ADVERTISEMENT

ಕನ್ನಡ ಕಲಿಕೆಗೆ ಆದ್ಯತೆ: ಸರ್ಕಾರಕ್ಕೆ ಪುಂಡಲೀಕ ಹಾಲಂಬಿ ಒತ್ತಾಯ

​ಪ್ರಜಾವಾಣಿ ವಾರ್ತೆ
Published 25 ಜೂನ್ 2013, 10:35 IST
Last Updated 25 ಜೂನ್ 2013, 10:35 IST

ಚಿತ್ರದುರ್ಗ: ರಾಜ್ಯ ಸರ್ಕಾರ ಕನ್ನಡ ಶಾಲೆಗಳನ್ನು ಮುಚ್ಚುವ ನಿರ್ಧಾರ ಕೈ ಬಿಟ್ಟು ಕನ್ನಡ ಕಲಿಕೆಗೆ ಹೆಚ್ಚು ಆದ್ಯತೆ ನೀಡುವ ಮೂಲಕ ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಸಾಹಿತ್ಯದ ರಕ್ಷಣೆಗೆ ಮುಂದಾಗಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ ಅಧ್ಯಕ್ಷ ಪುಂಡಲೀಕ ಹಾಲಂಬಿ ಸರ್ಕಾರವನ್ನು ಒತ್ತಾಯಿಸಿದರು.

ನಗರದಲ್ಲಿ ನಡೆದ ಜಿಲ್ಲಾ ಸಮ್ಮೇಳನದಲ್ಲಿ ಆಶಯ ನುಡಿಗಳನ್ನಾಡಿದ ಅವರು, `ಪ್ರಸ್ತುತ ಕಾಲಘಟ್ಟದಲ್ಲಿ ಆಂಗ್ಲ ಭಾಷೆಯ ಮೇಲೆ ವ್ಯಾಮೋಹ ಹೆಚ್ಚುತ್ತಿದೆ. ಹಾಗಾಗಿ ಕನ್ನಡವನ್ನು ಅನ್ನ ಕೊಡುವ ಭಾಷೆಯನ್ನಾಗಿ ರೂಪಿಸುವ ಅಗತ್ಯ ಇದೆ. ಯಾವ ಕಾಲಘಟ್ಟದಲ್ಲಿ ಸಮ್ಮೇಳನ ನಡೆಸಲಾಗುತ್ತಿದೆ ಎಂಬುದನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಮಧ್ಯ ಕರ್ನಾಟಕವನ್ನು ಪ್ರತಿನಿಧಿಸುವ ಚಿತ್ರದುರ್ಗ ಜಿಲ್ಲೆ ಕನ್ನಡ ಭಾಷೆ ಗಟ್ಟಿಯಾಗಿ ತಳವೂರಿರುವ ಗಂಡುಮೆಟ್ಟಿನ ನಾಡು. ಸಾಹಿತ್ಯ, ಸಂಸ್ಕೃತಿ ಹಾಗೂ ಐತಿಹಾಸಿಕವಾಗಿ ಈ ಜಿಲ್ಲೆ ತನ್ನದೇ ಆದ ಮಹತ್ವದ ಸ್ಥಾನ ಪಡೆದಿದೆ ಎಂದು ಪ್ರತಿಪಾದಿಸಿದರು.

`11 ವರ್ಷಗಳ ನಂತರ ಜಿಲ್ಲೆಯಲ್ಲಿ ಜಿಲ್ಲಾ ಸಮ್ಮೇಳನ ನಡೆಯುತ್ತಿದೆ. ಅಖಿಲ ಭಾರತ ಸಮ್ಮೇಳನಕ್ಕೆ ಸೇರಿದಷ್ಟು ಜನ ಸೇರಿದ್ದೀರಿ. ನಿಮಗೆಲ್ಲ ಅಭಿನಂದನೆಗಳು'  ಎಂದು ಹೇಳಿದರು.

`ಈಚೆಗೆ ಶಾಸನ ಸಭೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ತನ್ನ  ಪ್ರಣಾಳಿಕೆಯಲ್ಲಿ ಕನ್ನಡವನ್ನು ಕಡ್ಡಾಯವಾಗಿ ಬಳಸುತ್ತೇವೆ ಎಂದು ಹೇಳಿತ್ತು. ಈ ಕಾರಣಕ್ಕಾಗಿಯೇ ಜನತೆ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ ಎನ್ನಿಸುತ್ತಿದೆ. ಜನರ ಆಶಯಗಳನ್ನು ಈಡೇರಿಸುವ ಮೂಲಕ ಆಡಳಿತದಲ್ಲಿ ಕನ್ನಡ ಕಡ್ಡಾಯವಾಗಿ ಜಾರಿಗೆ ತರಲು ಶ್ರಮಿಸಬೇಕು ಎಂದರು.

`ಸರ್ಕಾರ ಸಾಂಸ್ಕೃತಿಕ ಆಕಾಡೆಮಿಗಳಿಗೆ ವ್ಯಕ್ತಿಗಳನ್ನು ನೇಮಿಸುವ ಜವಾಬ್ದಾರಿಯನ್ನು ಲಘುವಾಗಿ ಪರಿಗಣಿಸಿದೆ ಎಂಬ ಅನುಮಾನಗಳು ಮೂಡುತ್ತಿವೆ. ಸಾಂಸ್ಕೃತಿಕ ಲೋಕದ ಜೀವಂತಿಕೆಗೆ ಪ್ರಭುತ್ವ ಮನ್ನಣೆ ನೀಡಬೇಕಿದೆ ಎಂದು ಹಾಲಂಬಿ ಒತ್ತಾಯ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.