ಚಿತ್ರದುರ್ಗ: ‘ಕುಡಿಯುವ ನೀರಿಗೆ ಕೋಟಿಗಟ್ಟಲೆ ಹಣ ಖರ್ಚು ಮಾಡಲಾಗುತ್ತಿದೆ. ಒಂದೂ ವಾರ್ಡಿಗೂ ಸರಿಯಾಗಿ ನೀರು ಪೂರೈಕೆಯಾಗುತ್ತಿಲ್ಲ. 10 ದಿನಗಳಿ ಗೊಮ್ಮೆ ನೀರು ಪೂರೈಸಿದರೆ, ನೀರಿಗಾಗಿ ಜನರು ಏನು ಮಾಡಬೇಕು. ಅವರ ಮುಂದೆ ತಲೆ ಎತ್ತಿ ಮಾತನಾಡಲು ಆಗುತ್ತಿಲ್ಲ. ಏಕೆ ಇಂಥ ಕಳಪೆ ಆಡಳಿತ ನಿರ್ವಹಿಸುತ್ತೀರಾ’ ಎಂದು ಬಹುತೇಕ ಸದಸ್ಯರು ನಗರಸಭೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ನಗರದ ನಗರಸಭೆ ಹಳೇ ಕಾರ್ಯಾಲಯದಲ್ಲಿ ಅಧ್ಯಕ್ಷ ಕಾಂತರಾಜ್ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ ಕೆಲ ಸದಸ್ಯರು, ‘ನಗರದ ಸ್ವಚ್ಛತೆ ಕಾಪಾಡಲು ಆಗುತ್ತಿಲ್ಲ. ರಸ್ತೆಯಲ್ಲಿ ಬಿದ್ದ ಕಸ ತೆಗೆಯುತ್ತಿಲ್ಲ. ಮತ ನೀಡಿ ದವರು ತೀರಾ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ನಾವು ಏನು ಹೇಳಬೇಕು. ಸದಸ್ಯರ ಮುಖ ನೋಡಿದ ತಕ್ಷಣ ಅಧಿಕಾರಿಗಳು ಕ್ಷಣದಲ್ಲಿ ಮಾಯವಾಗುತ್ತಾರೆ. ಆಡಳಿತ ಕಚೇರಿ ಯಲ್ಲಿ ಐದು ನಿಮಿಷ ಕೂರುವುದಿಲ್ಲ. ಪರಿಸ್ಥಿತಿ ಈಗಿದ್ದರೂ ನೀವು ಯಾವುದೇ ಕ್ರಮ ಜರುಗಿಸುತ್ತಿಲ್ಲ’ ಎಂದು ಆಯುಕ್ತ ರನ್ನು ತರಾಟೆಗೆ ತೆಗೆದುಕೊಂಡರು.
ಅಧಿಕಾರಿಗಳ ವಿರುದ್ಧ ಕಿಡಿ: ಪೌರಾಯುಕ್ತರು ಸಮರ್ಪಕ ಮಾಹಿತಿ ಒದಗಿಸುತ್ತಿಲ್ಲ, ಸದಸ್ಯರ ಮಾತನ್ನು ಯಾವ ಅಧಿಕಾರಿಯೂ ಕೇಳುತ್ತಿಲ್ಲ. ವಾರ್ಡ್‌ಗಳ ನಿವಾಸಿಗಳ ಸಮಸ್ಯೆ, ಸಂಕಷ್ಟ ಯಾರ ಬಳಿ ಹೇಳಿಕೊಳ್ಳಬೇಕೆಂಬುದೇ ಗೊತ್ತಾಗದಂತ ಪರಿಸ್ಥಿತಿ ನಿರ್ಮಾಣ ವಾಗಿದೆ ಎಂದು ಸದಸ್ಯರು ಪೌರಾಯುಕ್ತರ ನಡೆ ಆಕ್ಷೇಪಿಸಿ ಕಿಡಿಕಾರಿದರು.
