ADVERTISEMENT

ಕೋಟೆನಾಡಿನ ಹೃದಯ ಭಾಗದಲ್ಲಿ ಶೈಕ್ಷಣಿಕ ಕ್ಯಾಂಪಸ್

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2013, 8:48 IST
Last Updated 20 ಸೆಪ್ಟೆಂಬರ್ 2013, 8:48 IST

ಚಿತ್ರದುರ್ಗ: ನಗರದ ಹೃದಯ ಭಾಗದಲ್ಲಿ ಏಳೆಂಟು ಎಕರೆ ವಿಶಾಲವಾದ ಜಮೀನಿನಲ್ಲಿ ಸರ್ಕಾರಿ ಶಾಲಾ, ಕಾಲೇಜುಗಳು ಒಂದೇ ಕಡೆ ನಿರ್ಮಾಣವಾಗಿ, ಮೈಸೂರಿನ ಮಾನಸ ಗಂಗೋತ್ರಿಯಂತಹ ಕ್ಯಾಂಪಸ್ ನಿರ್ಮಾಣವಾದರೆ ಹೇಗಿರುತ್ತದೆ ಹೇಳಿ...?

ನಿಜ, ಅಂಥದ್ದೊಂದು ಕ್ಯಾಂಪಸ್ ನಿರ್ಮಾಣದ ಚಿಂತನೆಗೆ ಶೀಘ್ರದಲ್ಲೇ ಚಾಲನೆ ದೊರೆಯಲಿದೆ. ಶಾಸಕ ಜಿ.ಎಚ್.ತಿಪ್ಪಾರೆಡ್ಡಿಯವರು ಇಂಥ ಬೃಹತ್ ಶೈಕ್ಷಣಿಕ ಕ್ಯಾಂಪಸ್ ನಿರ್ಮಾಣಕ್ಕೆ ವೇದಿಕೆಯನ್ನು ಸಿದ್ಧಗೊಳಿಸುತ್ತಿದ್ದಾರೆ. ಈ ಸಂಬಂಧ ಜಿಲ್ಲಾಡಳಿತ, ನಗರಸಭೆ ಹಾಗೂ ಶಿಕ್ಷಣ ಇಲಾಖೆಯೊಂದಿಗೆ ಚರ್ಚಿಸುವುದಾಗಿ ಹೇಳಿದ್ದಾರೆ. ಎಲ್ಲ ಅಂದು ಕೊಂಡಂತಾದರೆ ಕೆಲವೇ ವರ್ಷಗಳಲ್ಲಿ ಹಚ್ಚ ಹಸಿರಿನ 'ಜ್ಞಾನ ದಾಸೋಹ'ದ ಶೈಕ್ಷಣಿಕ ಕ್ಯಾಂಪಸ್ ಅನಾವಣ ಗೊಳ್ಳಲಿದೆ.

ಗುರುವಾರ ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು, ಮುನ್ಸಿಪಲ್ ಹೈಸ್ಕೂಲ್(ಕೋಟೆ), ಡಯೆಟ್ ಶಿಕ್ಷಕರ ತರಬೇತಿ ಕಟ್ಟಡ ಸೇರಿದಂತೆ ವಿವಿಧ ಶಾಲಾ ಕಾಲೇಜುಗಳಿಗೆ ಭೇಟಿದ ನಂತರ ಶಾಸಕ ತಿಪ್ಪಾರೆಡ್ಡಿಯವರು, ಸುದ್ದಿಗಾರ ರೊಂದಿಗೆ ಮಾತನಾಡಿ, ಹೊಸ ಕ್ಯಾಂಪಸ್ ನಿರ್ಮಾಣದ ಪರಿಕಲ್ಪನೆ ಯನ್ನು ಬಿಚ್ಚಿಟ್ಟರು.

ನಗರದಲ್ಲಿ ಜ್ಯೂನಿಯರ್ ಕಾಲೇಜು, ಉರ್ದು ಹೈಸ್ಕೂಲು, ಹಿರಿಯ ಪ್ರಾಥಮಿಕ ಪಾಠಶಾಲೆ, ಕೋಟೆ ಶಾಲೆ.. ಹೀಗೆ ಎಲ್ಲ ಕಟ್ಟಡಗಳು ಒಂದಕ್ಕೊಂದಕ್ಕೆ ಹೊಂದಿಕೊಂಡಂತಿವೆ. ಈ ಕಟ್ಟಡಗಳ ನಡುವೆ ಆಟದ ಮೈದಾನಗಳಿವೆ. ಕೆಲವು ಹಳೆಯ ಕಟ್ಟಡಗಳಿದ್ದರೆ, ಇನ್ನು ಕೆಲವು ಕಡೆ ಸಂಚಾರಕ್ಕೆ ಅಗತ್ಯವಾದ ರಸ್ತೆಗಳಿವೆ. ಕೆಲವು ರಸ್ತೆಗಳು ಬಳಕೆಯಾಗುತ್ತಿಲ್ಲ.

