ADVERTISEMENT

ಕನ್ನಡ ಅಕ್ಷರಮಾಲೆಯ ಸುಧಾರಣೆ ಅಗತ್ಯ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2012, 6:49 IST
Last Updated 15 ಡಿಸೆಂಬರ್ 2012, 6:49 IST

ಹಿರಿಯೂರು: ಕನ್ನಡ ಅಕ್ಷರಗಳು ಬದಲಾಗಬೇಕು. ಅಕ್ಷರಮಾಲೆಯ ಸುಧಾರಣೆಯಾಗಬೇಕು ಎಂದು ಮದರಾಸು ವಿವಿ ಕನ್ನಡ ವಿಭಾಗದ ವಿಶ್ರಾಂತ ಮುಖ್ಯಸ್ಥ ಡಾ.ಚೆ. ರಾಮಸ್ವಾಮಿ ಪ್ರತಿಪಾದಿಸಿದರು.

ನಗರದ ಬಾಲಕಿಯರ ಸರ್ಕಾರಿ ಪಿಯು ಕಾಲೇಜು ಆವರಣದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ, ಕನಕ ಜಯಂತಿ ಹಾಗೂ ಕಸಬಾ ಹೋಬಳಿ ಕಸಾಪ ಘಟಕದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

`ಋ' ಅಕ್ಷರ, `ಸೊನ್ನೆ' ತೆಗೆಯಬೇಕು. ಕನ್ನಡ ಪದಗಳ ಬಳಕೆ ಹೆಚ್ಚಬೇಕು. ನಮ್ಮಲ್ಲಿ ಜಾನಪದ ಸಾಹಿತ್ಯವಿದ್ದಂತೆ ಪ್ರಪಂಚದ ಎಲ್ಲಾ ದೇಶಗಳಲ್ಲೂ ಅವರದ್ದೇ ಆದ ಸಾಹಿತ್ಯವಿದೆ. ಪ್ರತಿಯೊಂದು ಭಾಷೆಯಿಂದಲೂ ಪಡೆಯುವುದು ಸಾಕಷ್ಟಿದೆ ಎಂದರು.

`ಬೆಳಗಾಗಿ ನಾನೆದ್ದು ಯಾರ‌್ಯಾರ ನೆನೆಯಾಲಿ, ಎಳ್ಳು ಜೀರಿಗೆ ಬೆಳೀವ ಭೂಮಿತಾಯ್ನ ಎದ್ದೊಂದು ಗಳಿಗೆ ನೆನದೇನ...' ಎನ್ನುವಲ್ಲಿ ಎಳ್ಳು ಸಾವನ್ನು, ಜೀರಿಗೆ ಹುಟ್ಟನ್ನು ಸೂಚಿಸುತ್ತದೆ. ಈ ಭೂಮಿ ಹುಟ್ಟು-ಸಾವನ್ನು ಸಂಕೇತಿಸುತ್ತದೆ ಎಂದು ವಿಶ್ಲೇಷಿಸಿದರು.

`ಜಾನಪದ ಸಂಸ್ಕೃತಿ ಮತ್ತು ಆಧುನಿಕತೆ' ವಿಷಯ ಕುರಿತು ಮಾತನಾಡಿದ ಪ್ರಾಧ್ಯಾಪಕ ಡಾ.ಕರಿಯಪ್ಪ ಮಾಳಿಗೆ, ಭಾರತ ಜಾನಪದದ ಜೀವಂತ ಕಣಜ. ಅಂದಿನ ಜನರು ಅನಕ್ಷರಸ್ಥರಾದರೂ ಅವಿದ್ಯಾವಂತರಲ್ಲ. ಆಧುನಿಕರ ಮನಸ್ಸನ್ನು ಜನಪದ ಸಾಹಿತ್ಯ ಗೆದ್ದಿದೆ. ದೂರವಿಡುವುದು ಆಧುನಿಕ ಸಂಸ್ಕೃತಿಯಾದರೆ, ಕೂಡಿಸುವುದು ಜನಪದ ಸಂಸ್ಕೃತಿ ಎಂದು ತಿಳಿಸಿದರು.

ಹಿರಿಯ ಪತ್ರಕರ್ತ ಎಚ್.ಎನ್. ನರಸಿಂಹಯ್ಯ ಅಧ್ಯಕ್ಷತೆ ವಹಿಸಿದ್ದರು.   ಜಿ. ಧನಂಜಯಕುಮಾರ್, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಜಗದೀಶ್ ದರೇದಾರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.