ನೀರಿಗಾಗಿ ₨ 2 ಕೋಟಿ ಮೀಸಲು: ನಗರಸಭೆ ಅಧ್ಯಕ್ಷ ಬಿ.ಕಾಂತರಾಜ್ ಮಾತನಾಡಿ, ಸದಸ್ಯರು ಕೇಳುವ ಪ್ರಶ್ನೆಗಳಿಗೆ ಸಮಾಧಾನದಿಂದ ಸೂಕ್ತ ಮಾಹಿತಿ ನೀಡಿ ಎಂಬುದಾಗಿ ಅಧಿಕಾರಿ ಗಳಿಗೆ ತಾಕೀತು ಮಾಡಿದರಲ್ಲದೆ, ಶಾಂತಿಸಾಗರದಿಂದ ಪೂರೈಕೆಯಾಗುತ್ತಿ ರುವ ನೀರಿನ ಸಂಪರ್ಕದ ಮಾರ್ಗ ಮಧ್ಯದ ಹಲವು ಕಡೆಗಳಲ್ಲಿ ಪೈಪ್ ಲೈನ್ ಒಡೆದು ನೀರು ಸೋರಿಕೆ ಆಗುತ್ತಿದೆ. ಅಲ್ಲದೆ, ಶಾಂತಿಸಾಗರದಲ್ಲಿ ಪಂಪ್‌ಗಳು ಕಡಿಮೆ ಸಾಮರ್ಥ್ಯ ಹೊಂದಿದ್ದು, ಕೆಲವು ಪಂಪ್‌ಗಳು ದುರಸ್ತಿಗೆ ಬಂದಿರುವ ಕಾರಣ ₨ 2 ಕೋಟಿ ಮೀಸಲಿಡಲಾಗಿದ್ದು, ಶೀಘ್ರದಲ್ಲೇ ದುರಸ್ತಿ ಕಾರ್ಯ ಮಾಡಿ ಸಮರ್ಪಕ ನೀರು ಪೂರೈಕೆ ಮಾಡಲಾಗುತ್ತದೆ ಎಂದು ಸದಸ್ಯರನ್ನು ಸಮಾಧಾನಪಡಿಸಿದರು.
ರಸ್ತೆ ಕಾಮಗಾರಿ ಕಳಪೆಯಲ್ಲ: ನಗರೋತ್ಥಾನ ಯೋಜನೆಯಡಿಯಲ್ಲಿ ಕಳಪೆ ಕಾಮಗಾರಿ ಆಗುತ್ತಿದೆ ಎಂಬುದಾಗಿ ಬಿಜೆಪಿ ಅಧ್ಯಕ್ಷರು ಬೊಬ್ಬೆ ಹಾಕುತ್ತಿದ್ದಾರೆ. ರಸ್ತೆಗಳಿಗೆ ಡಾಂಬರು ಹಾಕುತ್ತಿರುವುದು ಅವರ ಶಾಸಕರೇ. ಪರಿಸ್ಥಿತಿ ಹೀಗಿದ್ದರೂ ಆರೋಪ ಮಾಡುವುದನ್ನು ಬಿಡುತ್ತಿಲ್ಲ ಎಂದು ಕೆಲವು ಸದಸ್ಯರು ಏರು ಧ್ವನಿಯಲ್ಲಿ ಪ್ರಶ್ನಿಸಿದಾಗ, ಎಂಜಿನಿಯರ್ ಕೆ.ಎಂ.ಸ್ವಾಮಿ, ಪೌರಾಯುಕ್ತ ನಲವಡಿ ಸದಸ್ಯರ ಆರೋಪ ತಳ್ಳಿ ಹಾಕಿದರಲ್ಲದೆ, ಗುಣಮಟ್ಟದಿಂದ ರಸ್ತೆ ಮಾಡಲಾಗುತ್ತಿದೆ. ಕ್ರಿಯಾಯೋಜನೆಯಲ್ಲಿ ಇರುವಂತೆ ಕಾಮಗಾರಿ ನಡೆಯುತ್ತಿದೆ ಎಂದರು.
ರಸ್ತೆ ಮಾಡಿ ಒಂದು ತಿಂಗಳಾಗಿಲ್ಲ, ಆಗಲೆ ಪೈಪ್‌ಲೈನ್ ಅಳವಡಿಕೆ ಮತ್ತು ದುರಸ್ತಿಗೆ ರಸ್ತೆ ಒಡೆಯಲಾಗಿದೆ, ಮೊದಲೇ ಈ ಕೆಲಸ ಮಾಡಿದ್ದರೆ ಈಗ ರಸ್ತೆ ಒಡೆಯುವ ಅಗತ್ಯವಿರಲಿಲ್ಲ ಎಂದು ಸದಸ್ಯ ಮಹೇಶ್ ಎಂಜಿನಿಯರ್ ಕಾರ್ಯ ವೈಖರಿಗೆ ಬೇಸರ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.