ADVERTISEMENT

ಕತ್ತೆಗಳ ಕೈಯಲ್ಲಿ ಆಡಳಿತ: ವಿಷಾದ

​ಪ್ರಜಾವಾಣಿ ವಾರ್ತೆ
Published 31 ಜುಲೈ 2012, 4:45 IST
Last Updated 31 ಜುಲೈ 2012, 4:45 IST
ಕತ್ತೆಗಳ ಕೈಯಲ್ಲಿ ಆಡಳಿತ: ವಿಷಾದ
ಕತ್ತೆಗಳ ಕೈಯಲ್ಲಿ ಆಡಳಿತ: ವಿಷಾದ   

ಚಿತ್ರದುರ್ಗ: ಅಶಕ್ತ ಮತ್ತು ಅಪ್ರಬುದ್ಧ ರಾಜಕಾರಣಿಗಳಿಗೆ ಆಡಳಿತ ನಡೆಸುವ ಅವಕಾಶ ದೊರೆತ ಪರಿಣಾಮ ಇಂದಿಗೂ ದೇಶ ಯಾವ ಕ್ಷೇತ್ರಗಳಲ್ಲೂ ಪ್ರಗತಿ ಕಾಣದೆ ಮತ್ತಷ್ಟೂ ದುಸ್ಥಿತಿಯತ್ತ ಸಾಗಿದೆ ಎಂದು ವಿಜಾಪುರ-ಗದಗದ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ವಿಷಾದ ವ್ಯಕ್ತಪಡಿಸಿದರು.

ನಗರದ ತರಾಸು ರಂಗಮಂದಿರದಲ್ಲಿ ಸೋಮವಾರ ಶಾರದಾ ರಾಮಕೃಷ್ಣ ಆಶ್ರಮ, ರೋಟರಿ ಕ್ಲಬ್ ಮತ್ತು ಇನ್ನರ್‌ವ್ಹೀಲ್ ಕ್ಲಬ್  ಸಂಯುಕ್ತ ಆಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದರ 150ನೇ ಜನ್ಮದಿನೋತ್ಸವ ವರ್ಷಾಚರಣೆ ಹಾಗೂ ಯುವ ಸಮ್ಮೇಳನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕತ್ತೆಗಳ ಕೈಯಲ್ಲಿ ರಾಷ್ಟ್ರದ ಆಡಳಿತ ದೊರೆತಿರುವುದರಿಂದ ದೇಶ ದುಸ್ಥಿತಿಗೆ ತಲುಪಿದೆ. ಇದುವರೆಗೆ ರಾಷ್ಟ್ರ ನಿರ್ಮಾಣದಲ್ಲಿ ರಾಜಕಾರಣಿಗಳು ಸಂಪೂರ್ಣ ವಿಫಲವಾಗಿದ್ದಾರೆ. ಮಾಜಿ ಪ್ರಧಾನಿ ನೆಹರು ಅವರ ಪಂಚವಾರ್ಷಿಕ ಯೋಜನೆಗಳು ಜಾರಿಯಾಗಿದ್ದರೂ ಇದುವರೆಗೂ ನಿರೀಕ್ಷಿತ ಪ್ರಗತಿ ಸಾಧಿಸಲು ಸಾಧ್ಯವಾಗಿಲ್ಲ. ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಸೇರಿದಂತೆ ರಕ್ಷಣಾ ವಿಚಾರದಲ್ಲೂ ಕೂಡ ದೇಶ ಉತ್ತಮ ಸಾಧನೆ ಮಾಡಿಲ್ಲ.