ಹಳೆಯ ಕಟ್ಟಡಗಳಲ್ಲಿ ರಸ್ತೆ ಹಾಗೂ ಕಟ್ಟಡವನ್ನು ಬಳಸುತ್ತಿಲ್ಲ. ಹಾಗಾಗಿ  ಬಸವಸದನದಿಂದ ಜ್ಯೂನಿಯರ್ ಕಾಲೇಜು ಮತ್ತು ಉರ್ದು ಶಾಲೆ ನಡುವಿನ ರಸ್ತೆಯನ್ನು ಮುಚ್ಚಿಸಿ, ಸುತ್ತಲಿನ ಕಾಂಪೌಂಡ್ ತೆಗೆಸಿ, ಹಳೆಯ ಕಟ್ಟಡಗಳನ್ನು ತೆರವುಗೊಳಿಸಿ, ವಿಶಾಲವಾದ ಈ ಸ್ಥಳದಲ್ಲಿ  ನಗರದ ಎಲ್ಲ ಸರ್ಕಾರಿ ಶಾಲಾ, ಕಾಲೇಜುಗಳನ್ನು ನಿರ್ಮಿಸಬಹುದು. ಇದರಿಂದ ಒಂದೇ ಸೂರಿನಡಿ ಎಲ್ಲ ಹಂತದ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ಪೂರೈಸಿದಂತಾಗುತ್ತದೆ. ಸುಂದರವಾದ ಶೈಕ್ಷಣಿಕ ಕ್ಯಾಂಪಸ್ ನಿರ್ಮಾಣವಾದಂತಾಗುತ್ತದೆ. ಈ ಸಂಬಂಧ ಜಿಲ್ಲಾಧಿಕಾರಿಗಳು, ನಗರಸಭೆ, ಶಿಕ್ಷಣ ಇಲಾಖೆಯೊಂದಿಗೆ ಚರ್ಚಿಸುವುದಾಗಿ ಹೇಳಿದರು.

೫೪ ಕೊಠಡಿಗಳಿಗೆ ಹಣ ಮಂಜೂರು: ಪ್ರಾಥಮಿಕ ಶಾಲೆಗಳ ಕೊಠಡಿ ನಿರ್ಮಾಣಕ್ಕೆ ಸರ್ವ ಶಿಕ್ಷಣ ಅಭಿಯಾನದಂತೆ ಪ್ರೌಢಶಾಲೆಗಳ ನಿರ್ಮಾಣಕ್ಕೂ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದಲ್ಲಿ (ಆರ್ ಎಂ ಎಸ್ ) ಜಿಲ್ಲೆಗೆ ` ೨೪ ಕೋಟಿ ಅನುದಾನ ಬಂದಿದೆ. ಇದರಲ್ಲಿ ಚಿತ್ರದುರ್ಗ ತಾಲ್ಲೂಕಿಗೆ ` ೩ ಕೋಟಿ ಅನುದಾನ ಬಂದಿದ್ದು ೫೪ ಕೊಠಡಿಗಳನ್ನು ನಿರ್ಮಾಣ ಮಾಡಲಾಗುತ್ತದೆ ಎಂದು ಶಾಸಕರು ಹೇಳಿದರು.

ಕೋಟೆ ಶಾಲೆಗೆ ` ೬೫ ಲಕ್ಷದಲ್ಲಿ ೮ ಕೊಠಡಿ, ಯಳಗೋಡು ಶಾಲೆಗೆ ೬ , ತುರುವನೂರು ಶಾಲೆಗೆ ೫ , ಕಡಬನ  ಕಟ್ಟೆ ಶಾಲೆಗೆ ೪, ಚೌಲಿಹಳ್ಳಿ ಗೊಲ್ಲರಹಟ್ಟಿ ಶಾಲೆಗೆ ೪, ಶಿವನಕೆರೆಗೆ ೪, ಅನ್ನೇಹಾಳ್ ಸಮೀಪದ ಶಾಲೆಗೆ ೪, ಮುದ್ದಾಪುರ ೭, ಜೆ.ಎನ್.ಕೋಟೆ ೬, ಕುರುಬರಹಳ್ಳಿ ಶಾಲೆಗೆ ೬ ಕೊಠಡಿಗಳು ಮಂಜೂರಾಗಿ ಅನುದಾನ ಬಂದಿದ್ದು ಶೀಘ್ರದಲ್ಲೇ ಶಂಕುಸ್ಥಾಪನೆ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.

