ADVERTISEMENT

ಆರೋಗ್ಯವಂತ ಸಮಾಜ ನಿರ್ಮಾಣ ಮಾಡಿ

ಘಟಿಕೋತ್ಸವದಲ್ಲಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ಮುರುಘಾ ಶರಣರ ಅಭಿಮತ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2014, 5:48 IST
Last Updated 17 ಮಾರ್ಚ್ 2014, 5:48 IST

ಚಿತ್ರದುರ್ಗ: ವೈದ್ಯರು ತಮ್ಮ ಬುದ್ಧಿವಂತಿಕೆಯನ್ನು ರಾಷ್ಟ್ರದ ಒಳಿತಿಗಾಗಿ ಹಾಗೂ ಬಡಜನರ ಸೇವೆಗಾಗಿ ಮೂಡಿಪಾಗಿಟ್ಟು, ಶಕ್ತಿವಂತ ಪ್ರಜೆಗಳಾಗಿ ಹೊರಹೊಮ್ಮಬೇಕು ಎಂದು ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರು ಸಲಹೆ ನೀಡಿದರು.

ನಗರದ ಬಸವೇಶ್ವರ ವೈದ್ಯಕೀಯ ಕಾಲೇಜಿನಲ್ಲಿ ಶನಿವಾರ ೫ನೇ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳಿಗೆ ನಡೆದ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ವೈದ್ಯಕೀಯ ವೃತ್ತಿಗೆ ಕಾಲಿಡುತ್ತಿರುವ ನೀವು ಪ್ರಾಮಾಣಿಕ ಸೇವೆ ಸಲ್ಲಿಸಬೇಕು. ಬಡ ರೋಗಿಗಳ ಬಗ್ಗೆ ಅನುಕಂಪ ಸದಾ ಇರಬೇಕು. ನಿಮ್ಮ ಬುದ್ದಿವಂತಿಕೆ ಉತ್ತಮ ಕಾರ್ಯಗಳಿಗೆ ಮಾತ್ರ ಬಳಸಬೇಕು. ಅದು ನಮಗೆ ಕೀರ್ತಿಯನ್ನು ತಂದು ಕೊಡುತ್ತದೆ. ನಮ್ಮ ರಾಷ್ಟ್ರ ಯಾವಾಗಲು ಬುದ್ದಿವಂತ ವ್ಯಕ್ತಿಗಳನ್ನು ಸೃಷ್ಟಿಸುತ್ತಿದೆ. ಈ ನಿಟ್ಟಿನಲ್ಲಿ ನೀವು ಸಾಗಬೇಕು’ ಎಂದು ಹೇಳಿದರು.

ದಾವಣಗೆರೆ ಪೂರ್ವವಲಯದ ಐಜಿಪಿ ಪರಶಿವಮೂರ್ತಿ ಮಾತನಾಡಿ, ‘ಪ್ರಸ್ತುತ ಸನ್ನಿವೇಶದಲ್ಲಿ ಯಾವುದೇ ರೋಗವನ್ನು ಗುಣಪಡಿಸಲು ಸಾಧ್ಯವಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಅಷ್ಟರ ಮಟ್ಟಿಗೆ ನಮ್ಮಲ್ಲಿ ತಂತ್ರಜ್ಞಾನ ಮುಂದುವರಿದಿದೆ. ಭಾರತ ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿದೆ. ಆದ್ದರಿಂದ ಹಣದ ಆಸೆಗಾಗಿ ಹೊರ ರಾಷ್ಟ್ರಗಳಿಗೆ ತೆರಳಿ ಸೇವೆ ಸಲ್ಲಿಸುವುದನ್ನು ಬಿಟ್ಟು ಇಲ್ಲಿಯೇ ಸೇವೆ ಸಲ್ಲಿಸಿದರೆ, ಕೀರ್ತಿ ಯಶಸ್ಸಿನ ಜತೆಗೆ ಹಣವು ಲಭ್ಯವಾಗುತ್ತದೆ’ ಎಂದು ಹೇಳಿದರು.

ವೈದ್ಯಕೀಯ ವೃತ್ತಿ ಒಂದು ಸುವರ್ಣ ಅವಕಾಶವಿದ್ದಂತೆ. ಈ ಜೀವನಕ್ಕೆ ಕಾಲಿಡುತ್ತಿರುವ ನೀವು ಉತ್ತಮ ಸೇವೆಯ ಜತೆಗೆ ಹೆಚ್ಚು ಸಂಶೋಧನೆಗಳನ್ನು ಮಾಡುತ್ತಾ ಹೊಸ ಅವಿಷ್ಕಾರ ಮಾಡಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭ ೯೫ ವಿದ್ಯಾರ್ಥಿಗಳು ವೈದ್ಯಕೀಯ ಪದವಿ ಪಡೆದರು. ಡಾ.ಪಿ.ಬಿ.ಶ್ರೀಧರ್‌ಮೂರ್ತಿ ಡಾ.ರವೀಂದ್ರ ಬಣಕಾರ ಮಾತನಾಡಿದರು. ಪ್ರೊ.ಎಸ್.ಎಚ್.ಪಟೇಲ್, ಕೆ.ವಿ.ಪ್ರಭಾಕರ್, ಡಾ.ಪ್ರಶಾಂತ್, ಡಾ.ನಾರಾಯಣ ಮೂರ್ತಿ, ಡಾ.ರಾಜೇಶ್, ಡಾ.ಜಿ.ಮಹೇಶ್ ಇತರರು ಇದ್ದರು.

ಸೌಭ್ಯಾಗ್ಯ ಲಕ್ಷ್ಮೀ ಮತ್ತು ತಂಡದವರು ಪ್ರಾರ್ಥಿಸಿದರು. ಪ್ರೊ.ಈ.ಚಿತ್ರಶೇಖರ್ ಸ್ವಾಗತಿಸಿದರು. ಡಾ.ಸುರೇಶ್ ಬಾಬು ಕಾರ್ಯಕ್ರಮ ನಿರೂಪಿಸಿದರು. ಡಾ.ಜಿ.ಎನ್.ಮಲ್ಲಿಕಾರ್ಜನಪ್ಪ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.