ADVERTISEMENT

ಎನ್.ಜಿ. ಹಳ್ಳಿ ಗೇಟ್-ರಾಮಗಿರಿ ಮಾರ್ಗದ ದುರಾವಸ್ಥೆ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2011, 6:20 IST
Last Updated 3 ಫೆಬ್ರುವರಿ 2011, 6:20 IST

ಹೊಳಲ್ಕೆರೆ:  ತಾಲ್ಲೂಕಿನ ಎನ್.ಜಿ. ಹಳ್ಳಿ ಗೇಟ್ -ರಾಮಗಿರಿ ಮಾರ್ಗದ ರಸ್ತೆ ತೀರಾ ಹದಗೆಟ್ಟಿದ್ದು, ಚಾಲಕರಿಗೆ ವಾಹನ ಓಡಿಸುವುದು ಒಂದು ದೊಡ್ಡ ಸವಾಲೇ ಸರಿ. ಹೊಸದುರ್ಗ -ಹೊಳಲ್ಕೆರೆ ರಾಜ್ಯಹೆದ್ದಾರಿ-17 ರಲ್ಲಿ ಎರಡೂ ಪಟ್ಟಣದಿಂದ 15 ಕಿ.ಮೀ. ಅಂತರದಲ್ಲಿ ಎನ್.ಜಿ. ಹಳ್ಳಿ ಗೇಟ್ ಇದೆ. ಇಲ್ಲಿಂದ ಒಳಗೆ 13 ಕಿ.ಮೀ. ಅಂತರದಲ್ಲಿ ರಾಮಗಿರಿ ಪಟ್ಟಣ ಇದ್ದು, ಅಷ್ಟೂ ಉದ್ದದ ರಸ್ತೆ ಹಾಳಾಗಿದೆ.

ಈ ಮಾರ್ಗದಲ್ಲಿ ಎನ್.ಜಿ. ಹಳ್ಳಿ, ಗೊಲ್ಲರಹಳ್ಳಿ, ಗಂಗಸಮುದ್ರ, ಗೌಡಿಹಳ್ಳಿ, ಗುಂಡಸಮುದ್ರ, ಚನ್ನಸಮುದ್ರ, ಬೊಮ್ಮನ ಹಳ್ಳಿ, ಹೊಸಹಟ್ಟಿ ಮತ್ತಿತರ ಗ್ರಾಮಗಳಿವೆ. ಇಲ್ಲಿನ ಸಾರ್ವಜನಿಕರು ಇದೇ ರಸ್ತೆಯಲ್ಲೇ ಸಂಚರಿಸಿ, ಎನ್.ಜಿ. ಹಳ್ಳಿ ಗೇಟ್‌ಗೆ ಬಂದು ಅಲ್ಲಿಂದ ಹೊಸದುರ್ಗ, ಹೊಳಲ್ಕೆರೆ, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ ಮತ್ತಿತರ ಪಟ್ಟಣಗಳನ್ನು ತಲುಪಬೇಕು. ಹೊಸದುರ್ಗ ರೋಡ್‌ನಲ್ಲಿ ರೈಲು ನಿಲ್ದಾಣವಿದ್ದು, ಅಲ್ಲಿಗೂ ಹೆಚ್ಚಿನ ಪ್ರಯಾಣಿಕರು ಹೋಗುತ್ತಾರೆ.

ಇಲ್ಲಿ ಬಸ್ ಸೌಲಭ್ಯ ಕಡಿಮೆ ಇದ್ದು, ಪ್ರಯಾಣಿಕರು ಮುಖ್ಯರಸ್ತೆ ತಲುಪಲು ಆಟೋ, ಲಗೇಜ್ ಆಟೋ, ದ್ವಿಚಕ್ರ ವಾಹನಗಳನ್ನು ಬಳಸುತ್ತಾರೆ. ರಸ್ತೆಯುದ್ದಕ್ಕೂ ಗುಂಡಿಗಳು ಉಂಟಾಗಿದ್ದು, ವಾಹನಗಳು ಚಲಿಸುವುದೇ ದುಸ್ತರವಾಗಿದೆ. ಇಲ್ಲಿ ಹೆಚ್ಚಾಗಿ ಲಘುವಾಹನಗಳೇ ಓಡಾಡುವುದರಿಂದ ಅನೇಕ ಬಾರಿ ಉಬ್ಬು-ತಗ್ಗುಗಳಲ್ಲಿ ಪಲ್ಟಿ ಹೊಡೆದಿವೆ. ಎನ್.ಜಿ. ಹಳ್ಳಿ ಮಾದರಿ ಗ್ರಾಮವಾಗಿದ್ದು, ಇಲ್ಲಿ ಸದಾ ಜನಸಂಚಾರ ಹೆಚ್ಚಾಗಿರುತ್ತದೆ. ಮಳೆಗಾಲದಲ್ಲೂ  ಇಲ್ಲಿನ ಸ್ಥಿತಿ ಹೇಳತೀರದು. ಕಳೆದ 15 ದಿನಗಳ ಹಿಂದೆ ಅಡಿಕೆ ತುಂಬಿದ ಲಾರಿಯೊಂದು ಸಿಕ್ಕಿಹಾಕಿಕೊಂಡು, ವಾಹನ ಸಂಚಾರ ಬಂದ್ ಆಗಿತ್ತು. ಇನ್ನು ದ್ವಿಚಕ್ರವಾಹನ ಸವಾರರು ಬಿದ್ದು, ಎದ್ದು, ಹೋಗುವುದು ಇಲ್ಲಿ ಮಾಮೂಲು. ರಾತ್ರಿ ವೇಳೆಯಲ್ಲಂತೂ ಇಲ್ಲಿ ಸಂಚಾರ ಅಸಾಧ್ಯದ ಮಾತು.

‘ಅನೇಕ ವರ್ಷಗಳಿಂದ ಇಲ್ಲಿ ರಸ್ತೆ ದುರಸ್ತಿಯಾಗಿಲ್ಲ. ರಸ್ತೆಯಲ್ಲಿ ಬರೀ ಗುಂಡಿಗಳು ತುಂಬಿದ್ದು, ಸದಾ ಆತಂಕ, ಭಯದಲ್ಲೇ ಗಾಡಿ ಓಡಿಸುತ್ತೇವೆ. ಊರು ತಲುಪುವವರೆಗೂ ಪ್ರಯಾಣಿಕರು ಜೀವ ಕೈಯಲ್ಲಿ ಹಿಡಿದೇ ಹೋಗುವ ಪರಿಸ್ಥಿತಿ ಇದೆ. ಕೆಲವು ಕಡೆ  ರಸ್ತೆಯಲ್ಲಿ ಕೊರಕಲುಗಳು ಉಂಟಾಗಿದ್ದು, ಅನೇಕ ಬಾರಿ ಆಟೋ ಉರುಳಿ ಬಿದ್ದಿವೆ. ಶೀಘ್ರದಲ್ಲೇ ರಸ್ತೆ ದುರಸ್ತಿ ಮಾಡದಿದ್ದರೆ, ಉಗ್ರ ಹೋರಾಟ ನಡೆಸುವುದಾಗಿ ಆಟೋ ಚಾಲಕರಾದ ಮೂರ್ತಿ, ಶಶಿಕುಮಾರ್, ಕೃಷ್ಣಪ್ಪ, ಹಾಲೇಶ್, ನಾಗೇಶ್, ಜಯಕುಮಾರ್, ಉಮೇಶ್, ಆನಂದ್, ಮೇಲಿನಕೊಟ್ಟಿಗೆ ತಿಮ್ಮೇಶ್, ಎನ್. ಮನು ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.