ADVERTISEMENT

ಕೊಳವೆಬಾವಿ ಅಕ್ರಮ ಆರೋಪ: ತನಿಖೆಗೆ ಆಗ್ರಹಿಸಿ ಪ್ರತಿಭಟನೆ

ಸಚಿವ ಆಂಜನೇಯ ವಿರುದ್ಧ ಬಿಜೆಪಿ ನಾಯಕರ ಆಕ್ರೋಶ, ಹೆಚ್ಚುವರಿ ಜಿಲ್ಲಾಧಿಕಾರಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2018, 10:59 IST
Last Updated 6 ಮಾರ್ಚ್ 2018, 10:59 IST
ಹೊಳಲ್ಕೆರೆ ಕ್ಷೇತ್ರದಲ್ಲಿ ಗಂಗಾಕಲ್ಯಾಣ ಯೋಜನೆಯಡಿ ಕೊರೆಯುವ ಕೊಳವೆಬಾವಿಗಳಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ, ಪ್ರಕರಣವನ್ನು ತನಿಖೆ ನಡೆಸಲು ಒತ್ತಾಯಿಸಿ ಜಿಲ್ಲಾ ಬಿಜೆಪಿ ಘಟಕದವರು ಸೋಮವಾರ ಚಿತ್ರದುರ್ಗದ ಒನಕೆ ಓಬವ್ವ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಹೊಳಲ್ಕೆರೆ ಕ್ಷೇತ್ರದಲ್ಲಿ ಗಂಗಾಕಲ್ಯಾಣ ಯೋಜನೆಯಡಿ ಕೊರೆಯುವ ಕೊಳವೆಬಾವಿಗಳಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ, ಪ್ರಕರಣವನ್ನು ತನಿಖೆ ನಡೆಸಲು ಒತ್ತಾಯಿಸಿ ಜಿಲ್ಲಾ ಬಿಜೆಪಿ ಘಟಕದವರು ಸೋಮವಾರ ಚಿತ್ರದುರ್ಗದ ಒನಕೆ ಓಬವ್ವ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.   

ಚಿತ್ರದುರ್ಗ: ಹೊಳಲ್ಕೆರೆ ಕ್ಷೇತ್ರದಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ಮಂಜೂರಾಗಿರುವ ಕೊಳವೆಬಾವಿ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದ್ದು, ಈ ಕುರಿತು ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಿ ಜಿಲ್ಲಾ ಬಿಜೆಪಿ ಘಟಕದ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿ, ಹೆಚ್ಚುವರಿ ಜಿಲ್ಲಾಧಿಕಾರಿ ಸಂಗಪ್ಪ ಅವರಿಗೆ ಮನವಿ ಸಲ್ಲಿಸಿದರು.

ನಗರದ ನೀಲಕಂಠೇಶ್ವರಸ್ವಾಮಿ ದೇವಸ್ಥಾನದಿಂದ ಮೆರವಣಿಗೆ ಮೂಲಕ ಒನಕೆ ಓಬವ್ವ ವೃತ್ತಕ್ಕೆ ಬಂದ ಪ್ರತಿಭಟನಾಕಾರರು ಸಚಿವ ಎಚ್.ಆಂಜನೇಯ ವಿರುದ್ದ ಧಿಕ್ಕಾರ ಕೂಗಿದರು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್.ನವೀನ್, ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕೆ.ಎಸ್.ನವೀನ್, ‘ಜನವರಿಯಲ್ಲಿ ಒಂದೇ ದಿನ ಸಚಿವರು ಹೊಳಲ್ಕೆರೆ ಕ್ಷೇತ್ರದಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಸುಮಾರು 3,500 ಕೊಳವೆಬಾವಿಗಳನ್ನು ಮಂಜೂರು ಮಾಡಿದ್ದಾರೆ. ಮಂಜೂರಾತಿ ಪಟ್ಟಿಯಲ್ಲಿ ಅಕ್ರಮಗಳು ನಡೆದಿರುವ ಕುರಿತು ಅನುಮಾನವಿದೆ. ಈ ಯೋಜನೆ­ಯಲ್ಲಿ ಗಂಗಾಕಲ್ಯಾಣ ಮತ್ತು ಎಸ್‌ಸಿ, ಎಸ್‌ಟಿ ನಿಗಮದ ಕಾಯ್ದೆ ಉಲ್ಲಂಘಿಸಿ, ತಮ್ಮ ವಿವೇಚನೆಗೆ ತಕ್ಕಂತೆ ಕೊಳವೆಬಾವಿ ಮಂಜೂರು ಮಾಡಿದ್ದಾರೆ. ಇದರಿಂದ ಅರ್ಹ ಫಲಾನುಭವಿಗಳು ಅವಕಾಶ ವಂಚಿತರಾಗಿದ್ದಾರೆ’ ಎಂದು ದೂರಿದರು.

