ADVERTISEMENT

‘ಕೇಂದ್ರ ಸರ್ಕಾರದ ವೈಫಲ್ಯಕ್ಕೆ ಕನ್ನಡಿ ಹಿಡಿಯಲಿರುವ ರಾಹುಲ್’

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2018, 10:49 IST
Last Updated 3 ಏಪ್ರಿಲ್ 2018, 10:49 IST

ಹೊಳಲ್ಕೆರೆ: ಏ.4ರಂದು ಪಟ್ಟಣದಲ್ಲಿ ನಡೆಯುವ ಕಾಂಗ್ರೆಸ್ ಜನಾಶೀರ್ವಾದ ಯಾತ್ರೆಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಭಾಗವಹಿಸಲಿದ್ದು, ಕೇಂದ್ರ ಸರ್ಕಾರದ ವೈಫಲ್ಯಗಳನ್ನು ಜನತೆಯ ಮುಂದೆ ಬಿಚ್ಚಿಡಲಿದ್ದಾರೆ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಹೇಳಿದರು.ಪಟ್ಟಣದ ಕೊಟ್ರೆ ನಂಜಪ್ಪ ಪಿಯು ಕಾಲೇಜು ಮೈದಾನದಲ್ಲಿ ಸಮಾವೇಶದ ಸಿದ್ಧತೆಗಳನ್ನು ಸೋಮವಾರ ಪರಿಶೀಲಿಸಿ ಅವರು ಮಾತನಾಡಿದರು.

ರಾಹುಲ್ ಗಾಂಧಿ ಏ.4ರಂದು ಬೆಳಿಗ್ಗೆ 11ಕ್ಕೆ ಪಟ್ಟಣಕ್ಕೆ ಆಗಮಿಸಲಿದ್ದು, ಸಮಾವೇಶದಲ್ಲಿ ಮಾತನಾಡುವರು. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅನೇಕ ಜನಪರ ಕಾರ್ಯಗಳನ್ನು ಮಾಡಿದ್ದು, ಅವುಗಳನ್ನು ಜನರ ಮುಂದಿಡಲಿದ್ದಾರೆ. ಜವಾಹರಲಾಲ್ ನೆಹರೂ, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ ರಾಜ್ಯಕ್ಕೆ ನೀಡಿದ ಕೊಡುಗೆಗಳನ್ನು ತಿಳಿಸುವರು. ರಾಜ್ಯದ ಹಾಗೂ ರಾಷ್ಟ್ರದ ನಾಯಕರು ಸಮಾವೇಶದಲ್ಲಿ ಪಾಲ್ಗೊಳ್ಳುವರು ಎಂದರು.

‘ರಾಹುಲ್ ಗಾಂಧಿ ಮೊದಲ ಬಾರಿಗೆ ಹೊಳಲ್ಕೆರೆಗೆ ಬರುತ್ತಿದ್ದಾರೆ. ನಾನು ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದು, ನನ್ನ ಕ್ಷೇತ್ರಕ್ಕೆ ಬರುವಂತೆ ಆಹ್ವಾನ ನೀಡಿದ್ದೆ. ನನ್ನ ಮನವಿಗೆ ಸ್ಪಂದಿಸಿ ನಮ್ಮ ತಾಲ್ಲೂಕಿನಲ್ಲಿ ಕಾರ್ಯಕ್ರಮ ಆಯೋಜಿಸಲು ನಾಯಕರು ಒಪ್ಪಿಗೆ ನೀಡಿದ್ದಾರೆ. ಮುಂದೆಯೂ ರಾಹುಲ್ ಗಾಂಧಿ ಚುನಾವಣಾ ಪ್ರಚಾರಕ್ಕೆ ನಮ್ಮ ಜಿಲ್ಲೆಗೆ ಬರಲಿದ್ದು, ಆಗ ಜಿಲ್ಲೆಯ ಬೇರೆ ಕಡೆಗಳಲ್ಲಿ ಕಾರ್ಯಕ್ರಮ ಯೋಜಿಸಲಾಗುವುದು. ಅಮಿತ್ ಶಾ ಭೇಟಿಗೆ ಪರ್ಯಾಯವಾಗಿ ನಾವು ರಾಹುಲ್ ಗಾಂಧಿ ಅವರನ್ನು ಕರೆಸಿಲ್ಲ. ಕ್ಷೇತ್ರದ ಜನರ ಅಪೇಕ್ಷೆಯಂತೆ ಸಮಾವೇಶ ಆಯೋಜಿಸಿದ್ದೇವೆ’ ಎಂದು ಆಂಜನೇಯ ಹೇಳಿದರು.

ADVERTISEMENT

ರಾಜ್ಯದಲ್ಲಿನ ಕಾಂಗ್ರೆಸ್ ಚುನಾವಣಾ ಸಹ ಉಸ್ತುವಾರಿ ಪ್ರಭಾರಿ ಮಧು ಯಾಸ್ಕಿ ಗೌಡ, ಲೋಕೇಶ ನಾಯ್ಕ, ಹಾಲಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.