ADVERTISEMENT

ಇಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷರ ಆಯ್ಕೆ

​ಪ್ರಜಾವಾಣಿ ವಾರ್ತೆ
Published 28 ಜನವರಿ 2012, 6:25 IST
Last Updated 28 ಜನವರಿ 2012, 6:25 IST
ಇಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷರ ಆಯ್ಕೆ
ಇಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷರ ಆಯ್ಕೆ   

ಚಿತ್ರದುರ್ಗ: ಜಿಲ್ಲಾ ಪಂಚಾಯ್ತಿ ಅಧ್ಯಕ್ಷರ ಆಯ್ಕೆ ಶನಿವಾರ ನಡೆಯಲಿದ್ದು, ಕುತೂಹಲ ಕೆರಳಿಸಿದೆ.
ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ನಡೆದ ಒಪ್ಪಂದದಂತೆ ಸಿ. ಮಹಾಲಿಂಗಪ್ಪ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಈ ಸ್ಥಾನ ತೆರವಾಗಿತ್ತು. ಒಪ್ಪಂದದಂತೆ ಈ ಬಾರಿ ಜೆಡಿಎಸ್‌ಗೆ ಅಧ್ಯಕ್ಷ ಸ್ಥಾನವನ್ನು ಕಾಂಗ್ರೆಸ್ ಬಿಟ್ಟುಕೊಟ್ಟಿದೆ.

ಬಿಸಿಎಂ `ಎ~ಗೆ ಮೀಸಲಾಗಿರುವ ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್‌ನಿಂದ ರವಿಕುಮಾರ್ ಆಕಾಂಕ್ಷಿಯಾಗಿದ್ದು, ಈಗಾಗಲೇ ತಮಗೆ ಬೆಂಬಲ ವ್ಯಕ್ತಪಡಿಸಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರೊಂದಿಗೆ ಬೆಂಗಳೂರಿಗೆ ತೆರಳಿದ್ದಾರೆ. 20 ಸದಸ್ಯರು ರವಿಕುಮಾರ್ ಅವರೊಂದಿಗೆ ತೆರಳಿದ್ದಾರೆ. ಶುಕ್ರವಾರ ರಾತ್ರಿ ರವಿಕುಮಾರ್ ಹಾಗೂ ಇಬ್ಬರು ಅನುಮೋದಕರು ನಗರಕ್ಕೆ ಹಿಂತಿರಗುತ್ತಿದ್ದು, ಉಳಿದ ಸದಸ್ಯರು ರೆಸಾರ್ಟ್ ಯಾತ್ರೆಯಿಂದ ಶನಿವಾರ ಬೆಳಿಗ್ಗೆ ಆಗಮಿಸಲಿದ್ದಾರೆ.

ವಿಪ್ ಜಾರಿ: ಎಲ್ಲ ಕಾಂಗ್ರೆಸ್ ಸದಸ್ಯರು ಜೆಡಿಎಸ್ ಅಭ್ಯರ್ಥಿಗೆ ಬೆಂಬಲ ಸೂಚಿಸುತ್ತಾರೆ. ಸದಸ್ಯರಿಗೆ ವಿಪ್ ಸಹ ಜಾರಿ ಮಾಡುತ್ತೇವೆ. ನೂತನ ಅಧ್ಯಕ್ಷರು ಅವಿರೋಧವಾಗಿ ಆಯ್ಕೆಯಾಗುವ ವಿಶ್ವಾಸವಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಎ. ಸೇತುರಾಮ್ ತಿಳಿಸಿದ್ದಾರೆ.

ಜಿ.ಪಂ.ನಲ್ಲಿ 16 ಕಾಂಗ್ರೆಸ್, 6 ಜೆಡಿಎಸ್ ಹಾಗೂ 12 ಬಿಜೆಪಿ ಸದಸ್ಯರಿದ್ದಾರೆ. ಅಧ್ಯಕ್ಷರಾಗಿ ಆಯ್ಕೆಯಾಗಲು 18 ಸದಸ್ಯರ ಬೆಂಬಲ ಅಗತ್ಯವಿದೆ. ಜೆಡಿಎಸ್‌ನವರೇ ಅಧ್ಯಕ್ಷರಾಗಿ ಆಯ್ಕೆಯಾಗುವುದು ಖಚಿತವಾಗಿದ್ದರೂ, ಕೊನೆಯ ಕ್ಷಣದ ರಾಜಕೀಯ ಬೆಳವಣಿಗೆಯನ್ನು ತಳ್ಳಿಹಾಕಲು ಸಾಧ್ಯವಿಲ್ಲ ಎನ್ನುವುದು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.

