ADVERTISEMENT

ಕಾಡುಗೊಲ್ಲರ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ನೀಡಿ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2013, 9:02 IST
Last Updated 18 ಡಿಸೆಂಬರ್ 2013, 9:02 IST

ಚಿತ್ರದುರ್ಗ: ‘ರಾಜ್ಯದಲ್ಲಿರುವ ಕಾಡುಗೊಲ್ಲ ಸಮುದಾಯದವರಲ್ಲಿ ಶೇ 70 ರಷ್ಟು ಮಂದಿ ಕೂಲಿ ಮಾಡುತ್ತಾ ಬದುಕುತ್ತಿದ್ದು, ಅಂಥಹ ಜನರನ್ನು ಗುರುತಿಸಿ, ಸಮುದಾಯದ ಅಭಿವೃದ್ಧಿಗಾಗಿ ಸರ್ಕಾರ ವಿಶೇಷ ಪ್ಯಾಕೇಜ್ ನೀಡಬೇಕು’ ಎಂದು ಉಪನ್ಯಾಸಕ ಅಜ್ಜಯ್ಯ ಒತ್ತಾಯಿಸಿದರು.

ಬೆಂಗಳೂರಿನ ಡಿ.ದೇವರಾಜ ಅರಸು ಸಂಶೋಧನಾ ಸಂಸ್ಥೆ ವತಿಯಿಂದ ನಗರದ ತರಾಸು ರಂಗಮಂದಿರದಲ್ಲಿ ಏರ್ಪಡಿಸಿರುವ ಕಾಡುಗೊಲ್ಲ ಸಮುದಾಯದ ರಾಜ್ಯಮಟ್ಟದ ವಿಚಾರ  ಸಂಕಿರಣದಲ್ಲಿ ‘ಕಾಡು ಗೊಲ್ಲ ಜನಾಂಗದ ಆರ್ಥಿಕ ವ್ಯವಸ್ಥೆ ಕುರಿತು’ ಅವರು ಮಾತನಾಡಿದರು.

ಚಳ್ಳಕೆರೆ, ಮೊಳಕಾಲ್ಮುರು, ಚಿಂತಾಮಣಿ, ಕೋಲಾರ ಈ ಪ್ರದೇಶಗಳಲ್ಲಿ ಹೆಚ್ಚಾಗಿ ವಾಸಿಸುತ್ತಿರುವ ಕಾಡುಗೊಲ್ಲರನ್ನು ಸರ್ಕಾರ ನಿರ್ಲಕ್ಷಿಸುತ್ತಲೇ ಬರುತ್ತಿದೆ. ಶೇ ೭೦ರಷ್ಟು ಕಾಡುಗೊಲ್ಲರು ಕೃಷಿ ಕೂಲಿ ಮಾಡಿಕೊಂಡು ಬದುಕುತ್ತಿದ್ದಾರೆ. ಬೇಸಗೆ ಮತ್ತು ಅತಿಬೇಸಗೆ ಪ್ರದೇಶಗಳಲ್ಲಿ ಕಾಡುಗೊಲ್ಲರಿಗೆ ವರ್ಷಕ್ಕೆ ಕೇವಲ 3–4 ತಿಂಗಳು ಮಾತ್ರ ಕೂಲಿ ಸಿಗುತ್ತದೆ. ಉಳಿದ ದಿನಗಳಲ್ಲಿ ಈ ಜನಾಂಗದ ಜೀವನವೇ ದುಸ್ತರವಾಗಿದೆ ಎಂದರು.

ಇತ್ತೀಚಿನ ದಿನಗಳಲ್ಲಿ ಕೃಷಿ ಮಾಡಲು ಭೂಮಿಯೂ ಇಲ್ಲ, ಪಶುಪಾಲನೆಯೂ ಇಲ್ಲದಂತಾಗಿದೆ. ಕುರಿ ಸಾಕಾಣಿಕೆಗೂ ಅವಕಾಶವಿಲ್ಲದಂತಾಗಿದೆ. ಗುಮಾಸ್ತರು, ಶಿಕ್ಷಕರು, ಜವಾನರನ್ನು ಹೊರತುಪಡಿಸಿದರೆ ಯಾವುದೇ ಆಳುವ ಹುದ್ದೆಯಲ್ಲಿ ಈ ಸಮುದಾಯದವರ ಪ್ರಾತಿನಿಧ್ಯವೇ ಇಲ್ಲ. ಇಂತಹ ಕೆಳಸ್ತರದಲ್ಲಿರುವ ಕಾಡುಗೊಲ್ಲ ಸಮುದಾಯವದರನ್ನು ಗುರುತಿಸಿ ಸರ್ಕಾರ ವಿಶೇಷ ಪ್ಯಾಕೇಜ್ ನೀಡಬೇಕು ಎಂದು ಆಗ್ರಹಿಸಿದರು.

