ADVERTISEMENT

ಕುಮಾರಸ್ವಾಮಿಗೆ `ನೀನ್ಯಾರಪ್ಪಾ' ಎಂದಿದ್ದ ಸಿರಿಯಜ್ಜಿ...!

ಪ್ರಜಾವಾಣಿ ವಾರ್ತೆ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2013, 8:39 IST
Last Updated 1 ಏಪ್ರಿಲ್ 2013, 8:39 IST

ಹಿರಿಯೂರು: ಶಾಲಾ-ಕಾಲೇಜಿಗೆ ಹೋಗದೇ ವಿದ್ಯೆ- ಬುದ್ಧಿ ಸಂಪಾದಿಸಿದವರಲ್ಲಿ ಕುಟಿಲತೆ, ನಟನೆಯ ಲವಲೇಶವೂ ಇಲ್ಲದೇ ಸಹಜತೆ ತುಂಬಿರುತ್ತದೆ ಎನ್ನುವುದಕ್ಕೆ ಭಾನುವಾರ ನಗರದ ನೆಹರು ಮೈದಾನದಲ್ಲಿ ಹಮ್ಮಿಕೊಂಡಿದ್ದ ತಾಲ್ಲೂಕುಮಟ್ಟದ ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಜಾನಪದ ವಿದ್ವಾಂಸ ಕೃಷ್ಣಮೂರ್ತಿ ಹನೂರು ಒಂದು ಪ್ರಸಂಗ ಬಿಚ್ಚಿಟ್ಟರು.

ಜಾನಪದ ಕಂಪ್ಯೂಟರ್ ಎಂದು ಕರೆಸಿಕೊಂಡಿರುವ ಸಿರಿಯಜ್ಜಿಗೆ ಆರೇಳು ಮುಖ್ಯಮಂತ್ರಿ ಸನ್ಮಾನಿಸಿದ್ದರೂ ಅದು ತನ್ನ ಪ್ರತಿಭೆಗೆ ಮಾಡುತ್ತಿರುವ ಸನ್ಮಾನ ಎಂದು ಆ ಅಜ್ಜಿಗೆ ತಿಳಿದಿರಲಿಲ್ಲ. ಒಮ್ಮೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಸನ್ಮಾನಿಸಲು ಹೋದಾಗ, `ಯಾರಪ್ಪಾನೀನು' ಎಂದು ಪ್ರಶ್ನೆ ಮಾಡಿದ್ದರು. ಅಜ್ಜಿಯ ವಯಸ್ಸು ನೋಡಿದ ಕುಮಾರಸ್ವಾಮಿ ಅವರು, `ನಾನಜ್ಜಿ ನಿನ್ನ ಮಗ' ಎಂದರು.

ತಕ್ಷಣ ಅಜ್ಜಿ `ನಿನ್ನ ಹೆಂಡ್ತಿ, ಮಕ್ಳು ಎಲ್ಲಾ ಚೆನ್ನಾಗಿದ್ದಾರಾ' ಎಂದು ಪ್ರಶ್ನೆ ಮಾಡಿದಾಗ, `ಹೌದೆಂದು' ಉತ್ತರಿಸಿದ ಮುಖ್ಯಮಂತ್ರಿ ನಂತರ ಸನ್ಮಾನಿಸಿದ್ದರು ಎಂದು ಅವರು ತಿಳಿಸಿದರು.

ಆರಂಭದಲ್ಲಿ ಬೆಳಗೆರೆ ಕೃಷ್ಣಶಾಸ್ತ್ರಿಗಳ ಜತೆ ಅಜ್ಜಿಯ ಗುಡಿಸಲಿಗೆ ಹೋಗಿದ್ದಾಗ, ಅಜ್ಜಿಯನ್ನು ಮಾತನಾಡಿಸಿ, `ಅಜ್ಜಿ ಒಂದ್ ಹಾಡ್ ಹೇಳು' ಎಂದಿದ್ದಕ್ಕೆ, `ನನಗೆಲ್ಲಿ ಬರುತ್ತೆ ಹಾಡು' ಎಂದು ನಮ್ಮನ್ನೇ ಪ್ರಶ್ನಿಸಿ, ಮತ್ತೆ ಒತ್ತಾಯ ಮಾಡಿ, ಒಂದೆರಡು ಪದ ಹಾಡು ಅಂದಿದ್ದಕ್ಕೆ `ಸಿರಿಯಪ್ಪನ ಹಾಡು' ಹಾಡಲು ಆರಂಭಿಸಿತು.

ಗಂಟೆಯಾದರೂ ಮುಗಿಯದಿದ್ದಾಗ `ಅಜ್ಜಿ ಇನ್ನೂ ಎಷ್ಟು ಹೊತ್ತು ಬೇಕು' ಎಂದು ಪ್ರಶ್ನೆ ಮಾಡಿದ್ದಕ್ಕೆ `ಏಳೆಂಟು ಗಂಟೆಯಾದರೂ ಬೇಕು' ಎಂದು ದಂಗು ಬಡಿಸಿತ್ತು. ಮತ್ತೊಂದು ಕತೆಯನ್ನು ಹೇಳಲು ಎಂಟು ದಿನ ಬೇಕು ಎಂದಿತು. ಅಜ್ಜಿಯಲ್ಲಿ ಅಂತಹ ಅಸಾಧಾರಣ ಪ್ರತಿಭೆ ಇದ್ದರೂ ಅಹಂಕಾರ ಇರಲಿಲ್ಲ. ಇದನ್ನು ಶಾಲಾ-ಕಾಲೇಜಿಗೆ ಹೋಗಿ ಕಲಿತವರು ಅರ್ಥ ಮಾಡಿಕೊಳ್ಳಬೇಕು ಎಂದು ಹನೂರು ಹೇಳಿದರು.

ಆಂಧ್ರಪ್ರದೇಶದ ಅಮರಾಪುರ ಸಮೀಪದ ಕ್ಯಾತಗಾನಹಳ್ಳಿಯ ಗಿರಿಯಯ್ಯ ಅಸಾಧಾರಣವಾದ ಕತೆಗಾರ. ಅದೇ ರೀತಿ ದಾನಮ್ಮ, ಹನುಮಕ್ಕ ಅವರೆಲ್ಲರೂ ನನಗೆ ದೇಸಿ ಗುರುಗಳು. ನನ್ನಲ್ಲಿರುವ ಓದು ಕಲಿತಿದ್ದೇನೆ ಎಂಬ ಅಹಂಕಾರವನ್ನು ಇಲ್ಲವಾಗಿಸಿದವರು ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.