ADVERTISEMENT

ಕಾರ್ಮಿಕರಿಗೆ ಪಿಂಚಣಿ ನೀಡಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2013, 8:49 IST
Last Updated 21 ಸೆಪ್ಟೆಂಬರ್ 2013, 8:49 IST

ಚಿತ್ರದುರ್ಗ: ಸಂಘಟಿತ ಹಾಗೂ ಅಸಂಘಟಿತ ಕಾರ್ಮಿಕರಿಗೆ ಪಿಂಚಣಿ ನೀಡಬೇಕು, 45 ದಿನಗಳ ಒಳಗಾಗಿ ಕಾರ್ಮಿಕ ಸಂಘಗಳನ್ನು ಕಡ್ಡಾಯವಾಗಿ ನೋಂದಣಿ ಮಾಡಬೇಕು, ಬೆಲೆ ಏರಿಕೆ ನಿಯಂತ್ರಿಸಿ, ಎಲ್ಲ ಕಟ್ಟಡ ಕಾರ್ಮಿಕರು ಹಾಗೂ ದ್ವಿಚಕ್ರ ವಾಹನಗಳ ಮೆಕಾನಿಕ್ ಗಳಿಗೆ ಬಿಪಿಎಲ್ ಕಾರ್ಡ್ ನೀಡಬೇಕು ಎಂದು ಒತ್ತಾಯಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಚಿತ್ರದುರ್ಗ ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ಕಾರ್ಯಕರ್ತರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿದರು.

ನಂತರ ಮಾತನಾಡಿದ ಸಿಪಿಐ ಪಕ್ಷದ ಶಾಖಾ ಕಾರ್ಯದರ್ಶಿ ಗೌಸ್ ಪೀರ್, ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರಿಗೆ ಪಿಂಚಣಿ ನೀಡಬೇಕು.  ಫೆಬ್ರುವರಿ 1, 2013ರ ಕಲ್ಯಾಣ ಮಂಡಳಿ ತೀರ್ಮಾನದ ಅಧಿಸೂಚನೆಯ ಪರಿಷ್ಕರಿಸಿದ ಕಟ್ಟಡ ಕಾರ್ಮಿಕರ ಎಲ್ಲ ಸೌಲಭ್ಯಗಳನ್ನು ತಕ್ಷಣವೇ ಜಾರಿಗೊಳಿಸಬೇಕು. ಸೌಲಭ್ಯಗಳಿಗಾಗಿ ಸರ್ಕಾರಕ್ಕೆ ಕಾರ್ಮಿಕರು ಸಲ್ಲಿಸಿರುವ ಬಾಕಿ ಇರುವ ಅರ್ಜಿಗಳನ್ನು ಶೀಘ್ರವಾಗಿ ವಿಲೇವಾರಿ ಮಾಡಬೇಕು. ಕಾರ್ಮಿಕರಿಗೆ ನೀಡುವ ಸೌಲಭ್ಯದ ಹಣವನ್ನು ವಿತರಿಸಲು ಅಗತ್ಯ ಸಿಬ್ಬಂದಿ ಮತ್ತು ಸೂಕ್ತವಾದ ಕಚೇರಿಯೊಂದನ್ನು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ವ್ಯವಸ್ಥೆ ಮಾಡಬೇಕೆಂದು ಅವರು ಒತ್ತಾಯಿಸಿದ್ದಾರೆ.

ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ಧನ ಸಹಾಯ ನೀಡುವಂತೆ ಈಗಾಗಲೇ ಸರ್ಕಾರಕ್ಕೆ ಅರ್ಜಿ ಸಲ್ಲಿಸಿ ಎರಡು ತಿಂಗಳಾಗಿದೆ. ಇನ್ನೂ ಫಲಾನುಭವಿಗಳಿಗೆ ಧನಸಹಾಯ ದೊರೆತಿಲ್ಲ. ಕಾರ್ಮಿಕ ಇಲಾಖೆಯಿಂದ ತಕ್ಷಣ ಹಣ ಬಿಡುಗಡೆಯಾಗಬೇಕು ಎಂದು ಗೌಸ್ ಪೀರ್ ಒತ್ತಾಯಿಸಿದ್ದಾರೆ.