ADVERTISEMENT

‘ಕೊಳವೆಬಾವಿ ಕೊರೆಸುವುದರಲ್ಲೂ ಅಕ್ರಮ ಮತ್ತು ಹಣದ ಅವ್ಯವಹಾರ ನಡೆದಿರುವ ಶಂಕೆ ಇದ್ದು, ಬೋರ್‌ವೆಲ್ ಕೊರೆಯುವ ಸಂಸ್ಥೆಗಳಿಗೂ ಹಣ ನೀಡುವಲ್ಲಿ ವ್ಯತ್ಯಾಸವಾಗಿದೆ. ಮಾತ್ರವಲ್ಲ, ಬೋರ್‌ ಕೊರೆದಿರುವ ಅಳತೆಯಲ್ಲೂ ತಪ್ಪು ಅಂಕಿ ಅಂಶಗಳನ್ನು ನೀಡಿರುವ ಬಗ್ಗೆ ಅನುಮಾನವಿದೆ. ಈ ಎಲ್ಲ ವಿಚಾರಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ರಾಜ್ಯಪಾಲರು ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಆಂಜನೇಯ ಅವರನ್ನು ಸಂಪುಟದಿಂದ ಕೈಬಿಡಬೇಕು’ ಎಂದು ಒತ್ತಾಯಿಸಿದರು.

ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿ, ‘ನಾಲ್ಕು ವರ್ಷ ಸುಮ್ಮನಿದ್ದು, ಒಂದೇ ದಿನ ಸಾವಿರಾರು ಕೊಳವೆಬಾವಿಗಳನ್ನು ಮಂಜೂರು ಮಾಡಿರುವುದರ ಹಿಂದೆ ಇರುವ ಉದ್ದೇಶ ಏನು ಎಂಬುದು ತನಿಖೆಯಿಂದ ಹೊರಬೀಳಬೇಕಿದೆ’ ಎಂದು ಹೇಳಿದರು.

ಹೊಳಲ್ಕೆರೆ ಮಾಜಿ ಶಾಸಕ ಎಂ.ಚಂದ್ರಪ್ಪ ಮಾತನಾಡಿ, ‘ಹೊಳಲ್ಕೆರೆ ಕ್ಷೇತ್ರದಲ್ಲಿ ಯಾವ ಅಭಿವೃದ್ದಿಯೂ ಆಗಿಲ್ಲ. ಅಮಿತ್ ಶಾ ಬಂದಾಗ ಜನ ಸೇರಿದ್ದನ್ನು ನೋಡಿ ಭಯಗೊಂಡು ಈಗ ಬೋರ್‌ವೆಲ್‌ಗಳನ್ನು ಕೊರೆಸಿ ಕ್ಷೇತ್ರದ ಜನರನ್ನು ಸಮಾಧಾನಪಡಿಸಲು ಹೊರಟಿದ್ದಾರೆ’ ಎಂದು ದೂರಿದರು.

‘ಬಡ ರೈತರಿಗೆ ಕೊಳವೆಬಾವಿ ಸೌಲಭ್ಯ ನೀಡಿದರೆ ವಿರೋಧವಿಲ್ಲ. ಆದರೆ, ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ. ಅಧಿಕಾರ ದುರ್ಬಳಕೆ ಮಾಡಿಕೊಂಡು ಕೊಳವೆಬಾವಿ ಕೊರೆಸಲಾಗಿದೆ. ಈ ವಿಚಾರವನ್ನು ರಾಜ್ಯಪಾಲರು ತನಿಖೆಗೆ ಒಳಪಡಿಸಬೇಕು’ ಎಂದು ಆಗ್ರಹಿಸಿದರು.

***
‘ಬಿಜೆಪಿಯವರು ಸುಳ್ಳುಗಾರರು’
‘ಏನಾದರೂ ಮಾಡಲಿ, ಹೇಗಾದರೂ ಮಾಡ್ಕೊಳ್ಳಲಿ. ಈಗಾಗಲೇ ಬಿಜೆಪಿಯವರು ಸುಳ್ಳುಗಾರರು ಅಂತ ಗೊತ್ತಾಗಿದೆ. ಅವರು ಯಾವ ರೀತಿ ಬೇಕಾದರೂ ತನಿಖೆ ಮಾಡಿಕೊಳ್ಳಲಿ. ನಾನು, ನನಗಿರುವ ಅಧಿಕಾರ ಚಲಾಯಿಸಿ, ಪಾರದರ್ಶಕವಾಗಿ ಬಡವರಿಗೆ ಸೌಲಭ್ಯಗಳನ್ನು ಕೊಟ್ಟಿದ್ದೇನೆ. ಸಚಿವನಾಗಿರುವುದರಿಂದ, ನನ್ನ ಕ್ಷೇತ್ರಕ್ಕೆ ಸ್ವಲ್ಪ ಹೆಚ್ಚಿಗೆ ಕೊಟ್ಟಿರಬಹುದು, ಅಷ್ಟೇ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್. ಆಂಜನೇಯ ಬಿಜೆಪಿ ಕಾರ್ಯಕರ್ತರು ನಡೆಸಿದ ಪ್ರತಿಭಟನೆಗೆ ಪ್ರತಿಕ್ರಿಯೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.