ADVERTISEMENT

ಕೈಸೇರದ ರಾಗಿ ಮಾರಾಟ ಹಣ: ರೈತರ ಸಂಕಷ್ಟ

ಎರಡು ತಿಂಗಳಾದರೂ ಗಮನ ಹರಿಸದ ಖರೀದಿ ಕೇಂದ್ರದ ಅಧಿಕಾರಿಗಳು: ಆರೋಪ

​ಪ್ರಜಾವಾಣಿ ವಾರ್ತೆ
Published 28 ಮೇ 2018, 10:40 IST
Last Updated 28 ಮೇ 2018, 10:40 IST
ಹೊಸದುರ್ಗ ತಾಲ್ಲೂಕಿನ ಗ್ರಾಮವೊಂದರ ಹೊಲದಲ್ಲಿ ರಾಗಿ ಬೆಳೆದಿರುವುದು
ಹೊಸದುರ್ಗ ತಾಲ್ಲೂಕಿನ ಗ್ರಾಮವೊಂದರ ಹೊಲದಲ್ಲಿ ರಾಗಿ ಬೆಳೆದಿರುವುದು   

ಹೊಸದುರ್ಗ: ಇಲ್ಲಿನ ಕೃಷಿ ಮಾರುಕಟ್ಟೆ ಆವರಣದ ರಾಗಿ ಖರೀದಿ ಕೇಂದ್ರದಲ್ಲಿ ಬೆಂಬಲ ಬೆಲೆಗೆ ಕಳೆದ ಮಾರ್ಚ್‌ನಲ್ಲಿ ರೈತರು ಮಾರಾಟ ಮಾಡಿದ್ದ ರಾಗಿಯ ಬಾಕಿ ಹಣ ಸಿಗದೆ ಸಂಕಷ್ಟ ಎದುರಿಸುವಂತಾಗಿದೆ ಎಂಬುದು ರೈತರ ಆರೋಪ.

ಬೆಂಬಲ ಬೆಲೆ ಹಾಗೂ ಸಹಾಯಧನ ಸೇರಿ ಪ್ರತಿ ಕ್ವಿಂಟಲ್‌ ರಾಗಿಯನ್ನು ₹ 2,300ಕ್ಕೆ ಖರೀದಿಸಲಾಗಿತ್ತು. ರಾಗಿ ಮಾರಾಟ ಮಾಡಿದ ರೈತರ ಬ್ಯಾಂಕ್‌ ಖಾತೆಗೆ ತಿಂಗಳ ಒಳಗೆ ಹಣ ಪಾವತಿಸಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ ಇನ್ನೂ ಹಣ ಪಾವತಿಯಾಗಿಲ್ಲ.

‘ರೈತರ ಬ್ಯಾಂಕ್‌ ಖಾತೆಗೆ ಹಣವನ್ನು ಆರ್‌ಟಿಜಿಎಸ್‌ ಮಾಡಲು ಪಹಣಿ, ಆಧಾರ್‌ ಕಾರ್ಡ್‌, ಬ್ಯಾಂಕ್‌ ಪಾಸ್‌ಬುಕ್‌, ಬೆಳೆ ದೃಢೀಕರಣ ಪತ್ರ ಪಡೆದಿದ್ದರು. ಗುಣಮಟ್ಟದ ರಾಗಿಯನ್ನೆಲ್ಲಾ ಖರೀದಿ ಕೇಂದ್ರದಲ್ಲಿ ಮಾರಾಟ ಮಾಡಿದ್ದೇವೆ. ಆದರೆ ನಮ್ಮಿಂದ ರಾಗಿ ಖರೀದಿ ಮಾಡಿ ಎರಡು ತಿಂಗಳಾದರೂ ಖಾತೆಗೆ ಹಣ ಪಾವತಿಸಿಲ್ಲ’ ಎಂದು ರೈತ ಬಾಗೂರು ವೆಂಕಟೇಶ್‌ ದೂರುತ್ತಾರೆ.

ADVERTISEMENT

‘ ಈ ಬಗ್ಗೆ ಮಾಹಿತಿ ಕೇಳಲು ನಿತ್ಯವೂ ರಾಗಿ ಖರೀದಿ ಕೇಂದ್ರದ ಬಳಿ ಬರುತ್ತಿದ್ದೇವೆ. ಆದರೆ ಖರೀದಿ ಕೇಂದ್ರದ ಬಾಗಿಲು ಹಾಕಿದ್ದು ಮಾಹಿತಿ ತಿಳಿಯಲು ಖರೀದಿ ಕೇಂದ್ರದ ವ್ಯವಸ್ಥಾಪಕರು ಸಿಗುತ್ತಿಲ್ಲ. ಕೃಷಿ ಕೆಲಸ ಬಿಟ್ಟು ರಾಗಿ ಮಾರಾಟ ಮಾಡಿದ ಹಣದ ಬಗೆಗಿನ ಮಾಹಿತಿಗೆ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ. ರೈತರ ಹಿತ ರಕ್ಷಣೆ ಬಗ್ಗೆ ಯಾರೂ ಗಮನ ಹರಿಸುತ್ತಿಲ್ಲ’ ಎಂದು ರೈತ ಹನುಮಂತಪ್ಪ ಅಳಲು ತೋಡಿಕೊಂಡರು.

