ADVERTISEMENT

ಕೃಪೆ ತೋರದ ಮುಂಗಾರು; ಬಾಡಿದ ಹೆಸರು

​ಪ್ರಜಾವಾಣಿ ವಾರ್ತೆ
Published 7 ಜೂನ್ 2012, 6:25 IST
Last Updated 7 ಜೂನ್ 2012, 6:25 IST
ಕೃಪೆ ತೋರದ ಮುಂಗಾರು; ಬಾಡಿದ ಹೆಸರು
ಕೃಪೆ ತೋರದ ಮುಂಗಾರು; ಬಾಡಿದ ಹೆಸರು   

ಹೊಸದುರ್ಗ: ಮುಂಗಾರು ಬಿತ್ತನೆ ನಡೆಸಿ ಅಲ್ಪಾವಧಿಯಲ್ಲಿ ಹಣ ಮಾಡುವ ಉದ್ದೇಶದೊಂದಿಗೆ ಚುರುಕಾಗಿ ಗುರಿ ಮೀರಿ ಹೆಸರು ಬಿತ್ತನೆ ನಡೆಸಿದ ರೈತರು ಮುಂಗಾರು ಮಳೆಯಿಲ್ಲದೆ ಬೆಳೆ ನಷ್ಟ ಅನುಭವಿಸುವಂತಹ ಸ್ಥಿತಿಗೆ ಬಂದಿದ್ದಾರೆ.

ತಾಲ್ಲೂಕಿನ ಕೆಲವು ಭಾಗಗಳಲ್ಲಿ ಕಳೆದ ಎರಡು ದಿನಗಳಿಂದ ಮೋಡ ಕವಿದ ವಾತಾವರಣವಿದ್ದರೂ ವರುಣನ ಕೃಪೆ ಮಾತ್ರದಕ್ಕಿಲ್ಲ. ಬುಧವಾರ ಪಟ್ಟಣವೂ ಸೇರಿದಂತೆ ತಾಲ್ಲೂಕಿನ ಕೆಲವೊಂದು ಭಾಗಗಳಲ್ಲಿ ತುಂತುರು ಮಳೆ ಬಿದ್ದಿದ್ದು ರೈತರು ಬೆಳೆ ಕೈಗೆ ಸಿಗುವುದೇನೋ ಎನ್ನುವ ಆಸೆಯಿಂದ ಮುಗಿಲು ನೋಡುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ.

ಏಪ್ರಿಲ್ ಮಾಸಾಂತ್ಯದಲ್ಲಿ ಉತ್ತಮ ಮಳೆ ಬಿದ್ದ ಕಾರಣ ಜಮೀನು ಹಸನು ಮಾಡಿಕೊಂಡ ರೈತರು ಅಧಿಕವಾಗಿ ಹೆಸರು ಬಿತ್ತನೆ ಮಾಡಿದರು. ಬಿತ್ತನೆಯಾದ ನಂತರ ಮತ್ತೆ ಮಳೆ ಕಾಣಿಸಿಕೊಂಡು ಹೆಸರು ಉತ್ತಮವಾಗಿ ಬೆಳೆದು ನಿಂತಿದ್ದನ್ನು ಕಂಡ ರೈತರು ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದರು.

ಹೆಸರು ಹೂಕಟ್ಟುವ ಕಾಲಕ್ಕೆ ಅಗತ್ಯವಾದ ಮಳೆ ಬರಲೇ ಇಲ್ಲ. ಮಳೆಯಿಲ್ಲದೆ ಬಿಸಿಲ ಧಗೆಯಿಂದ ಬೆಂದ ಬೆಳೆ ಬಾಡುವ ಸ್ಥಿತಿಗೆ ಬಂದಾಗ ರೈತರು ಕಂಗಾಲಾದರು. ಕಾಲಾನು ಕ್ರಮಕ್ಕೆ ಏನು ನಡೆಯ ಬೇಕೋ ಅದು ನಡೆಯುವಂತೆ ಬಾಡಿದ ಹೆಸರು ಹೂವಾಗಿ ಚೊಟ್ಟಾಗಿ ನಿಂತರೂ ಮಳೆ ಮತ್ತೆ ಬರಲೇ ಇಲ್ಲ. ಮಳೆಯಿಲ್ಲದೆ ಕೆಲವು ಭಾಗಗಳಲ್ಲಿ ಹೆಸರು ಚೊಟ್ಟಿನಲ್ಲಿ ಕರಿ ಹೇನುಗಳು ಕಾಣಿಸಿಕೊಂಡು ಬಹುತೇಕ ಬೆಳೆ ವಿಫಲವಾಗುವ ಸ್ಥಿತಿಗೆ ಬಂದು ತಲುಪಿದೆ.

ಕೃಷಿ ಇಲಾಖೆ ವರದಿ ಪ್ರಕಾರ ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ 4,000 ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬಿತ್ತನೆಯ ಗುರಿ ಹೊಂದಿದ್ದರೆ  ರೈತರು 7,000 ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಹೆಸರು ಬಿತ್ತನೆ ನಡೆಸಿದ್ದಾರೆ, ಬಿತ್ತನೆಯ ಸಂದರ್ಭದಲ್ಲಿ ಕಾಣಿಸಿಕೊಂಡ ವರುಣ ಮತ್ತೆ ಬಾರದ ಕಾರಣ ಭೂಮಿಗೆ ಹಾಕಿದ ಲಕ್ಷಾಂತರ ರೂಪಾಯಿ ಬಂಡವಾಳ ನೀರಿನಲ್ಲಿ ಹೋಮ ಮಾಡಿದಂತಾಗಿದೆ ಎಂದು ರೈತ ಬಸವರಾಜ್ ನೊಂದು ಕೊಳ್ಳುತ್ತಾರೆ.

ತಾಲ್ಲೂಕಿನಲ್ಲಿರುವ ಒಟ್ಟು 60,500 ಹೆಕ್ಟೇರ್ ಬಿತ್ತನೆ ಪ್ರದೇಶದಲ್ಲಿ ಸುಮಾರು 8,900 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಪ್ರಸ್ತುತ ಎಳ್ಳು 860 ಹೆಕ್ಟೇರ್, ಶೇಂಗಾ 292 ಹೆಕ್ಟೇರ್, ತೊಗರಿ 120 ಹೆಕ್ಟೇರ್, ಹತ್ತಿ 298 ಹೆಕ್ಟೇರ್, ಮುಂಗಾರು ಜೋಳ 300 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಅಲ್ಪಾವಧಿಯಲ್ಲಿ ಫಸಲು ನೀಡುವ ಹೆಸರು, ಎಳ್ಳು ಇತ್ಯಾದಿ ಮುಂಗಾರು ಬೆಳೆಗಳನ್ನು ಬಿತ್ತನೆ ಮಾಡಿ ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದ ತಾಲ್ಲೂಕಿನ ರೈತರಿಗೆ ಮುಂಗಾರು ಮಳೆ ಕಾಲಕ್ಕೆ ಸರಿಯಾಗಿ ಬಾರದೆ ಕಂಗಾಲಾಗ್ದ್ದಿದಾರೆ, ತಡವಾಗಿಯಾದರೂ ರಾಜ್ಯವನ್ನು ಪ್ರವೇಶಿಸಿರುವ ಮುಂಗಾರು ಕೈಹಿಡಿಯುವುದೇನೋ ಎಂದು ಎನ್ನುವ ಆಶಾಭಾವನೆ ರೈತರದ್ದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.