ADVERTISEMENT

ಈಜಾಡುವ ತಾಣವಾದ ಸಿಹಿನೀರು ಹೊಂಡ

ಬಿಸಿಲಿನ ತಾಪ ತಾಳಲಾರದೆ ಹೊಂಡಗಳಿಗೆ ಇಳಿಯುತ್ತಿರುವ ಮಕ್ಕಳು, ಯುವಕರು

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2018, 7:15 IST
Last Updated 12 ಏಪ್ರಿಲ್ 2018, 7:15 IST
ಚಿತ್ರದುರ್ಗದ ಐತಿಹಾಸಿಕ ಸಿಹಿನೀರು ಹೊಂಡದಲ್ಲಿ ಮಕ್ಕಳು, ಯುವಕರು ಸಂಭ್ರಮದಿಂದ ಈಜಾಡುತ್ತಿರುವುದು
ಚಿತ್ರದುರ್ಗದ ಐತಿಹಾಸಿಕ ಸಿಹಿನೀರು ಹೊಂಡದಲ್ಲಿ ಮಕ್ಕಳು, ಯುವಕರು ಸಂಭ್ರಮದಿಂದ ಈಜಾಡುತ್ತಿರುವುದು   

ಚಿತ್ರದುರ್ಗ: ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮೈ ತಣಿಸಿಕೊಳ್ಳಲು ಕೆರೆ, ಬಾವಿ, ಹೊಂಡಗಳ ಮೊರೆ ಹೋಗಲು ಇಲ್ಲಿನ ಮಕ್ಕಳು ಮತ್ತು ಯುವಕರು ಮುಂದಾಗುತ್ತಿದ್ದಾರೆ.

ಇಲ್ಲಿನ ಐತಿಹಾಸಿಕ ಸಿಹಿನೀರಿನ ಹೊಂಡ ಎರಡು ವರ್ಷಗಳ ಹಿಂದೆ ನೀರಿಲ್ಲದೆ,ಹೂಳು ತುಂಬಿಕೊಂಡು ಉಪಯೋಗಕ್ಕೆ ಬಾರದಂತಾಗಿತ್ತು. ಕಳೆದ ವರ್ಷ ಹೊಂಡದ ಹೂಳು ತೆಗೆಸಲಾಗಿತ್ತು. ಅದಕ್ಕೆ ಸರಿಯಾಗಿ ಮಳೆಯೂ ಚೆನ್ನಾಗಿ ಸುರಿದಿದ್ದರಿಂದ ಹೊಂಡಗಳು ಭರ್ತಿಯಾಗಿ ಕೋಡಿ ಬಿದ್ದಿತ್ತು. ಈಗ ಹೊಂಡಗಳು ಯುವಕರ ಅಚ್ಚುಮೆಚ್ಚಿನ ಈಜಾಡುವ ತಾಣವಾಗಿವೆ.

ಸಿಹಿನೀರು ಹೊಂಡಕ್ಕೆ ಈಜಾಡಲು ಬರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.ಹೊಂಡದ ದಕ್ಷಿಣ ಮತ್ತು ಉತ್ತರ ದಿಕ್ಕಿನ ದಡದ ಎರಡೂ ಬದಿಯಲ್ಲಿ ತಲಾ 50ಕ್ಕೂ ಹೆಚ್ಚು ಮಂದಿ ಈಜಾಡುವವರು ಇದ್ದೇ ಇರುತ್ತಾರೆ.

