ಹೊಳಲ್ಕೆರೆ: ಬರ ಪರಿಸ್ಥಿತಿ ನಿಭಾಯಿಸಲು ಅಧಿಕಾರಿಗಳು ಸರ್ವಸನ್ನದ್ಧವಾಗಬೇಕಿದ್ದು, ಕುಡಿಯುವ ನೀರು, ಮೇವು ಪೂರೈಕೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಜಿ.ಪಂ. ಅಧ್ಯಕ್ಷ ರವಿಕುಮಾರ್ ಎಂಜಿನಿಯರ್‌ಗಳಿಗೆ ತಾಕೀತು ಮಾಡಿದರು.
ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಸೋಮವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಅಗತ್ಯ ಇರುವ ಕಡೆ ತಕ್ಷಣವೇ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಕೊಳವೆಬಾವಿ ಇರುವ ಕಡೆ ಮೋಟಾರ್ ಅಳವಡಿಸಿ, ನೀರಿನ ಸಂಪರ್ಕ ಕಲ್ಪಿಸಬೇಕು. ನೀರು ಇರದ ಕಡೆ ಹೊಸದಾಗಿ ಕೊಳವೆಬಾವಿಗಳನ್ನು ಕೊರೆಸಿ, ನೀರು ವಿತರಿಸಬೇಕು.
ಜಿಲ್ಲೆಯಲ್ಲಿ ಕುಡಿಯುವ ನೀರಿಗಾಗಿ ರೂ 50 ಕೋಟಿ ಖರ್ಚುಮಾಡಲಾಗುತ್ತಿದೆ. ತಾಲ್ಲೂಕಿನಲ್ಲಿ ಪೈಪ್‌ಲೈನ್, ಓವರ್‌ಹೆಡ್ ಟ್ಯಾಂಕ್ ಕಾಮಗಾರಿಗಳು ವಿಳಂಬವಾಗುತ್ತಿವೆ ಎಂಬ ದೂರು ಕೇಳಿಬರುತ್ತಿದ್ದು, ತುರ್ತು ಕಾರ್ಯಗಳನ್ನು ಕೈಗೊಳ್ಳದಿದ್ದರೆ ನಿಮ್ಮನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಜಿ.ಪಂ. ಎಂಜಿನಿಯರ್ ಬಸವರಾಜಪ್ಪ ಅವರನ್ನು ತರಾಟೆಗೆ ತೆಗೆದುಕೊಂಡರು.
ತಾಲ್ಲೂಕಿನ ಟಿ. ನುಲೇನೂರು ಗ್ರಾಮದಲ್ಲಿ ಟ್ಯಾಂಕರ್ ಮೂಲಕ ನೀರು ವಿತರಿಸಲಾಗುತ್ತಿದೆ. ಜನ ನೀರಿಗೆ ಹಾಹಾಕಾರ ಪಡುತ್ತಿದ್ದಾರೆ. ಅಧಿಕಾರಿಗಳು ಹಳ್ಳಿಗಳಿಗೆ ಹೋಗಿ ನೋಡುತ್ತಿಲ್ಲ ಎಂದು ಸದಸ್ಯ ಪಿ.ಆರ್. ಶಿವಕುಮಾರ್ ದೂರಿದರು.
ಗಂಡಸರಿಗೂ ಆಪರೇಷನ್ ಮಾಡಿ: ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಶ್ರೀರಾಮ್ `ತಾಲ್ಲೂಕಿನಲ್ಲಿ ಈ ವರ್ಷ 324 ಮಹಿಳೆಯರಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಲಾಗಿದೆ~ ಎಂದು ಅಂಕಿ-ಅಂಶ ನೀಡಿದಾಗ ಸದಸ್ಯೆ ಪಾರ್ವತಮ್ಮ `ಬರೀ ಹೆಂಗಸರಿಗೇ ಸಂತಾನಹರಣ ಶಶ್ತ್ರಚಿಕಿತ್ಸೆ ಮಾಡಲಾಗುತ್ತಿದೆ. ಗಂಡಸರಿಗೂ ಶಸ್ತ್ರಚಿಕಿತ್ಸೆ ಮಾಡಿ~ ಎನ್ನುತ್ತಿದ್ದಂತೆ ಸಭೆ ನಗೆಗಡಲಲ್ಲಿ ತೇಲಿತು.