ಬೆಳಿಗ್ಗೆ 10ಕ್ಕೆ ಚುನಾವಣಾ ಪ್ರಕ್ರಿಯೆಗಳು ಆರಂಭವಾಗಲಿವೆ. ಬೆಳಿಗ್ಗೆ 10ರಿಂದ 12ರವರೆಗೆ ನಾಮಪತ್ರ ಸಲ್ಲಿಸಲು ಕಾಲವಕಾಶ ನೀಡಲಾಗಿದ್ದು, ಮಧ್ಯಾಹ್ನ 2ಕ್ಕೆ ಮತದಾನ ನಡೆಯಲಿದೆ. ಚುನಾವಣಾ ಅಧಿಕಾರಿಯಾಗಿ ಪ್ರಾದೇಶಿಕ ಆಯುಕ್ತರು ಕಾರ್ಯ ನಿರ್ವಹಿಸಲಿದ್ದಾರೆ.

ನಾಳೆಯಿಂದ ಸೇವಾಲಾಲ್ ಜ್ಯೋತಿ ಯಾತ್ರೆ
ಲಂಬಾಣಿ ಸಮುದಾಯದ ಸಂಘಟನೆ ಮತ್ತು ಮೂಢನಂಬಿಕೆ, ಕಂದಾಚಾರಗಳನ್ನು ಹೋಗಲಾಡಿಸಿ ಅರಿವು ಮೂಡಿಸುವ ನಿಟ್ಟಿನಲ್ಲಿ ಸೇವಾಲಾಲ್ ಜ್ಯೋತಿ ಯಾತ್ರೆ ಜ. 29ರಿಂದ ಫೆ. 5ರವರೆಗೆ ರಾಜ್ಯದ ವಿವಿಧೆಡೆ ಸಂಚರಿಸಲಿದೆ.

273ನೇ ಸಂತ ಸೇವಾಲಾಲ್ ಮಹಾರಾಜರ ಜಯಂತ್ಯುತ್ಸವ ಪ್ರಯುಕ್ತ ಸೇವಾಲಾಲ್ ಸೇನೆ ಕರ್ನಾಟಕ ಪ್ರದೇಶ ಹಾಗೂ ಧರ್ಮಪ್ರಚಾರ ಸಮಿತಿ ಸಂಯುಕ್ತ ಆಶ್ರಯದಲ್ಲಿ ಜ್ಯೋತಿ ಯಾತ್ರೆ ಆಯೋಜಿಸಲಾಗಿದೆ ಎಂದು ಸೇವಾಲಾಲ್ ಸರ್ದಾರ್ ಸ್ವಾಮೀಜಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

29ರಂದು ಬೆಳಿಗ್ಗೆ 11ಕ್ಕೆ ಬಂಜಾರ ಗುರುಪೀಠದಲ್ಲಿ ಸಾಮೂಹಿಕ ಪೂಜೆ, ಸಂಕಲ್ಪ ಪ್ರಾರ್ಥನೆಯೊಂದಿಗೆ ಜ್ಯೋತಿ ಯಾತ್ರೆ  ಆರಂಭವಾಗಲಿದೆ. ಆರು ಜಿಲ್ಲೆಗಳಲ್ಲಿ ಯಾತ್ರೆ ಸಂಚರಿಸಲಿದ್ದು, ಫೆ. 5ರಂದು ಹೊನ್ನಾಳಿ ತಾಲ್ಲೂಕಿನ ಸೂರಗೊಂಡನಕೊಪ್ಪಕ್ಕೆ ತಲುಪಲಿದೆ ಎಂದು ವಿವರಿಸಿದರು.

ಫೆ. 14 ಮತ್ತು 15ರಂದು ಸೇವಾಲಾಲ್ ಜಯಂತ್ಯುತ್ಸವದ ಅಂಗವಾಗಿ ಯಾತ್ರೆ ಆಯೋಜಿಸಲಾಗಿದೆ. ಸುಮಾರು 2 ಲಕ್ಷ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ಸರ್ಕಾರವೇ ಸೇವಾಲಾಲ್ ಜಯಂತ್ಯುತ್ಸವ ಆಚರಿಸಬೇಕು. ಬಂಜಾರ ಸಮುದಾಯಕ್ಕೆ ಪವಿತ್ರವಾಗಿರುವ ಈ ದಿನವನ್ನು ಸರ್ಕಾರ ಅಧಿಕೃತವಾಗಿ ಮಾನ್ಯತೆ ನೀಡಿ ಜಯಂತ್ಯುತ್ಸವನ್ನು ಆಚರಿಸಬೇಕು ಎಂದು ಆಗ್ರಹಿಸಿದರು.
ಜಿ.ಪಂ. ಮಾಜಿ ಸದಸ್ಯ ರಾಜಾನಾಯ್ಕ, ಮಂಜನಾಯ್ಕ, ತಿಪ್ಪೇಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.