ಚಿತ್ರದುರ್ಗ: ನಾಯಕನಹಟ್ಟಿ ಗುರು ತಿಪ್ಪೇರುದ್ರಸ್ವಾಮಿಗೆ ಬುಧವಾರ ಹರಕೆ ರೂಪದಲ್ಲಿ ಸಾವಿರಾರು ಭಕ್ತರು ಕೊಬ್ಬರಿ ಸುಟ್ಟು ಭಕ್ತಿ ಸಮರ್ಪಿಸಿದರು.
ಜಾತ್ರೆಗೆ ರಾಜ್ಯದ ನಾನಾ ಜಿಲ್ಲೆಗಳಿಂದ ಆಗಮಿಸಿದ್ದ ಅಪಾರ ಭಕ್ತರು ಹರಕೆ ಪ್ರಕಾರವಾಗಿ ಕೊಬ್ಬರಿ ಕೊಂಡು ಒಳಮಠ ದೇವಸ್ಥಾನ ಮುಂಭಾಗದಲ್ಲಿ ನಿಗದಿ ಮಾಡಿದ್ದ ಸ್ಥಳದಲ್ಲಿ ಸುಡುವ ದೃಶ್ಯ ನೋಡುಗರ ಗಮನ ಸೆಳೆಯಿತ್ತು. ಆದರೆ, ಕೊಬ್ಬರಿ ಸುಡಲು ನಿಗದಿ ಮಾಡಿದ್ದ ಸ್ಥಳ ಸುತ್ತಮುತ್ತ ಸಮರ್ಪಕ ಬಂದೋಬಸ್ತ್ ಮಾಡದ ಪರಿಣಾಮ ಭಕ್ತರು ಅಪಾಯ ನೆನಪು ಮಾಡಿಕೊಂಡೇ ಕೊಬ್ಬರಿ ಸುಡಲು ಮುಂದಾಗಬೇಕಾಯಿತು. ಸ್ವಲ್ಪ ಯಾಮಾರಿದರೂ ಅಪಾಯ ಬೆಂಕಿ ಕೆನ್ನಾಲೆಯಿಂದ ಕೂಡಿದ್ದ ಕೊಬ್ಬರಿ ಸುಡುತ್ತಿದ್ದ ಗುಂಡಿಗೆ ಬೀಳುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿರಲಿಲ್ಲ ಎನ್ನಲಾಗಿದೆ.
ಈ ಬಗ್ಗೆ ಸ್ಪಷ್ಟನೆ ನೀಡಿದ ದೇವಸ್ಥಾನ ಸಮಿತಿ ಅಧ್ಯಕ್ಷ ಎಂ.ವೈ.ಟಿ. ಸ್ವಾಮಿ, ಕೊಬ್ಬರಿ ಸುಡುವ ಸ್ಥಳ ಸುತ್ತ ಬಿದಿರಿನ ಬೊಂಬಿನಿಂದ ರಕ್ಷಣೆ ಕಲ್ಪಿಸಲಾಗಿತ್ತು. ಬೆಂಕಿ ಝಳಕ್ಕೆ ಅವು ಸೊಟ್ಟು ಹೋಗಿವೆ. ಆದ್ದರಿಂದ ಮುಂದಿನ ದಿನಗಳಲ್ಲಿ ಸ್ಟೀಲ್ ಕಂಬಿಗಳನ್ನು ರಕ್ಷಣೆಗೆ ಬಳಸಲಾಗುವುದು ಎಂದು ಹೇಳಿದರು.
ಸುಮಾರು 1,500 ಪೊಲೀಸ್ ಸಿಬ್ಬಂದಿ ಜಾತ್ರೆಗೆ ಆಯೋಜಿಸಿದ್ದರೂ ಪೂಜೆ ಸಲ್ಲಿಸುವ ಭಕ್ತರನ್ನು ಸಾಲಾಗಿ ನಿಲ್ಲಿಸುವಲ್ಲಿ ಪೊಲೀಸರು ಪರದಾಡಬೇಕಾಯಿತು. ರಥ ಸಾಗುವಾಗ ನಗರದ ಹೊರಭಾಗದಲ್ಲಿ ಉಂಟಾದ ವಾಹನ ಸಂಚಾರ ದಟ್ಟಣೆ ನಿಯಂತ್ರಿಸುವಲ್ಲಿಯೂ ಕೂಡ ಪೊಲೀಸರು ಹರಸಾಹಸ ಪಡುತ್ತಿದ್ದುದು ಕಂಡುಬಂದಿತು.
ಗೋನೂರು ರಥೋತ್ಸವ
ಇಲ್ಲಿಗೆ ಸಮೀಪದ ಗೋನೂರಿನಲ್ಲಿ ಬುಧವಾರ ಸಂಜೆ ಗುರು ತಿಪ್ಪೇರುದ್ರಸ್ವಾಮಿ ರಥೋತ್ಸವ ವೈಭವದಿಂದ ನೆರವೇರಿತು.
ಅಂಗವಾಗಿ ಸಮೀಪದ ಬೆಟ್ಟದ ಮೇಲಿರುವ ದೇವಸ್ಥಾನದಿಂದ ಉತ್ಸವ ಮೂರ್ತಿಯನ್ನು ಮೆರವಣಿಗೆ ಮೂಲಕ ತರಲಾಯಿತು. ಹಲವು ಧಾರ್ಮಿಕ ಕಾರ್ಯಕ್ರಮಗಳ ನಂತರ ರಥೋತ್ಸವ ಆರಂಭವಾಗಿ, ಪಾದಗಟ್ಟೆಯವರೆಗೆ ಸಾಗಿ ಮರಳಿ ಬಂದಿತು.
ಚಿತ್ರದುರ್ಗ ನಗರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಅಪಾರ ಭಕ್ತರು ರಥೋತ್ಸವದಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.