ADVERTISEMENT

ಆಯೋಗದ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು

ಮತಗಟ್ಟೆ ಅಧಿಕಾರಿಗಳ ಸಭೆ:

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2018, 8:57 IST
Last Updated 30 ಮಾರ್ಚ್ 2018, 8:57 IST

ಮೊಳಕಾಲ್ಮುರು: ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಚುನಾವಣಾ ಆಯೋಗ ಸೂಚಿಸಿರುವ ಅಂಶಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಪಾರದರ್ಶಕ ಚುನಾವಣೆ ಪ್ರಕ್ರಿಯೆಗೆ ಸಹಕಾರ ನೀಡಬೇಕು ಎಂದು ಚುನಾವಣೆ ತಾಲ್ಲೂಕು ನೋಡಲ್‌ ಅಧಿಕಾರಿ ಆರ್.ಟಿ. ಮಂಜುನಾಥ್‌ ಹೇಳಿದರು.

ಸ್ಥಳೀಯ ಸರ್ಕಾರಿ ಪಿಯು ಕಾಲೇಜಿನಲ್ಲಿ ಗುರುವಾರ ನಡೆದ ವಿಧಾನಸಭಾ ಚುನಾವಣೆ ಸಿಬ್ಬಂದಿ ಸಭೆಯಲ್ಲಿ ಅವರು ಮಾತನಾಡಿದರು.ನೀತಿ ಸಂಹಿತೆ ಜಾರಿ ನಂತರ ಸರ್ಕಾರಿ ಕಾರ್ಯಕ್ರಮಗಳ ನಾಮಫಲಕ ತೆರವುಗೊಳಿಸುವುದು. ಸರ್ಕಾರಿ ಕಚೇರಿ ಹಾಗೂ ಸ್ವಯಂಸೇವಾ ಸಂಸ್ಥೆಗಳಲ್ಲಿ ಇರಬಹುದಾದ ಸರ್ಕಾರಿ ಕಾರ್ಯಕ್ರಮಗಳ ಪ್ರಚಾರ ಸಾಮಗ್ರಿಗಳನ್ನು ತೆರವು ಮಾಡಬೇಕು. ನಿಯೋಜಿತ ಸಿಬ್ಬಂದಿ ವ್ಯಾಟ್ಸ್‌ ಆ್ಯಪ್‌ ಗುಂಪುಗಳನ್ನು ರಚಿಸಿಕೊಂಡು ಪರಸ್ಪರ ಮಾಹಿತಿ ವಿನಿಮಯ ಮಾಡಿಕೊಳ್ಳಬೇಕು ಎಂದು ಹೇಳಿದರು.

ತಾಲ್ಲೂಕು ಚುನಾವಣಾಧಿಕಾರಿ ಎಸ್‌.ಕೆ. ಲಕ್ಷ್ಮಣ್‌ ಮಾತನಾಡಿ, ಸೆಕ್ಟರ್‌ ಅಧಿಕಾರಿಗಳು ಖಾಸಗಿ ವಾಹನಗಳಲ್ಲದೇ ಅನುಮಾನ ಬಂದಲ್ಲಿ ಸರ್ಕಾರಿ ವಾಹನ, ಅಬುಲೆನ್ಸ್‌ಗಳನ್ನು ಸಹ ತಪಾಸಣೆ ಮಾಡಬೇಕು. ರೋಗಿಗಳಿಗೆ ತೊಂದರೆಯಾಗದ ರೀತಿ ವಿವರಣೆ ನೀಡಿ ತಪಾಸಣೆ ಮಾಡಬೇಕು. ಸಿಬ್ಬಂದಿ ಮುಖ್ಯವಾಗಿ ಸೌಜನ್ಯ ತೋರುವ ಮೂಲಕ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ತಪಾಸಣಾ ಕಾರ್ಯಗಳಲ್ಲಿ ಯಶಸ್ವಿಯಾಗಬೇಕು ಎಂದು ಹೇಳಿದರು.

ADVERTISEMENT

ಯಾವುದೇ ರೀತಿ ಕಾರ್ಯಕ್ರಮವಾಗಲೀ ಚುನಾವಣಾ ಆಯೋಗ ಅನುಮತಿ ಪಡೆದು ಮಾಡಬೇಕು. ನಡೆಯುವ ಕಾರ್ಯಕ್ರಮಗಳ ಮಾಹಿತಿ ಪಡೆದು ಪೂರ್ಣ ವಿಡಿಯೊ ಮಾಡಿಸಬೇಕು. ಕಾರ್ಯಕ್ರಮ ವಿವರ, ಖರ್ಚು ವೆಚ್ಚ ಮಾಹಿತಿ ನಮೂದಿಸಬೇಕು. ಯಾವುದೇ ಕಾರ್ಯಕ್ರಮದಲ್ಲಿ ಊಟ, ತಿಂಡಿ ನೀಡುವುದನ್ನು ನಿಷೇಧಿಸಲಾಗಿದೆ. ಬಾಡೂಟಗಳಲ್ಲಿ ಪಕ್ಷದ ಬ್ಯಾನರ್‌ ಕಂಡುಬಂದಲ್ಲಿ ಕೇಸು ದಾಖಲು ಮಾಡಬೇಕು ಎಂದು ಹೇಳಿದರು.

ತಹಶೀಲ್ದಾರ್‌ ಸೈಯದ್‌ ನವೀದ್‌ ಹುಸೇನ್‌, ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ ಸಿ.ಎನ್. ಚಂದ್ರಶೇಖರಯ್ಯ, ಸಿಪಿಐ ಯಶವಂತ್‌, ಪಿಎಸ್‌ಐಗಳಾದ ಕಿರಣ್‌ಕುಮಾರ್, ಮಂಜುನಾಥ್, ಮೋಹನ್‌ಕುಮಾರ್‌, ಎನ್‌.ಎಸ್‌. ರವಿ, ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಟಿ. ರುಕ್ಷ್ಮಿಣಿ, ಶೀರಸ್ತೇದಾರ್ ಗೋಪಾಲ್‌, ಗಿರೀಶ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.