ADVERTISEMENT

ಕೋಟೆನಾಡಿನಲ್ಲಿ `ತಿಪ್ಪಜ್ಜಿ ಸರ್ಕಲ್'

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2013, 5:46 IST
Last Updated 3 ಸೆಪ್ಟೆಂಬರ್ 2013, 5:46 IST

ಚಿತ್ರದುರ್ಗ: ಐತಿಹಾಸಿಕ ಚಿತ್ರದುರ್ಗದ ಪ್ರಮುಖ ವೃತ್ತಗಳಲ್ಲೊಂದಾದ `ತಿಪ್ಪಜ್ಜಿ ಸರ್ಕಲ್'ನ ನೈಜ ಘಟನೆಯೊಂದು ಕಥೆಯಾಗಿ, ಈಗ ಬೆಳ್ಳಿತೆರೆಯ ಮೇಲೆ ಪ್ರದರ್ಶನಕ್ಕೆ ಸಜ್ಜಾಗುತ್ತಿದೆ.

`ತಿಪ್ಪಜ್ಜಿ ಸರ್ಕಲ್' ಹೆಸರಿನಲ್ಲಿ ನಿರ್ಮಾಣವಾಗುತ್ತಿರುವ ಚಿತ್ರದ ಚಿತ್ರೀಕರಣ ಸೋಮವಾರ ನಗರದ  ಗೋನೂರು ರಸ್ತೆಯಲ್ಲಿರುವ ವೆಂಕಟೇಶ್ವರ ದೇಗುಲದಲ್ಲಿ ಆಂಭವಾಯಿತು. ಮೊದಲ ಶಾಟ್‌ನಲ್ಲಿ ಚಿತ್ರದ ನಾಯಕಿ ಪೂಜಾಗಾಂಧಿ ಕ್ಯಾಮೆರಾಗೆ ಎದುರಾದರು.

ಮಹೂರ್ತ ಸರಳವಾಗಿ ನೆರವೇರಿತು. ಜಿಲ್ಲಾಧಿಕಾರಿ ವಿ.ಪಿ.ಇಕ್ಕೇರಿ ದೀಪ ಬೆಳಗಿಸಿ, ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಎಚ್.ಆಂಜನೇಯ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದರು. ಡಾ.ಶಿವಮೂರ್ತಿ ಮುರುಘಾ ಶರಣರು ಕ್ಯಾಮೆರಾ ಗುಂಡಿ ಒತ್ತುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದರು.

ಸಿನಿಮಾ ಕುರಿತು ಮಾತನಾಡಿದ ನಿರ್ದೇಶಕ ಆದಿತ್ಯ ಚಿಕ್ಕಣ್ಣ, ಸಾಹಿತಿ ಬಿ.ಎಲ್.ವೇಣು ಅವರ `ತಿಪ್ಪಜ್ಜಿ ಸರ್ಕಲ್' ಕಥೆಯನ್ನು ಆಧರಿಸಿ ಈ ಸಿನಿಮಾ ತೆಗೆಯಲಾಗುತ್ತಿದೆ.  ಬಹುದೊಡ್ಡ ಸಾಮಾಜಿಕ ದೃಷ್ಟಿಕೋನವುಳ್ಳ ಹಾಗೂ ಮಹಿಳಾ ಶೋಷಣೆಯ ವಿರುದ್ಧ ದನಿ ಎತ್ತುವಂತಹ ವಸ್ತುವನ್ನು ಹೊಂದಿದೆ. ಇದು ಕಲಾತ್ಮಕ ಸಿನಿಮಾ' ಎಂದರು.

ಮೊದಲ ಹಂತದಲ್ಲಿ 15 ದಿನಗಳ ಚಿತ್ರೀಕರಣ ಚಿತ್ರದುರ್ಗ ಹಾಗೂ ಸಂಡೂರಿನಲ್ಲಿ ನಡೆಯಲಿದೆ. ನಗರದ ತಿಪ್ಪಜ್ಜಿ ಸರ್ಕಲ್  ಚನ್ನಕೇಶವ ದೇವಾಲಯ ವೃತ್ತ, ಬಿ.ದುರ್ಗದಲ್ಲಿ ಚಿತ್ರೀಕರಣ ನಡೆಯಲಿದೆ.

ರಾಷ್ಟ್ರ ಪ್ರಶಸ್ತಿ ನಿರೀಕ್ಷೆಯಲ್ಲಿ...
`ಪ್ರಶಸ್ತಿಗಾಗಿ ಈ ಸಿನಿಮಾ ಮಾಡುತ್ತಿಲ್ಲ. ಜನರು ನೋಡಬೇಕು ಎಂಬ  ಉದ್ದೇಶದಿಂದ ಚಿತ್ರ ಮಾಡುತ್ತಿದ್ದೇನೆ' ಎಂದು ನಿರ್ದೇಶಕ ಚಿಕ್ಕಣ್ಣ ಹೇಳುತ್ತಿದ್ದಂತೆಯೇ, ನಾಯಕಿ ಪೂಜಾಗಾಂಧಿ, `ನಾನಂತೂ ಈ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಸಿಗಬೇಕು' ಎಂದು ಆಶಿಸುತ್ತೇನೆ ಎಂದರು .

ಕಥೆ ಕೇಳಿದಾಕ್ಷಣ ಇಷ್ಟವಾಯ್ತು. ಉತ್ತರ ಕರ್ನಾಟಕದಲ್ಲಿ ದೇವದಾಸಿಯರ ಪುನರ್ವಸತಿ ಕುರಿತು ಕೆಲಸ ಮಾಡಿದ್ದೇನೆ. ಆಗ ಅವರ ಕರಾಳ ಬದುಕಿನ ಬಗ್ಗೆ ತಿಳಿದುಕೊಂಡಿದ್ದೆ. ಇದೊಂದು ಸವಾಲಿನ  ಪಾತ್ರ ಎಂದರು. 

ನಲವತ್ತು  ಸಿನಿಮಾಗಳಾಗಿವೆ. ಒಬ್ಬ ಕಲಾವಿದನಿಗೆ ಪ್ರತಿಯೊಂದು ಚಿತ್ರವೂ ಸವಾಲೇ ಸರಿ. ದುಂಡುಪಾಳ್ಯ ಚಿತ್ರದ ನಂತರ ಅದಕ್ಕಿಂತ ಹೆಚ್ಚಿನ ಗಟ್ಟಿ ಕಥಾವಸ್ತುವಿರುವ ಚಿತ್ರ ಮಾಡಬೇಕು ಎನಿಸಿತ್ತು. ಅದು ಈ ಚಿತ್ರದ ಮೂಲಕ ಸಾಧ್ಯವಾಗಿದೆ' ಎನ್ನುತ್ತಾ ನಗೆ ಬೀರಿದರು ಪೂಜಾ ಗಾಂಧಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.