ಇದಕ್ಕೆ ಪ್ರತಿಕ್ರಿಯಿಸಿದ ಆರೋಗ್ಯಾಧಿಕಾರಿ `ಕಳೆದ ನಾಲ್ಕು ವರ್ಷಗಳ ಹಿಂದೆ 169 ಪುರುಷರಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಆಗ ಇಡೀ ದೇಶದಲ್ಲೇ ಈ ತಾಲ್ಲೂಕು ಪ್ರಥಮಸ್ಥಾನ ಪಡೆದಿತ್ತು. ಈ ವರ್ಷವೂ 32 ಪುರುಷರಿಗೆ ಆಪರೇಷನ್ ಮಾಡಲಾಗಿದೆ ಎಂದರು.
ಪಿಡಿಒಗಳು ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರಬೇಕು. ಕುಡಿಯುವ ನೀರಿನ ಬಗ್ಗೆ ಕಾಳಜಿ ವಹಿಸಬೇಕು. ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರ ಕೊಡೋರು ನಾವು. ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿಯದೆ ಅರ್ಹರನ್ನು ಗುರುತಿಸಿ ಮನೆಗಳನ್ನು ವಿತರಿಸಬೇಕು. ಮನೆಪಟ್ಟಿಯನ್ನು ಮುಂದಿನ ಜಿ.ಪಂ. ಸಾಮಾನ್ಯಸಭೆ ನಡೆಯುವುದರ ಒಳಗೆ ನನಗೆ ತಂದು ತೋರಿಸಬೇಕು. ಎಲ್ಲಾ 29 ಪಂಚಾಯ್ತಿಗಳ ಲೆಕ್ಕಪರಿಶೋಧನೆ ನಡೆಸಿ ವರದಿ ನೀಡಬೇಕು ಎಂದು ಇಒ ಸಲೀಂ ಪಾಷಾ ಅವರಿಗೆ ಅಧ್ಯಕ್ಷ ರವಿಕುಮಾರ್ ಗಡುವು ನೀಡಿದರು.
ನೀರಗಂಟಿಗಳಿಗೆ ಸರಿಯಾಗಿ ಸಂಬಳ ಕೊಡುತ್ತಿಲ್ಲ. ಹಗಲು -ರಾತ್ರಿ ಕೆಲಸ ಮಾಡುವವರಿಗೆ ಸಂಬಳ ಸರಿಯಾಗಿ ಕೊಡದಿದ್ದರೆ ಅವರು ಜೀವನ ಮಾಡುವುದು ಹೇಗೆ ಎಂದು ಜಿ.ಪಂ. ಸ್ಥಾಯಿಸಮಿತಿ ಅಧ್ಯಕ್ಷ ಎಸ್.ಜೆ. ರಂಗಸ್ವಾಮಿ ಪ್ರಶ್ನಿಸಿದರು. ಅಧಿಕಾರಿಗಳು ಸದಸ್ಯರಿಗೆ ತಪ್ಪು ಮಾಹಿತಿ ನೀಡಬಾರದು. ಯಾವುದೇ ಕ್ಷಣದಲ್ಲಾದರೂ, ಕಾಮಗಾರಿಗಳ ಬಗ್ಗೆ ಪರಿಶೀಲನೆ ನಡೆಸುತ್ತೇವೆ ಎಂದು ಜಿ.ಪಂ. ಉಪಾಧ್ಯಕ್ಷೆ ಭಾರತೀ ಕಲ್ಲೇಶ್ ಎಚ್ಚರಿಕೆ ನೀಡಿದರು.
ತಾ.ಪಂ. ಅಧ್ಯಕ್ಷೆ ಲಕ್ಷೀ, ಉಪಾಧ್ಯಕ್ಷೆ ಪಾರ್ವತಮ್ಮ, ಸ್ಥಾಯಿಸಮಿತಿ ಅಧ್ಯಕ್ಷ ಮೋಹನ್ ನಾಗರಾಜ್, ತಾಲ್ಲೂಕುಮಟ್ಟದ ಅಧಿಕಾರಿಗಳು, ಪಿಡಿಒಗಳು ಸಭೆಯಲ್ಲಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.