ADVERTISEMENT

ಇಂದಿನಿಂದ ಕುಕ್ವಾಡೇಶ್ವರೀ ದೇವಿ ಜಾತ್ರೆ

​ಪ್ರಜಾವಾಣಿ ವಾರ್ತೆ
Published 17 ಜನವರಿ 2011, 10:05 IST
Last Updated 17 ಜನವರಿ 2011, 10:05 IST

ಹೊಳಲ್ಕೆರೆ:  ಐತಿಹಾಸಿಕ ನಗರ ದೇವತೆ ಕುಕ್ವಾಡೇಶ್ವರೀ ದೇವಿ ಜಾತ್ರೆ ಜ. 17 ಮತ್ತು 18 ರಂದು ಸಾವಿರಾರು ಭಕ್ತರ ಸಮ್ಮುಖದಲ್ಲಿ ವೈಭವದಿಂದ ನಡೆಯಲಿದೆ.ಪಟ್ಟಣದ ಹೊರವಲಯದ ಶಿವಮೊಗ್ಗ ರಸ್ತೆಯಲ್ಲಿರುವ ಕುಕ್ವಾಡೇಶ್ವರೀ ದೇವಿ ದೇವಾಲಯದ ಆವರಣದಲ್ಲಿ ಜಾತ್ರೆ ನಡೆಯಲಿದ್ದು, ಈಗಾಗಲೇ ದೇವಾಲಯವನ್ನು ಬಣ್ಣ, ವಿದ್ಯುತ್ ದೀಪಗಳಿಂದ ಶೃಂಗರಿಸಲಾಗಿದೆ. ದೇವಾಲಯದ ಆವರಣವನ್ನು ಸ್ವಚ್ಛಗೊಳಿಸಲಾಗಿದೆ.  ಸಾವಿರಾರು ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ದೇವಿಯ ದರ್ಶನ ಪಡೆಯಲು ಸೂಕ್ತ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಪಟ್ಟಣದ ಮುಖ್ಯ ವೃತ್ತ ಮತ್ತು ಗಣಪತಿ ರಸ್ತೆಯನ್ನೂ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದ್ದು, ಮುಖ್ಯ ವೃತ್ತದಲ್ಲಿ ಕಟೌಟ್‌ಗಳು ರಾರಾಜಿಸುತ್ತಿವೆ.

ಜ. 17ರ ಸಂಜೆ ಕುಕ್ವಾಡೇಶ್ವರೀ ದೇವಿಯ ಅಣ್ಣ ಎಂದು ನಂಬಲಾಗಿರುವ ಬೀರಲಿಂಗೇಶ್ವರ ಸ್ವಾಮಿಯನ್ನು ಹೂವಿನ ಪಲ್ಲಕ್ಕಿಯಲ್ಲಿ ಕೂರಿಸಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಗುವುದು. ಮೆರವಣಿಗೆಗೆ ಮೈಸೂರು ಜಂಬೂ ನಗಾರಿ, ಸಂಚಾರಿ ಆರ್ಕೆಸ್ಟ್ರಾ, 30 ಡೊಳ್ಳು ಕಲಾವಿದರು, ಚಿತ್ರದುರ್ಗದ ಮುರುಘಾ ಮಠದಿಂದ ಆನೆ ತರಿಸಲಾಗಿದೆ.ಜ. 18ರಂದು ಬೆಳಿಗ್ಗೆ ಬೀರಲಿಂಗೇಶ್ವರ ಸ್ವಾಮಿಯನ್ನು ಕುಕ್ವಾಡೇಶ್ವರಿ ದೇವಾಲಯದ ಸಮೀಪ ಪ್ರತಿಷ್ಠಾಪಿಸಲಾಗುತ್ತದೆ.

‘ಹಿಂದೆ ಪಟ್ಟಣದ ಹಿಂದುಳಿದ ವರ್ಗದ ಎಲ್ಲಾ ಮೂಲ ಕುಟುಂಬದವರು ಮನೆಗಳಿಗೆ ಬೀಗ ಹಾಕಿಕೊಂಡು ಎತ್ತಿನ ಗಾಡಿಯಲ್ಲಿ ದೇವಾಲಯಕ್ಕೆ ಹೋಗುತ್ತಿದ್ದರು. ಆಗ ತಾನೆ ಹೆರಿಗೆಯಾದ ಹಸುಗೂಸು ಇದ್ದರೂ, ಅದನ್ನೂ ಕರೆದುಕೊಂಡು ಹೋಗುತ್ತಿದ್ದರು. ಏನಿಲ್ಲವೆಂದರೂ ಸುಮಾರು 500 ಗಾಡಿಗಳು ಅಲ್ಲಿ ನೆರೆಯುತ್ತಿದ್ದವು. ಆಗಿನ ಕಾಲದಲ್ಲಿ ಗಾಡಿ ಮತ್ತು ಎತ್ತುಗಳನ್ನು ಅಲಂಕರಿಸುವುದೇ ಒಂದು ಪ್ರತಿಷ್ಠೆಯಾಗಿತ್ತು. ಅಲ್ಲಿಯೇ ಬಿಡಾರಗಳನ್ನು ಹೂಡಿ, ಅಡುಗೆ ಮಾಡಿ ದೇವರಿಗೆ ಎಡೆ ನೀಡುತ್ತಿದ್ದರು. ರಾತ್ರಿಯವರೆಗೂ ಭಕ್ತರಿಗೆ, ನೆಂಟರಿಷ್ಟರಿಗೆ ಊಟ ಹಾಕಿದ ನಂತರ ಮನೆಗೆ ಬರುತ್ತಿದ್ದರು. ಗಾಡಿ ಹೂಡಲಿಲ್ಲ ಎಂದರೆ ತೊಂದರೆ ತಪ್ಪಿದ್ದಲ್ಲ ಎಂದು ಈಗಲೂ ನಂಬಿಕೆ ಇದೆ’ ಎನ್ನುತ್ತಾರೆ ದೇವಾಲಯ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಬಿ.ಎಸ್. ರುದ್ರಪ್ಪ.

ಇಂದಿನ ಆಧುನಿಕ ಯುಗದಲ್ಲೂ ಈ ಜಾತ್ರೆಗೆ ಭಕ್ತರು ಕುಟುಂಬ ಸಮೇತ ಎತ್ತಿನ ಗಾಡಿಯಲ್ಲಿ ಹೋಗಿ ಪೂಜಾ ಕಾರ್ಯಗಳನ್ನು ಮಾಡಿಕೊಂಡು ಬರುತ್ತಾರೆ. ಮಂಗಳವಾರ ಬೆಳಿಗ್ಗೆ ಪಟ್ಟಣದಿಂದ 2 ಕಿ.ಮೀ. ದೂರವಿರುವ ದೇವಾಲಯದವರೆಗೂ ಸಾಲುಗಟ್ಟಿ ಹೋಗುತ್ತಿರುವ ಅಲಂಕೃತ ಗಾಡಿಗಳು ನಮ್ಮ ಹಿಂದಿನ ಸಾಂಸ್ಕೃತಿಕ ವೈಭವವನ್ನು ನೆನಪಿಸುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.