ಪಶುಗಳಂತೆ ಯಾವುದೇ ಸೌಲಭ್ಯಗಳಿಲ್ಲದೆ ಕಾಡುಗೊಲ್ಲರು ವಾಸಿಸುತ್ತಿದ್ದಾರೆ. ಸ್ನಾನ, ಶುಭ್ರವಾದ ಬಟ್ಟೆ, ಇವರಿಗೆ ಕನಸಾಗಿದೆ. ವಾಸಕ್ಕೆ ಮನೆಯಿಲ್ಲದೇ, ಬಹುತೇಕರು ಗುಡಿಸಲಲ್ಲೇ ವಾಸಿಸುತ್ತಿದ್ದಾರೆ.  ಬಹುರಾಷ್ಟ್ರೀಯ ಕಂಪೆನಿಗಳಿಗೆ ರತ್ನಗಂಬಳಿ ಹಾಸಿ ಸಾವಿರಾರು ಎಕರೆ ಭೂಮಿ ನೀಡುವ ಸರ್ಕಾರಕ್ಕೆ ಕಾಡುಗೊಲ್ಲರಿಗೆ ಉಳುಮೆ ಮಾಡಲು ಭೂಮಿ ನೀಡುವ ಮನಸ್ಥಿತಿ ಏಕಿಲ್ಲ ಎಂದು ಪ್ರಶ್ನಿಸಿದರು. 

ಶಿವಮೊಗ್ಗದ ಸಹ್ಯಾದ್ರಿ ಕಾಲೇಜು ಕನ್ನಡವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಮುತ್ತಯ್ಯ ‘ಕಾಡುಗೊಲ್ಲ ಜನಾಂಗದ ಜಾನಪದ ಸಾಹಿತ್ಯ ಮತ್ತು ಸಂಸ್ಕೃತಿ’ ಎಂಬ ವಿಷಯ ಕುರಿತು ಮಾತನಾಡಿ, ಆದಿವಾಸಿ ಮೂಲದ ಸಮುದಾಯಕ್ಕೆ ಸೇರಿದ ಕಾಡುಗೊಲ್ಲರ ಹಟ್ಟಿಯ ಪ್ರತಿಯೊಂದು ಹಾಡು ಜಾನಪದ ಸಾಹಿತ್ಯದ ಗಣಿಯಿದ್ದಂತೆ. ಕಾಡುಗೊಲ್ಲರ ಸಾಹಿತ್ಯದ ಮೇಲೆ ೨೫ ಮಂದಿ ಪಿಎಚ್‌.ಡಿ ಪದವಿ ಪಡೆದಿದ್ದಾರೆ. ೫೦ ವಿದ್ವಾಂಸರು ಕಾಡುಗೊಲ್ಲ ಜನಾಂಗದ ಸ್ಥಿತಿಗತಿಗಳ ಬಗ್ಗೆ ಅಧ್ಯಯನ ನಡೆಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ಕಾಡುಗೊಲ್ಲರಿಗೆ ಸಾಹಿತ್ಯ ಪರಂಪರೆಯ ಶ್ರೀಮಂತಿಕೆಯಿದೆ. ಇಂಥ ಸಾಹಿತ್ಯ ಪರಂಪರೆ ಬೇರೆ ಜನಾಂಗಕ್ಕಿಲ್ಲ, ಆದರೆ ಕಾಡುಗೊಲ್ಲರ ನಿಜವಾದ ಸಂಶೋಧನೆ ಇನ್ನು ಆರಂಭವೇ ಆಗಿಲ್ಲ ಎಂದರು. ಕಾಡುಗೊಲ್ಲರ ಸಾಹಿತ್ಯ ಶ್ರೀಮಂತವಾಗಿರಬಹುದು. ಆದರೆ ಅವರು ಆರ್ಥಿಕವಾಗಿ, ಸಾಮಾಜಿಕವಾಗಿ ತೀರಾ ಹಿಂದುಳಿದಿದ್ದಾರೆ. ಇಂತಹ ಸಮುದಾಯದ ಅಭಿವೃದ್ಧಿ ಕುರಿತು ಸರ್ಕಾರ ಚಿಂತನೆ ನಡೆಸಬೇಕಾಗಿದೆ ಎಂದು ಸಲಹೆ ನೀಡಿದರು.

ದೇವರಾಜ ಅರಸು ಸಂಶೋಧನಾ ಸಂಸ್ಥೆ ನಿರ್ದೇಶಕಿ ಅನುರಾಧಾ ಪಟೇಲ್, ದಾವಣಗೆರೆ ಸರ್ಕಾರಿ ಪ್ರಥಮದರ್ಜೆ ಕಾಲೇಜು ಸ್ನಾತಕೋತ್ತರ ಕೇಂದ್ರದ ಪ್ರಾಂಶುಪಾಲರಾದ ಡಾ. ಮಲ್ಲಿಕಾರ್ಜುನ ಕಲಮರಹಳ್ಳಿ ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.