ಜಿಲ್ಲಾ ಕಟ್ಟಡ ಕಾರ್ಮಿಕರ ಫೆಡರೇಷನ್ ನ ಪ್ರಭಾರಿ ಅಧ್ಯಕ್ಷ ಹರತ್ ಅಲಿ ಮಾತನಾಡಿ, ‘ಕಾರ್ಮಿಕ ಕಲ್ಯಾಣ ಮಂಡಳಿಗೆ ಪೂರ್ಣಾವಧಿ ಕಾರ್ಯನಿರ್ವಾಹಕ ಅಧಿಕಾರಿ, ಸಿಇಒ ಅವರನ್ನು ನೇಮಿಸಿ, ನಿರಂತರವಾಗಿ ಕಲ್ಯಾಣ ಮಂಡಳಿಗಳ ಸಭೆ ನಡೆಸಲು ಅನುಕೂಲವಾಗುವಂತೆ ಕ್ರಮ ಕೈಗೊಳ್ಳಬೇಕು’ ಎಂದು ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ. ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿರುವ ಜಮೆಯಾಗಿರುವ ಸೆಸ್ ಹಣವನ್ನು ಕಾರ್ಮಿಕರ ಕ್ಷೇಮಾಭಿವೃದ್ಧಿಗಾಗಿಯೇ ಬಳಸಬೇಕು. ಯಾವದೇ ಕಾರಣಕ್ಕೂ ಕಟ್ಟಡ ನಿರ್ಮಾಣ, ಕಲ್ಯಾಣ ಮಂಟಪದಂತಹ ಕಾರ್ಯಕ್ರಮಗಳಿಗೆ ಈ ಹಣವನ್ನು ಬಳಸಬಾರದು ಎಂದು ಅವರು ಆಗ್ರಹಿಸಿದ್ದಾರೆ.

ಕಟ್ಟಡ ಕಾರ್ಮಿಕರ ಪಿಂಚಣಿ ಮೊತ್ತವನ್ನು ಕನಿಷ್ಠ ₨ 2 ಸಾವಿರಕ್ಕೆ ಏರಿಸಬೇಕು. ಪ್ರತಿ ವರ್ಷ ಬೆಲೆ ಏರಿಕೆಗೆ ಅನುಗುಣವಾಗಿ ಶೇ 10ರಷ್ಟು ಪಿಂಚಣಿಯನ್ನು ಹೆಚ್ಚಿಸಬೇಕು.  ಕಾರ್ಮಿಕ ಅವಲಂಬಿತ ಕುಟುಂಬಗಳಿಗೆ ರಾಷ್ಟ್ರೀಯ ಸ್ವಾಸ್ಥ್ಯ ವಿಮಾ ಯೋಜನೆಯಡಿ ಒಳಪಡಿಸಿ, ಸ್ಮಾರ್ಟ್ ಕಾರ್ಡ್ ವಿತರಿಸಬೇಕು ಎಂದು ಸಂಘಟನಾ ಕಾರ್ಯದರ್ಶಿಗಳಾದ ಮಹಮ್ಮದ್ ಸಮೀ, ಮಹಮ್ಮದ್  ಜಬೀವುಲ್ಲಾ, ಸೈಫುಲ್ಲಾ ಒತ್ತಾಯಿಸಿದ್ದಾರೆ.

ಕಟ್ಟಡ ಕಾರ್ಮಿಕರಿಗೆ ಮನೆ ನಿರ್ಮಾಣಕ್ಕಾಗಿ ಈಗಿರುವ ₨ 2 ಲಕ್ಷದ ಬದಲಿಗೆ ₨ 5 ಲಕ್ಷ ನೀಡಬೇಕು. ಅದರಲ್ಲಿ ₨ 1 ಲಕ್ಷ ಸಬ್ಸಿಡಿ ನೀಡಬೇಕು. ದ್ವಿಚಕ್ರ ವಾಹನ ಮೆಕಾನಿಕ್ ಕಾರ್ಮಿಕರನ್ನು ಅಸಂಘಟಿತ ಕಾರ್ಮಿಕರೆಂದು ಪರಿಗಣಿಸಿ, ಕಾರ್ಮಿಕ ಕಲ್ಯಾಣ ಮಂಡಳಿಗ ಸೇರಿಸಿಕೊಳ್ಳುವಂತೆ ದ್ವಿಚಕ್ರ ವಾಹನ ಮೆಕಾನಿಕ್ ಕಾರ್ಮಿಕ ಮುಖಂಡರು ಆಗ್ರಹಿಸಿದ್ದಾರೆ.

ಪ್ರತಿಟನೆಯಲ್ಲಿ ಜಿಲ್ಲಾಧ್ಯಕ್ಷ ಗೌಸಪೀರ್, ಉಪಾಧ್ಯಕ್ಷ ಮಲಿಯಪ್ಪ, ಈ.ನಾಗರಾಜ್, ಟಿ.ತಿಪ್ಪೇಸ್ವಾಮಿ, ಕೆ.ವಿ.ವೀರಭದ್ರಪ್ಪ, ಟಿ.ನಿಂಗಣ್ಣ, ವಿಜಯಮ್ಮ, ಎಸ್.ರಾಜಣ್ಣ, ಕೆ.ಬಿ.ಜಯಣ್ಣ, ಶಿವಣ್ಣ, ವೆಂಕಟೇಶ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.