ADVERTISEMENT

ಕಡೂರು: ಸಂಭ್ರಮದ ವೀರಭದ್ರಸ್ವಾಮಿ ರಥೋತ್ಸವ

ಮುರುಘಾ ಶರಣರಿಂದ ಆಶೀರ್ವಚನ; ಜನಪದ ಕಲಾತಂಡಗಳ ಮೆರುಗು; ಭಕ್ತರಿಂದ ಹರಕೆ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2018, 9:43 IST
Last Updated 7 ಮಾರ್ಚ್ 2018, 9:43 IST
ಚಿಕ್ಕಜಾಜೂರಿನ ಕಡೂರು ಗ್ರಾಮದಲ್ಲಿ ಮಂಗಳವಾರ ನಡೆದ ವೀರಭದ್ರಸ್ವಾಮಿಯ ರಥೋತ್ಸವದಲ್ಲಿ ಪಾಲ್ಗೊಂಡ ಜನಸ್ತೋಮ.
ಚಿಕ್ಕಜಾಜೂರಿನ ಕಡೂರು ಗ್ರಾಮದಲ್ಲಿ ಮಂಗಳವಾರ ನಡೆದ ವೀರಭದ್ರಸ್ವಾಮಿಯ ರಥೋತ್ಸವದಲ್ಲಿ ಪಾಲ್ಗೊಂಡ ಜನಸ್ತೋಮ.   

ಚಿಕ್ಕಜಾಜೂರು: ಹೊಳಲ್ಕೆರೆ ತಾಲ್ಲೂಕಿನ ಧಾರ್ಮಿಕ ಕೇಂದ್ರವಾದ ಕಡೂರು ವೀರಭದ್ರಸ್ವಾಮಿಯ ರಥೋತ್ಸವ ಭಕ್ತ ಸಮೂಹದ ನಡುವೆ ಮಂಗಳವಾರ ಸಂಭ್ರಮದಿಂದ ನೆರವೇರಿತು.

ರಥೋತ್ಸವದ ಪ್ರಯುಕ್ತ ಸ್ವಾಮಿಯ ದರ್ಶನಕ್ಕೆ ಭಾನುವಾರ ಬೆಳಿಗ್ಗೆಯಿಂದಲೇ ಭಕ್ತರು ತಂಡೋಪತಂಡವಾಗಿ ಬರಲಾರಂಭಿಸಿದ್ದರು. ಬೆಟ್ಟದ ತಪ್ಪಲಿನ ಬಯಲಿನಲ್ಲಿ ಭಕ್ತರು ಇಷ್ಟದೇವರಿಗೆ ಸಿಹಿ ಅಡುಗೆ ತಯಾರಿಸಿ, ಎಡೆ ನೀಡುತ್ತಿದ್ದುದು ಕಂಡುಬಂತು.

ಮಂಗಳವಾರ ಬೆಳಿಗ್ಗೆಯಿಂದಲೇ ವೀರಭದ್ರಸ್ವಾಮಿಗೆ ವಿವಿಧ ಪೂಜಾ ಕಾರ್ಯಗಳನ್ನು ನಡೆಸಲಾಯಿತು. ಉತ್ಸವಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ, ಗ್ರಾಮದ ರಸ್ತೆಗಳಲ್ಲಿ ನಂದಿಕೋಲು ಕುಣಿತ, ಡೊಳ್ಳುಕುಣಿತ ಹಾಗೂ ಗ್ರಾಮದ ವೀರಗಾಸೆ ಕಲಾ ತಂಡದ ನೃತ್ಯದೊಂದಿಗೆ ಮೆರವಣಿಗೆ ನಡೆಸಲಾಯಿತು.

ADVERTISEMENT

ಸಂಜೆ ಉತ್ಸವ ಮೂರ್ತಿಯನ್ನು ದೇವಸ್ಥಾನಕ್ಕೆ ಕರೆತರಲಾಯಿತು. ಆಕರ್ಷಕವಾಗಿ ಅಲಂಕರಿಸಲಾದ ರಥಕ್ಕೆ ದೊಡ್ಡೆಡೆ ಸೇವೆ ಸಲ್ಲಿಸಿ, ಉತ್ಸವಮೂರ್ತಿಯನ್ನು ರಥದಲ್ಲಿ ಕೂರಿಸಲಾಯಿತು. ರಥದ ಮೇಲಿನ ಬಾವುಟ ಹಾಗೂ ಸ್ವಾಮಿಯ ಮೇಲಿನ ಹೂವಿನ ಹಾರಗಳನ್ನು ಹರಾಜು ಹಾಕಲಾಯಿತು. ಮಹಾ ಮಂಗಳಾರತಿ ನಂತರ ಭಕ್ತರು ರಥದ ಚಕ್ರಗಳಿಗೆ ತೆಂಗಿನ ಕಾಯಿ ಒಡೆದರು.

