ADVERTISEMENT

ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭ

ವಿಧಾನಸಭೆ ಚುನಾವಣೆ: ಆಯಾ ತಾಲ್ಲೂಕಿನ ತಹಶೀಲ್ದಾರ್ ಕಚೇರಿಯಲ್ಲಿ ಸ್ವೀಕಾರ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2013, 5:16 IST
Last Updated 12 ಏಪ್ರಿಲ್ 2013, 5:16 IST

ಚಿತ್ರದುರ್ಗ: ರಾಜ್ಯ ವಿಧಾನಸಭೆ ಚುನಾವಣೆಗೆ ಈಗಾಗಲೇ ವೇಳಾಪಟ್ಟಿ ಪ್ರಕಟಿಸಲಾಗಿದ್ದು, ಏ. 10ರಿಂದ 17ರವರೆಗೆ ಬೆಳಿಗ್ಗೆ 11ರಿಂದ ಮಧ್ಯಾಹ್ನ 3ರವರೆಗೆ ನಾಮಪತ್ರಗಳನ್ನು ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಜೆ. ರವಿಶಂಕರ್ ತಿಳಿಸಿದ್ದಾರೆ.

ನಾಮಪತ್ರಗಳನ್ನು ಆಯಾ ತಾಲ್ಲೂಕಿನ ತಹಶೀಲ್ದಾರ್ ಕಚೇರಿಯಲ್ಲಿ ಸ್ವೀಕರಿಸಲಾಗುತ್ತದೆ. ಚಿತ್ರದುರ್ಗ ವಿಧಾನಸಭೆಗೆ ನಗರ ಪೊಲೀಸ್ ಠಾಣೆ ಎದುರಿನ ಹೊಸ ನಗರಸಭೆ ಕಟ್ಟಡದಲ್ಲಿ ಸ್ವೀಕರಿಸಲಾಗುತ್ತದೆ. ಏ. 18ರಂದು ನಾಮಪತ್ರಗಳ ಪರಿಶೀಲನೆ ನಡೆಯುತ್ತದೆ. ಏ. 20ರಂದು ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ಕೊನೆಯ ದಿನವಾಗಿದೆ.


ಮತದಾನವು ಮೇ 5ರಂದು ಬೆಳಿಗ್ಗೆ 7ರಿಂದ ಸಂಜೆ 5ಗಂಟೆಯವರೆಗೆ ನಡೆಯಲಿದೆ. ಮೇ 8ರಂದು ಮತ ಎಣಿಕೆ ನಡೆಯಲಿದೆ. ಆದರೆ ನೀತಿ ಸಂಹಿತೆ ಮೇ 11ರವರೆಗೆ ಜಾರಿಯಲ್ಲಿರುತ್ತದೆ.

ಮೊಳಕಾಲ್ಮುರು ವಿಧಾನಾಸಭಾ ಕ್ಷೇತ್ರ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದು, ಜಿಲ್ಲಾ ಜಲಾನಯನ ಅಧಿಕಾರಿಡಾ.ಎ. ರಾಮದಾಸ್ ಚುನಾವಣಾಧಿಕಾರಿ ಆಗಿದ್ದು, ತಹಶೀಲ್ದಾರ್ ಅವರು ಸಹಾಯಕ ಚುನಾವಣಾಧಿಕಾರಿ ಆಗಿದ್ದಾರೆ.

ಚಳ್ಳಕೆರೆ ವಿಧಾನಸಭಾ ಕ್ಷೇತ್ರ ಪರಿಶಿಷ್ಟ ಪಂಗಡಕ್ಕೆ ಮೀಸಲಿದ್ದು, ತಾಲ್ಲೂಕು ಕಚೇರಿಯಲ್ಲಿ ನಾಮಪತ್ರ ಸ್ವೀಕರಿಸಲಾಗುತ್ತದೆ.
ಜಿಲ್ಲಾ ಪಂಚಾಯ್ತಿ ಮುಖ್ಯ ಯೋಜನಾಧಿಕಾರಿ ಪಿ. ಚಂದ್ರಪ್ಪ ಚುನಾವಣಾಧಿಕಾರಿ ಆಗಿದ್ದು, ತಹಶೀಲ್ದಾರ್ ಸಹಾಯಕ ಚುನಾವಣಾಧಿಕಾರಿ ಆಗಿದ್ದಾರೆ.

ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ಸಾಮಾನ್ಯಕ್ಕೆ ಮೀಸಲಿರುತ್ತದೆ. ನಾಮಪತ್ರಗಳನ್ನು ಹೊಸ ನಗರಸಭಾ ಕಟ್ಟಡದಲ್ಲಿ ಸ್ವೀಕರಿಸಲಾಗುತ್ತದೆ. ಉಪವಿಭಾಗಾಧಿಕಾರಿ ಎನ್.ಎಂ. ನಾಗರಾಜ್ ಚುನಾವಣಾಧಿಕಾರಿ ಆಗಿದ್ದು, ತಹಶೀಲ್ದಾರ್ ಸಹಾಯಕ ಚುನಾವಣಾಧಿಕಾರಿಯಾಗಿದ್ದಾರೆ.

ಹಿರಿಯೂರು ವಿಧಾನಸಭಾ ಕ್ಷೇತ್ರ ಸಾಮಾನ್ಯಕ್ಕೆ ಮೀಸಲಾಗಿದ್ದು, ತಾಲ್ಲೂಕು ಕಚೇರಿಯಲ್ಲಿ ನಾಮಪತ್ರಗಳನ್ನು ಸ್ವೀಕರಿಸಲಾಗುತ್ತದೆ. ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ಕೆ.ಆರ್. ರುದ್ರಪ್ಪ ಚುನಾವಣಾಧಿಕಾರಿ ಆಗಿದ್ದು, ತಹಶೀಲ್ದಾರ್ ಸಹಾಯಕ ಚುನಾವಣಾಧಿಕಾರಿಯಾಗಿದ್ದಾರೆ.

ಹೊಸದುರ್ಗ ವಿಧಾನಸಭಾ ಕ್ಷೇತ್ರ ಸಾಮಾನ್ಯಕ್ಕೆ ಮೀಸಲಾಗಿದ್ದು, ತಾಲ್ಲೂಕು ಕಚೇರಿಯಲ್ಲಿ ನಾಮಪತ್ರಗಳನ್ನು ಸ್ವೀಕರಿಸಲಾಗುತ್ತದೆ. ಜಿಲ್ಲಾಧಿಕಾರಿ ಕಚೇರಿ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಬಿ.ಬಿ. ಸರೋಜಾ ಚುನಾವಣಾಧಿಕಾರಿ ಆಗಿದ್ದು, ತಹಶೀಲ್ದಾರ್ ಸಹಾಯಕ ಚುನಾವಣಾಧಿಕಾರಿ ಆಗಿದ್ದಾರೆ.

ಹೊಳಲ್ಕೆರೆ ವಿಧಾನಸಭಾ ಕ್ಷೇತ್ರವು ಪರಿಶಿಷ್ಟ ಜಾತಿಗೆ ಮೀಸಲಾಗಿದ್ದು, ಇಲ್ಲಿನ ತಾಲ್ಲೂಕು ಕಚೇರಿಯಲ್ಲಿ ನಾಮಪತ್ರಗಳನ್ನು ಸ್ವೀಕರಿಸಲಾಗುತ್ತದೆ. ರೇಷ್ಮೆ ಇಲಾಖೆ ಉಪನಿರ್ದೇಶಕ ಉದಯಕುಮಾರ್ ಗೋವಿಂದ ಶಿರ್ಶೀಕರ್ ಚುನಾವಣಾಧಿಕಾರಿ ಆಗಿದ್ದು, ತಹಶೀಲ್ದಾರ್ ಸಹಾಯಕ ಚುನಾವಣಾಧಿಕಾರಿಯಾಗಿದ್ದಾರೆ.

ನಾಮಪತ್ರಗಳನ್ನು ಸಾರ್ವತ್ರಿಕ ರಜಾ ದಿನ ಹೊರತುಪಡಿಸಿ ಉಳಿದ ದಿನಗಳಂದು ಸ್ವೀಕರಿಸಲಾಗುತ್ತದೆ ಎಂದು ಜಿಲ್ಲಾ ಚುನಾವಣಾಧಿಕಾರಿ ತಿಳಿಸಿದ್ದಾರೆ.

ಯಾವ ದಿನ ಏನು?

ADVERTISEMENT

-ಏ. 17ರವರೆಗೆ ನಾಮಪತ್ರ ಸಲ್ಲಿಕೆ
-ಏ. 18ಕ್ಕೆ ನಾಮಪತ್ರ ಪರಿಶೀಲನೆ
-ಏ. 20 ನಾಮಪತ್ರ ವಾಪಸ್‌ಗೆ ಕೊನೆ ದಿನ
-ಮೇ 5ಕ್ಕೆ ಮತದಾನ
-ಮೇ 8ಕ್ಕೆ ಅಭ್ಯರ್ಥಿಗಳ ಹಣೆ ಬರಹ ನಿರ್ಧಾರ (ಮತ ಎಣಿಕೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.