‘ಒಂದು ತಿಂಗಳಿನಿಂದ ಮುಂಗಾರು ಮಳೆ ಬರುತ್ತಿದೆ. ಹಣ ಇಲ್ಲದೆ ಬಿತ್ತನೆಯ ಬೀಜ, ಗೊಬ್ಬರ ಹಾಗೂ ಕೃಷಿ ಚಟುವಟಿಕೆಯ ಸಾಧನ ಸಲಕರಣೆ ಖರೀದಿಸಲು ಹಣಕ್ಕಾಗಿ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಸಂಬಂಧಪಟ್ಟ ಇಲಾಖೆಯವರು ರಾಗಿ ಖರೀದಿ ಹಣವನ್ನು ಶೀಘ್ರ ಪಾವತಿಸಬೇಕು’ ಎಂಬುದು ಈ ಭಾಗದ ರೈತರ ಮನವಿ.

‘7,034 ಕ್ವಿಂಟಲ್‌ ರಾಗಿ ಖರೀದಿ’

‘ಜಿಲ್ಲೆಯಲ್ಲಿ ಮೂರು ಕಡೆ ರಾಗಿ ಖರೀದಿ ಕೇಂದ್ರವಿದ್ದು, ಹೊಸದುರ್ಗದಲ್ಲಿ 5,482 ಕ್ವಿಂಟಲ್‌, ಚಿಕ್ಕಜಾಜೂರಿನಲ್ಲಿ 1,161 ಕ್ವಿಂಟಲ್‌ ಹಾಗೂ ಚಿತ್ರದುರ್ಗದಲ್ಲಿ 390 ಕ್ವಿಂಟಲ್‌ ಸೇರಿದಂತೆ ಜಿಲ್ಲೆಯ ಒಟ್ಟು 299 ರೈತರಿಂದ ಒಟ್ಟು 7,034 ಕ್ವಿಂಟಲ್‌ ರಾಗಿ ಖರೀದಿಸಲಾಗಿದೆ. ಪ್ರತಿ ಕ್ವಿಂಟಲ್‌ ರಾಗಿಗೆ ₹2,300 ಮತ್ತು 50ಕೆ.ಜಿ ಖಾಲಿ ಚೀಲಕ್ಕೆ ₹12 ಹಾಗೂ 100ಕೆ.ಜಿ ಖಾಲಿ ಚೀಲಕ್ಕೆ ₹ 24 ಸೇರಿಸಿ ಒಟ್ಟು ಹಣವನ್ನು ರೈತರ ಖಾತೆಗೆ ಜಮಾ ಮಾಡಲಾಗುವುದು. ಚುನಾವಣೆ ನೀತಿ ಸಂಹಿತೆ ಬಂದಿದ್ದರಿಂದ ರೈತರ ಬ್ಯಾಂಕ್‌ ಖಾತೆಗೆ ಹಣ ಪಾವತಿಸುವುದು ತಡವಾಗಿದೆ’ ಎಂದು ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ನಿಗಮದ ಜಿಲ್ಲಾ ಪ್ರಭಾರ ವ್ಯವಸ್ಥಾಪಕ ಎಂ.ಅತಾವುಲ್ಲಾ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

**
ಮೇ 31ರ ಒಳಗೆ ಖರೀದಿ ಕೇಂದ್ರದಲ್ಲಿ ರಾಗಿ ಮಾರಾಟ ಮಾಡಿರುವ ರೈತರ ಬ್ಯಾಂಕ್‌ ಖಾತೆಗೆ ಆರ್‌ಟಿಜಿಎಸ್‌ ಮೂಲಕ ಹಣ ಪಾವತಿಸಲಾಗುವುದು
ಎಂ.ಅತಾವುಲ್ಲಾ, ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ನಿಗಮದ ಜಿಲ್ಲಾ ಪ್ರಭಾರ ವ್ಯವಸ್ಥಾಪಕ

–ಎಸ್‌.ಸುರೇಶ್‌ ನೀರಗುಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.