ಶಿವಮೂರ್ತಿ ಶರಣರಿಂದ ಆಶೀರ್ವಚನ: ಭಕ್ತ ಸಮೂಹ ಎಲ್ಲಿ ಸೇರುತ್ತದೆಯೋ ಅಲ್ಲಿ ಪರಮಾತ್ಮನ ಸಾಕ್ಷಾತ್ಕಾರವಾಗುತ್ತದೆ. ಧರ್ಮದಲ್ಲಿ ಜಾತಿಗಳಿವೆ. ಆದರೆ  ದೇವರಿಗೆ ಜಾತಿ ಭೇದವಿಲ್ಲ ಎಂಬುದನ್ನು ಇಲ್ಲಿ ನೆರೆದ ಜನಸಾಗರವೇ ಸಾರುತ್ತಿದೆ ಎಂದು ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಆಶೀರ್ವಚನದಲ್ಲಿ ತಿಳಿಸಿದರು.

ರಥಕ್ಕೆ ಹೂವನ್ನು ಚೆಲ್ಲುವ ಮೂಲಕ ರಥೋತ್ಸವಕ್ಕೆ ಅವರು ಚಾಲನೆ ನೀಡಿದರು. ನೆರೆದಿದ್ದ ಸಹಸ್ರಾರು ಭಕ್ತರು ರಥವನ್ನು ಎಳೆದು ಭಕ್ತಿ ಸಮರ್ಪಿಸಿದರು.

ಪ್ರಸಾದ ವ್ಯವಸ್ಥೆ, ಪಾನಕ ವಿತರಣೆ: ವೀರಭದ್ರಸ್ವಾಮಿಯ ಜಾತ್ರೆಯ ಅಂಗವಾಗಿ ಚನ್ನಗಿರಿಯ ಲಿಂಗದಳ್ಳಿ ವಂಶಸ್ಥರಾದ ಉಮೇಶಣ್ಣ, ಷಡಕ್ಷರಿ ಬಾಬು, ರೇಣುಕಣ್ಣ ಹಾಗೂ ಭದ್ರಣ್ಣ ಅವರು ಸೋಮವಾರ ಹಾಗೂ ಮಂಗಳವಾರ ಜಾತ್ರೆಗೆ ಬಂದ ಎಲ್ಲಾ ಭಕ್ತರಿಗೆ ಸಿಹಿ ಊಟದ ಪ್ರಸಾದ ವ್ಯವಸ್ಥೆ ಮಾಡಿದ್ದರು. ಭಾನುವಾರದಿಂದ ಮಂಗಳವಾರದವರೆಗೆ ಸುಮಾರು ಒಂದು ಲಕ್ಷ ಭಕ್ತರು ದರ್ಶನ ಪಡೆದಿದ್ದಾರೆ ಎಂದು ದೇವಸ್ಥಾನ ಸಮಿತಿ ತಿಳಿಸಿದೆ.

ಪಿಎಸ್‌ಐ ಪಿ.ಬಿ. ಮಧು ನೇತೃತ್ವದಲ್ಲಿ ಚಿಕ್ಕಜಾಜೂರು ಹಾಗೂ ಹೊಳಲ್ಕೆರೆ ಪೊಲೀಸ್‌ ಸಿಬ್ಬಂದಿ ಹಾಗೂ ಜಿಲ್ಲಾ ಪೊಲೀಸ್‌ ಸಿಬ್ಬಂದಿ ಭದ್ರತೆ ನೀಡಿದ್ದರು. ಮಂಗಳವಾರ ರಾತ್ರಿ ಗ್ರಾಮದ ವೀರಭದ್ರ ಕಲಾವಿದರ ತಂಡದಿಂದ ‘ತಾಳ ತಪ್ಪಿದ ತಂಗಿಯ ಬಾಳು ಆರ್ಥಾತ್‌ ಕರ್ಮ ಬದುಕಿತು ಧರ್ಮ ಗೆದ್ದಿತು’ ಎಂಬ ಸಾಮಾಜಿಕ ನಾಟಕದ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.