ಕಾಶ್ಮೀರದ ಮೇಲೆ ಪದೇ ಪದೇ ಆಕ್ರಮಣಗಳು ನಡೆಯುತ್ತಲೇ ಇದೆ. ಸರ್ಕಾರದ ಎಲ್ಲಾ ಇಲಾಖೆಗಳು ಉತ್ತಮವಾಗಿ ಕಾರ್ಯ ನಿರ್ವಹಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಕೇವಲ ರಾಜಕೀಯ ಸ್ವಾತಂತ್ರ್ಯದಿಂದ ದೇಶ ರಾಮ ರಾಜ್ಯವಾಗುವುದಿಲ್ಲ. ದೇಶ ಪ್ರಗತಿಯ ಉತ್ತುಂಗ ಸ್ಥಿತಿ ತಲುಪಬೇಕಾದರೆ ಸ್ವಾಮಿ ವಿವೇಕಾನಂದರಂಥ ವ್ಯಕ್ತಿತ್ವವುಳ್ಳವರು ಮಾತ್ರ ರಾಷ್ಟ್ರವನ್ನು ಆಳಲು ಯೋಗ್ಯರು ಎಂದು ನುಡಿದರು. 

ದೇಶದಲ್ಲಿ ಶಿಕ್ಷಣ ವ್ಯವಸ್ಥೆ ಮೂರ್ಖರಿಂದ ನಿರ್ಮಾಣವಾಗಿದ್ದರಿಂದ ಸಫಲತೆ ಕಾಣಲು ಇಂದಿಗೂ ಸಾಧ್ಯವಾಗಿಲ್ಲ. ಈಗ ಶಾಲಾ ಕಾಲೇಜುಗಳಲ್ಲಿ ಭೋದನೆ ಮಾಡುತ್ತಿರುವ ಗಣಿತ, ಇಂಗ್ಲಿಷ್ ಮತ್ತು ಅರ್ಥಶಾಸ್ತ್ರದ ವಿಷಯಗಳಲ್ಲಿ ನಿಜವಾಗಿಯೂ ಸಾಧನೆ ಮಾಡಿದ್ದರೆ ಭಾರತ ಏಕೆ ಆರ್ಥಿಕವಾಗಿ ಹಿಂದುಳಿಯುತ್ತಿತ್ತು. ನಮ್ಮಲ್ಲಿರುವ ಪೋಷಕರಿಗೆ ತಲೆಯಲ್ಲಿ ಜೇಡಿಮಣ್ಣು ತುಂಬಿದೆ. ತಮ್ಮ ಮಕ್ಕಳಿಗೆ ಸತತ 20 ವರ್ಷ ಶಿಕ್ಷಣಕ್ಕಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕೆಲಸಕ್ಕಾಗಿ ಭಿಕ್ಷೆ ಬೇಡುವಂತೆ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ದೇಶದ ಪರಿಸ್ಥಿತಿಯ ಬದಲಾವಣೆಗಾಗಿ ಜ್ಞಾನ ಉಪಯೋಗ ಆಗಬೇಕು. ಶಿಕ್ಷಣ ಎಂದರೆ ರಾಷ್ಟ್ರ ನಿಮಾರ್ಣದಂತಹ ಮಹತ್ತರವಾದ ಗುರಿ ಇಟ್ಟುಕೊಂಡಿರಬೇಕು. ಜ್ಞಾನಾರ್ಜನೆಗಾಗಿ ವಿಷಯಗಳ ವಿಚಾರವಂತಿಕೆಯನ್ನು ಮಂಥನ ಮಾಡುವಂಥ ಪ್ರೌಢಿಮೆ ಬೆಳೆಸಿಕೊಳ್ಳಬೇಕು ಎಂದರು.

