ ಅದು ಮಠಗಳಿಂದ ಎಂದು ನುಡಿದರು.

ಹಿರೇಕೆರೂರು ಶಾಸಕ ಬಿ.ಸಿ. ಪಾಟೀಲ್ ಮಾತನಾಡಿ, ದೇಶದ ಭಾವೈಕ್ಯತೆಗೆ ರಾಜಕಾರಣಿಗಳೇ ಕೊಡಲಿಪೆಟ್ಟು ಹಾಕುತ್ತಿದ್ದಾರೆ ಎಂದು ವಿಷಾದಿಸಿದರು.

ಕಬೀರಾನಂದ ಆಶ್ರಮದ ಶಿವಲಿಂಗಾನಂದ ಸ್ವಾಮೀಜಿ, ಭವಾನಿಪೀಠದ ಗೋಸಾಯಿ ಸಂಸ್ಥಾನದ ಸುರೇಶ ಭಾರತಿ ಸ್ವಾಮೀಜಿ, ಶಂಕರಚಾರ್ಯ ಮಠದ ಸಹಜಾನಂದ ಸ್ವಾಮೀಜಿ, ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ಯಾದವ್, ನಗರಸಭೆ ಉಪಾಧ್ಯಕ್ಷ ಅಲ್ಲಾಭಕಷ್, ಪತ್ರಕರ್ತ ಸಮೀವುಲ್ಲಾ, ತಹಶೀಲ್ದಾರ್ ಕುಮಾರಸ್ವಾಮಿ, ಕರವೇ ಜಿಲ್ಲಾಧ್ಯಕ್ಷ ಟಿ. ರಮೇಶ್, ಜಿಪಂ. ವ್ಯವಸ್ಥಾಪಕ ನಾಗರಾಜ್ ಸಂಗಂ ಇತರರು ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.