ADVERTISEMENT

ಕಾಡುತ್ತಿರುವ ಸಾಂಸ್ಕೃತಿಕ ಬಡತನ: ಶಿವಾಚಾರ್ಯ ಸ್ವಾಮೀಜಿ ವಿಷಾದ

​ಪ್ರಜಾವಾಣಿ ವಾರ್ತೆ
Published 13 ಜನವರಿ 2012, 7:10 IST
Last Updated 13 ಜನವರಿ 2012, 7:10 IST

ಹೊಳಲ್ಕೆರೆ: ನಾವು ಆರ್ಥಿಕವಾಗಿ ಎಷ್ಟೇ ಪ್ರಬಲರಾಗಿದ್ದರೂ, ಸಾಂಸ್ಕೃತಿಕ ಬಡತನ ನಮ್ಮನ್ನು ಕಾಡುತ್ತಿದೆ ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ವಿಷಾದ ವ್ಯಕ್ತಪಡಿಸಿದರು.

ತಾಲ್ಲೂಕಿನ ಮಲ್ಲಾಡಿಹಳ್ಳಿಯಲ್ಲಿ ನಡೆಯುತ್ತಿರುವ ತಿರುಕನೂರಿನಲ್ಲಿ ರಂಗದಾಸೋಹ ನಾಟಕೋತ್ಸವದ ಗುರುವಾರದ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು.

ನಾವು ಸಮಾಜದ ನೈತಿಕ ಮತ್ತು ಸಾಂಸ್ಕೃತಿಕ ನೆಲೆಗಟ್ಟನ್ನು ಭದ್ರವಾಗಿ ಕಾಪಾಡಿಕೊಳ್ಳಬೇಕು. ಕೇವಲ ಹಣ, ಅಧಿಕಾರ, ಅಂತಸ್ತು ಪ್ರಮುಖವಲ್ಲ. ಮಾನವರಾಗಿ ಬದುಕುವುದನ್ನು ಕಲಿಯಬೇಕು. ಸನ್ಮಾರ್ಗದಲ್ಲಿ ಸಾಗುವ ವ್ಯಕ್ತಿಗೆ ಆರಂಭದಲ್ಲಿ ಕಷ್ಟಗಳು ಎದುರಾಗಬಹುದು.
 
ಆದರೆ ಮುಂದೆ ಅವನು ಲೋಕಕ್ಕೇ ಬೆಳೆಕು ನೀಡುವ ವ್ಯಕ್ತಿಯಾಗುತ್ತಾನೆ. ಬುದ್ಧ, ಬಸವ, ಗಾಂಧಿಯಂತಹ ಮಹಾನ್ ವ್ಯಕ್ತಿಗಳ ಜೀವನ, ಸಾಧನೆಗಳನ್ನು ಮಾದರಿಯಾಗಿ ಇಟ್ಟುಕೊಂಡು ಬದುಕಬೇಕು. ದೇಶದಲ್ಲಿ ಹಣದ ಕೊರತೆ ಇಲ್ಲ. ಆದರೆ, ಅದನ್ನು ಸದ್ವಿನಿಯೋಗ ಮಾಡುವ ನಾಯಕರ ಕೊರತೆ ಇದೆ ಎಂದರು.

ವ್ಯಂಗ್ಯ ಚಿತ್ರಕಾರ ಎಚ್.ಬಿ. ಮಂಜುನಾಥ್ ಮಾತನಾಡಿ, ಆಧುನಿಕ ಜಗತ್ತಿನಲ್ಲಿ ಸಮಾಜಸೇವೆ ಎಂಬ ಪದ ಅರ್ಥ ಕಳೆದುಕೊಳ್ಳುತ್ತಿದೆ. ಎಲ್ಲದರಲ್ಲಿಯೂ ಸ್ವಾರ್ಥ ಹುಡುಕುವ ಮನುಷ್ಯನಿಂದ ನಿಸ್ವಾರ್ಥ ಸೇವೆ ನಿರೀಕ್ಷಿಸಲು ಆಗುತ್ತಿಲ್ಲ. ಮಲ್ಲಾಡಿಹಳ್ಳಿ ಕುಗ್ರಾಮವನ್ನು ವಿಶ್ವಭೂಪಟದಲ್ಲಿ ಗುರುತಿಸುವಂತೆ ಮಾಡಿದ ರಾಘವೇಂದ್ರ ಸ್ವಾಮೀಜಿ ನಿಜವಾದ ಸಮಾಜಸೇವೆಗೆ ಹೆಸರಾಗಿದ್ದರು. ದೃಶ್ಯಮಾಧ್ಯಮಗಳ ಹಾವಳಿಯಿಂದ ನಾಟಕ ಕಲೆ ಕಣ್ಮರೆಯಾಗುತ್ತಿದ್ದು, ಸಾಣೇಹಳ್ಳಿ ಮತ್ತು ಮಲ್ಲಾಡಿಹಳ್ಳಿಗಳು ರಂಗಭೂಮಿ ಜೀವಂತವಾಗಿಸುವ ಕಾರ್ಯದಲ್ಲಿ ನಿರತವಾಗಿರುವುದು ಅಭಿನಂದನೀಯ ಎಂದು ಮೆಚ್ಚುಗೆ ಸೂಚಿಸಿದರು.

ಆಡಳಿತಾಧಿಕಾರಿ ರಾಘವೇಂಧ್ರ ಪಾಟೀಲ ಪ್ರಾಸ್ತಾವಿಕ ಮಾತನಾಡಿ, ಯೋಗ, ಆಯುರ್ವೇದ ಶಿಕ್ಷಣದ ಅಡಿಪಾಯದ ಮೇಲೆ ಬೆಳೆದ ಆಶ್ರಮ ಇಂದಿಗೂ ಯಾವುದೇ ಕಪ್ಪುಚುಕ್ಕೆ ಇಲ್ಲದೆ ಮುನ್ನಡೆಯುತ್ತಿದೆ ಎಂದರು.

ಉದ್ಯಮಿ ಕಾಸಲ್ ವಿಠಲ್ ಅಧ್ಯಕ್ಷತೆ ವಹಿಸಿದ್ದರು. ಡಿ.ಇಡಿ ವಿದ್ಯಾರ್ಥಿಗಳು ಡಾ.ಚಂದ್ರಶೇಖರ ಕಂಬಾರರ `ಸಂಗ್ಯಾ ಬಾಳ್ಯಾ~ ನಾಟಕ ಅಭಿನಯಿಸಿದರು.

ಬಿಇಒ ಎಸ್.ಆರ್. ಮಂಜುನಾಥ್, ಕುಸುಮ ಶ್ರೇಷ್ಠಿ, ಲಕ್ಷ್ಮೀಪತಿ, ಹಾಲೇಶ್, ಜಿ.ಎನ್. ಸ್ವಾಮಿ, ಬಸವರಾಜ್ ಇದ್ದರು. ಉಪನ್ಯಾಸಕ ಕುಬೇರಪ್ಪ ಸ್ವಾಗತಿಸಿದರು. ಶಂಕರಮೂರ್ತಿ ಕಾರ್ಯಕ್ರಮ ನಿರೂಪಿಸಿದರು. ಟಿ.ಎಚ್. ಗುಡ್ಡಪ್ಪ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.