ಒತ್ತುವರಿ ತೆರವಿಗೆ ಭರವಸೆ : ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮೈದಾನಕ್ಕೆ ಜಾಗ ಉಳಿಸಿಕೊಂಡು ಕಟ್ಟಡ, ಶೌಚಾಲಯ ನಿರ್ಮಾಣ ಮಾಡಲಾಗುತ್ತದೆ ಎಂದರು.

ಕೋಟೆ ಶಾಲೆಯ ಸುತ್ತಲಿನ ಜಾಗ ಒತ್ತುವರಿಯಾಗಿದ್ದು, ಜಿಲ್ಲಾಧಿಕಾರಿ ಗಳೊಂದಿಗೆ ಚರ್ಚಿಸಿ, ಜಾಗ ತೆರೆವುಗೊಳಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಈ ಶಾಲೆಯಲ್ಲಿ ಪ್ರತಿ ವರ್ಷ ಉತ್ತಮ ಫಲಿತಾಂಶ ಬರುತ್ತಿದೆ. ಇದು ಜಿಲ್ಲೆಗೆ ಮಾದರಿ ಶಾಲೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು. ಈ ಶಾಲೆಗೆ ಅಗತ್ಯವಿರುವ ಕಟ್ಟಡ ನಿರ್ಮಾಣ, ಇರವ ಕಟ್ಟಡಗಳ ದುರಸ್ತಿಗೆ ಬೇಕಾಗುವ ಅನುದಾನವನ್ನು ಮಂಜೂರು ಮಾಡಿಸುವುದಾಗಿ ಶಿಕ್ಷಕರಿಗೆ ಹಾಗೂ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರಿಗೆ ಭರವಸೆ ನೀಡಿದರು.

ಕೋಟೆ ಶಾಲೆ ಪಕ್ಕದಲ್ಲಿರುವ ಕಟ್ಟಡವನ್ನು (ಈಗಿನ ಡಯಟ್ ಕಾಲೇಜು) ೮೦-೯೦ ವರ್ಷಗಳ ಹಿಂದೆ ನಗರದ ಅನಂತಶೆಟ್ಟರು ದಾನ ನೀಡಿದ್ದರು. ಆ ಜಾಗದಲ್ಲಿ ಈಗ ಡಿಇಡಿ ಕಾಲೇಜ್ ನಡೆಯುತ್ತಿದೆ.

ಇದೊಂದು ಐತಿಹಾಸಿಕ ಸ್ಮಾರಕದಂತೆ ಕಟ್ಟಡವಿದ್ದು, ಈ ಕಟ್ಟಡವನ್ನು ಉಳಿಸಿಕೊಂಡು ದುರಸ್ತಿ ಮಾಡಿಸಿ ಸಂರಕ್ಷಿಸಲಾಗುತ್ತದೆ ಎಂದರು. ಕಾಲೇಜು ದುರಸ್ತಿಗಾಗಿ ` 4 ರಿಂದ 5 ಕೋಟಿ ಅನುದಾನ ಅಗತ್ಯವಿದ್ದು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುತ್ತದೆ ಎಂದು ಹೇಳಿದರು.

ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಕಟ್ಟಡ ನಿರ್ಮಾಣಕ್ಕೆ ಸೂಕ್ತ ನಿವೇಶನ ಒದಗಿಸಿದರೆ ಕಟ್ಟಡ ಕಟ್ಟಲು ಅನುದಾನ ನೀಡುವುದಾಗಿ ಸರ್ಕಾರದಿಂದ ಪತ್ರ ಬಂದಿದೆ. ನಗರದಲ್ಲಿ ಸರ್ಕಾರಿ ನಿವೇಶನದ ಹುಡುಕಾಟ ಆರಂಭಿಸಲಾಗುವುದು ಎಂದರು.

ಹೊಳಲ್ಕೆರೆ ರಸ್ತೆಯಲ್ಲಿರುವ ಸಂತೇಪೇಟೆ ಪ್ರಾಥಮಿಕ ಶಾಲೆಗೂ ೪ ಕೊಠಡಿ ನಿರ್ಮಾಣ ಮಾಡಲು ಅನುದಾನ ಬಂದಿದೆ. ಅದು ನಾನು ಓದಿದ ಶಾಲೆ. ಆ ಅಭಿಮಾನದಿಂದ ಶಾಲೆಗೆ ಕಂಪ್ಯೂಟರ್ ಗಳನ್ನು ವಿತರಿಸುತ್ತಿರುವುದಾಗಿ ಶಾಸಕರು ತಿಳಿಸಿದರು. ಡಿಡಿಪಿಐ ಮಂಜುನಾಥ್, ಬಿಇಒ ರವಿಶಂಕರ್ ರೆಡ್ಡಿ, ಪ್ರಾಂಶುಪಾಲ ಹನುಮಂತಪ್ಪ, ರಾಜಣ್ಣ ಮತ್ತಿರರರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.