ADVERTISEMENT

‘ನನಗೆ ಈಜಾಡಲು ಬರುತ್ತೆ. ಮತ್ಯಾಕೆ ಹೆದರಬೇಕು. ಮುಂದೆ ವಿವಿಧ ವಿಧಾನಗಳಲ್ಲಿ ಡೈವ್‌ ಹೊಡೆಯುವುದನ್ನು ಕಲಿಯುತ್ತೇನೆ. ನಾವು ಬಡವರು ಹಣಕೊಟ್ಟು ಸ್ವಿಮಿಂಗ್ ಪುಲ್‍ಗೆ ಹೋಗಿ ಈಜಾಡುವಷ್ಟರ ಮಟ್ಟಿಗೆ ಇನ್ನೂ ಆರ್ಥಿಕವಾಗಿ ಸಬಲರಾಗಿಲ್ಲ ’ ಎನ್ನುತ್ತಾರೆ ಈಜಾಡುತ್ತಿದ್ದ ಯುವಕ ಅಜಯ್.

‘ಈಜಾಡಲು ಬಾರದೇ ಇರುವವರು ನೀರಿಗೆ ಹೆದರುವುದು ಸಾಮಾನ್ಯ. ಈಜು ಕಲಿತರೆ, ಒಂದಲ್ಲೊಂದು ದಿನ ಖಂಡಿತ ಉಪಯೋಗಕ್ಕೆ ಬರುತ್ತದೆ. ಯಾರಾದರೂ ನೀರಿನಲ್ಲಿ ಮುಳುಗುತ್ತಿದ್ದರೆ ಅವರ ರಕ್ಷಣೆಗೆ ಸಹಕಾರಿಯಾಗಲಿದೆ.ಆದ ಕಾರಣ ಈಜು ಕಲಿಯಲು ಬಂದಿದ್ದೇನೆ’ ಎನ್ನುತ್ತಾನೆ ಟ್ಯೂಬು ಹಾಕಿಕೊಂಡು
ಈಜಾಡುತ್ತಿದ್ದ 10 ವರ್ಷದ ಬಾಲಕ ಮಾರುತಿ.

ಎಚ್ಚರ ಅಗತ್ಯ: ಯುವಜನರು ಈಜಾಡಲು ಹೋಗಿ ತನಗೆ ಗೊತ್ತಿಲ್ಲದೆಯೇ ಪ್ರಾಣ ಕಳೆದುಕೊಂಡಿರುವ ಪ್ರಕರಣಗಳು ಕಳೆದ ವರ್ಷ ಜಿಲ್ಲೆಯಲ್ಲಿ ನಡೆದಿವೆ. ಹೊಸದುರ್ಗ ತಾಲ್ಲೂಕು ಹೆಗ್ಗೆರೆ ಗ್ರಾಮದ ಕೆಂಪಮ್ಮನ ಕೆರೆಯಲ್ಲಿ ಈಜಾಡಲು ಹೋಗಿ ಮೂವರು ಬಾಲಕರು ಮೃತಪಟ್ಟಿದ್ದರು. ಅದೇ ರೀತಿ ಮೊಳಕಾಲ್ಮುರು, ಹಿರಿಯೂರು ತಾಲ್ಲೂಕಿನ ಕೆಲವೆಡೆ ಈಜು ಮತ್ತು ಸೆಲ್ಫಿ ತೆಗೆದುಕೊಳ್ಳುವಾಗ ಕೆಲ ಯುವಕರು ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಎಚ್ಚರಿಕೆಯಿಂದ ಈಜಾಡುವುದು ಅಗತ್ಯ ಎಂಬ ಅಭಿಪ್ರಾಯವೂ ಕೆಲವರಿಂದ ವ್ಯಕ್ತವಾಗಿದೆ.

ಬೇಸಿಗೆಯ ರಜೆಯಲ್ಲಿ ಮಕ್ಕಳಿಗೆ, ಯುವಕರಿಗೆ ಮೋಜು ಮಸ್ತಿ ಎಂದರೆ ಸಂಭ್ರಮ. ಅದರಲ್ಲೂ ಸುಡು ಬಿಸಿಲಿನಲ್ಲಿ ಈಜಾಡುವುದೆಂದರೆ ಕೆಲವರಿಗೆ ನಿತ್ಯವೂ ನವೋಲ್ಲಾಸ. ಹೊಸದಾಗಿ ಕಲಿಯುತ್ತಿರುವವರು ಕೆಲವೊಮ್ಮೆ ಆಯಾ ತಪ್ಪಿ ಪ್ರಾಣಾಪಾಯ ಉಂಟಾಗುವ ಸಾಧ್ಯತೆಯೂ ಇದೆ. ಈ ಹಿನ್ನೆಲೆಯಲ್ಲಿ ಜಾಗೃತಿ
ಅಗತ್ಯ ಎನ್ನುತ್ತಾರೆ ಈಜುಗಾರ ರಾಮು.