ಕೇಂದ್ರ ಸಚಿವ ಕಪಿಲ್ ಸಿಬಾಲ್ ಸಿಬಿಎಸ್‌ಸಿ ಪಠ್ಯಕ್ರಮಕ್ಕೆ ಆದೇಶ ನೀಡಿರುವುದು ಸಹ ಬೇಜವಾಬ್ದಾರಿತನದಿಂದ ಕೂಡಿದೆ. ಆದರೆ, ವಿದ್ಯಾರ್ಥಿಗಳು ಇಂದು ಅತಿ ಹೆಚ್ಚು ಅಂಕಗಳಿಸಿ ಸ್ವಪ್ರತಿಷ್ಠೆ, ಉದ್ಯೋಗ ಮತ್ತು ಸಂಪಾದನೆಯಲ್ಲೇ ಕಾಲ ಕಳೆಯುತ್ತಿರುವುದರಿಂದ ಕತ್ತೆಗಳ ಕೈಯಲ್ಲಿ ದೇಶವನ್ನು ಆಳಲು ಕೊಟ್ಟು ದೇಶವನ್ನು ಮತ್ತಷ್ಟು ಅಂಧಃ ಪತನದತ್ತ ಕೊಂಡೊಯ್ಯಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸ್ವಾಮಿ ವಿವೇಕಾನಂದರೊಂದಿಗೆ ಕೇವಲ ಒಂದು ಗಂಟೆ ಚರ್ಚಿಸಿ ಪ್ರೇರಿತನಾದ ನಾರ್ಮನ್ ಬೋರ್ಲಾಗ್ ಎನ್ನುವವರು ಇಡೀ ಪ್ರಪಂಚಕ್ಕೆ ಬತ್ತವನ್ನು ಪರಿಚಯಿಸಿ ಸುಮಾರು ಇಂದು 700 ಕೋಟಿ ಜನರಿಗೆ ಅದರ ಉಪಯೋಗವಾಗುವಂತೆ ಮಾಡಲು ನಮ್ಮವರು ಕಾರಣರಾದರು. ಬ್ರಿಟಿಷರು ಭಾರತೀಯರಿಗೆ ಬೂಟುಕಾಲಿನಲ್ಲಿ ಒದಿಯುತ್ತಿದ್ದರೆ, ಅವರಿಂದಲ್ಲೇ ಪಾದ ಸೇವೆ ಮಾಡಿಸಿಕೊಂಡವರು ವಿವೇಕಾನಂದರು.
 
ಸ್ವತಃ ಸುಭಾಷ್ ಚಂದ್ರಬೋಸ್ ಹೇಳಿದಂತೆ ವಿವೇಕಾನಂದರ ಪಾದಸೇವೆ ಮಾಡುವ ಭಾಗ್ಯ ದೊರೆತರೆ ಸಾಕು ಎಂದಿದ್ದರಂತೆ. ಸ್ವಾತಂತ್ರ ನಂತರ ಅವರನ್ನು ಮರೆತ್ತಿದ್ದರಿಂದಲೇ ಇಂತಹ ದುಸ್ಥಿತಿಯಲ್ಲಿದ್ದೇವೆ. ಇನ್ನಾದರೂ ವಿದ್ಯಾರ್ಥಿಗಳು ಬದಲಾವಣೆ ಕಂಡುಕೊಳ್ಳಿ. ದೇಶಕ್ಕಾಗಿ ಶ್ರಮಿಸಿ ನೀವು ಸಹ ಅವರಂತಾಗಬಹುದು ಎಂದು ಸಲಹೆ ನೀಡಿದರು.  

ತುಮಕೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ವೀರೇಶಾನಂದ ಸರಸ್ವತಿ ಸ್ವಾಮೀಜಿ, ಹುಬ್ಬಳ್ಳಿಯ ರಾಮಕೃಷ್ಣ ವಿವೇಕಾನಂದ ಆಶ್ರಮದ ರಘುವೀರಾನಂದ ಸ್ವಾಮೀಜಿ, ಶಿವಮೊಗ್ಗದ ರಾಮಕೃಷ್ಣ ವಿವೇಕಾನಂದ ಆಶ್ರಮದ ವಿನಯಾನಂದ ಸ್ವಾಮೀಜಿ, ಬೆಂಗಳೂರಿನ ರಾಮಕೃಷ್ಣ ಯೋಗಾಶ್ರಮದ ಯೋಗೇಶ್ವರಾನಂದ ಸ್ವಾಮೀಜಿ,
 
ಗುಲ್ಬರ್ಗದ ರಾಮಕೃಷ್ಣ ವಿವೇಕಾನಂದ ಆಶ್ರಮದ ಮಹೇಶ್ವರಾನಂದ ಸ್ವಾಮೀಜಿ, ಬೀದರ್ ರಾಮಕೃಷ್ಣ ವಿವೇಕಾನಂದ ಆಶ್ರಮದ ಜ್ಯೋತಿರ್ಮಯಾನಂದ ಸ್ವಾಮೀಜಿ, ಬೆಂಗಳೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ಶಾರದಾತ್ಮಾನಂದ ಸ್ವಾಮೀಜಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.