‘ನೀರಿಗೆ ಇಳಿಯದಿದ್ದರೆ ಈಜು ಬರಲ್ಲ’

ಭಯಪಟ್ಟು ನೀರಿಗೆ ಇಳಿಯದೇ ಇದ್ದರೆ, ಈಜು ಕಲಿಯಲು ಖಂಡಿತ ಸಾಧ್ಯವಿಲ್ಲ. ಬೇಸಿಗೆಯಲ್ಲಿ ದೇಹವನ್ನು ತಂಪಾಗಿಸಿಕೊಳ್ಳಲಿಕ್ಕೆ ಈಜಾಡುವುದು ಒಂದೆಡೆಯಾದರೆ, ನಿತ್ಯವೂ ಇದರಲ್ಲಿ ತೊಡಗುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗುತ್ತದೆ. ಅದಕ್ಕಾಗಿ ಮಕ್ಕಳಿಗೆ ಈಜು ಕಲಿಸಬೇಕು ಎನ್ನುತ್ತಾರೆ ಈಜುಪಟು ಇಂದುಶೇಖರ್.

ಈಜಾಡುವುದು ತಪ್ಪಲ್ಲ. ಆದರೆ, ಉತ್ಸಾಹದ ಭರದಲ್ಲಿ ಈಜಿನಲ್ಲಿ ಪರಿಣತಿ ಹೊಂದಿರುವವರ ಹಾಗೆ ಈಗ ತಾನೇ ಕಲಿಯುತ್ತಿರುವವರು ಉಲ್ಟಾ ಜಿಗಿಯುವುದು, ನೆಗೆಯುವುದು, ತುದಿಗೆ ಹೋಗಿ ಸೆಲ್ಫಿ ತೆಗೆದುಕೊಳ್ಳಲು ಮುಂದಾಗುವುದು ಖಂಡಿತ ಉತ್ತಮ ಬೆಳವಣಿಗೆಯಲ್ಲ ಎನ್ನುತ್ತಾರೆ ಅವರು.

ಸಿಹಿನೀರು ಹೊಂಡದ ರಸ್ತೆ ಏರಿ ಮೇಲಿನ ತಡೆಗೋಡೆಯಿಂದ ಡೈ ಹೊಡೆದರೆ ಯಾವ ಅಪಾಯವಿಲ್ಲ. ಆದರೆ, ಹೊಂಡದ ದ್ವಾರ ಬಾಗಿಲು ಮಾರ್ಗದ ಮುಂಭಾಗದಿಂದ ಜಿಗಿಯುವಾಗ ಎಚ್ಚರ ವಹಿಸಬೇಕು. ಏಕೆಂದರೆ, ಅಲ್ಲಿ ಅತಿ ಹೆಚ್ಚು ಕಲ್ಲುಗಳಿಂದ ಕೂಡಿದ ಮೆಟ್ಟಿಲುಗಳಿವೆ. ತಲೆ, ಮೈಕೈಗಳಿಗೆ ಪೆಟ್ಟಾಗುವ ಸಾಧ್ಯತೆ ಇದೆ. ಆದ್ದರಿಂದ ಜಾಗರೂಕತೆಯಿಂದ ಈಜಾಡಬೇಕು ಎಂದು ಸಲಹೆ ನೀಡಿದ್ದಾರೆ.

-ಬೋರೇಶ ಎಂ.ಜೆ. ಬಚ್ಚಬೋರನಹಟ್ಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.