ADVERTISEMENT

ಕೋಳಿ ಸಾಕಾಣಿಕೆದಾರರಿಗೆ ನಷ್ಟ

ಪ್ರವಾಸಿ ಮಂದಿರದಿಂದ ಪ್ರತಿಭಟನಾ ಮೆರವಣಿಗೆ, ಮನವಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2012, 5:22 IST
Last Updated 4 ಡಿಸೆಂಬರ್ 2012, 5:22 IST

ಚಿತ್ರದುರ್ಗ: ಕೋಳಿ ಸಾಕಾಣಿಕೆದಾರರಿಗೆ ನಷ್ಟ ಉಂಟು ಮಾಡಿ ಅವರನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆಸುತ್ತಿರುವ ಬಹುರಾಷ್ಟ್ರೀಯ ಕಂಪೆನಿಗಳ ಕ್ರಮ ವಿರೋಧಿಸಿ ಬಾಯ್ಲರ್ ಕೋಳಿ ಸಾಕಾಣಿಕೆ ರೈತರ ಸಂಘದ ಜಿಲ್ಲಾ ಘಟಕದ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.

ನಗರದ ಪ್ರವಾಸಿ ಮಂದಿರದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಬಿ.ಡಿ. ರಸ್ತೆ, ಮೇದೆಹಳ್ಳಿ ರಸ್ತೆಯ ಮೂಲಕ ರಾಷ್ಟ್ರೀಯ ಹೆದ್ದಾರಿ 4ರ ಬಳಿಯಿರುವ ವಿದ್ಯಾನಗರದ ಸುಗುಣ ಚಿಕನ್ ಸೆಂಟರ್ ಎದುರು ಕಂಪೆನಿಯ ವಿರುದ್ಧ ಘೋಷಣೆ ಕೂಗುತ್ತಾ ಕೆಲಕಾಲ ಪ್ರತಿಭಟನೆ ನಡೆಸಿದರು.

ದೇಶದಲ್ಲಿ ರೈತ ವರ್ಗ ರಾಷ್ಟ್ರ ಹಾಗೂ ರಾಜ್ಯಕ್ಕೆ ಗುಣಮಟ್ಟದ ಆಹಾರ ನೀಡುವ ಉದ್ದೇಶದಿಂದ ಅನೇಕ  ವರ್ಷಗಳಿಂದ ಮಾಂಸಾಹಾರಿ ಬಾಯ್ಲರ್ ಕೋಳಿಗಳನ್ನು ಸಾಕುತ್ತಿದ್ದಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಕೆಲವು ಬಂಡವಾಳಶಾಹಿ ಬಹುರಾಷ್ಟ್ರೀಯ ಕಂಪೆನಿಗಳಾದ ವೆಂಕಾಬ್, ಸುಗುಣ, ಸಿ.ಪಿ. ಚಿಕನ್  ಸೇರಿದಂತೆ ಅನೇಕ ಬಹುರಾಷ್ಟ್ರೀಯ ಕಂಪೆನಿಗಳು ರಾಜ್ಯದಲ್ಲಿ ಬೇಡಿಕೆಗಿಂತ ಹೆಚ್ಚು ಕೋಳಿಗಳನ್ನು ಸಾಕಿ, ಸಾಕಾಣಿಕೆ ವೆಚ್ಚಕ್ಕಿಂತ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿವೆ. ಈ ಪರಿಣಾಮದಿಂದ ಕೋಳಿ ಸಾಕಾಣಿಕೆ ಮಾಡುತ್ತಿರುವ ರೈತರು ತೀವ್ರ ನಷ್ಟ ಅನುಭವಿಸುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೇಶದ ರೈತರ ಹಿತವನ್ನು ಗಮನದಲ್ಲಿಟ್ಟುಕೊಂಡು ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಬಂಡವಾಳಶಾಹಿ ಬಹುರಾಷ್ಟ್ರೀಯ ಕಂಪೆನಿಗಳನ್ನು ಕೂಡಲೇ ರಾಜ್ಯದಿಂದ ಗಡಿಪಾರು ಮಾಡಬೇಕು. ಕೋಳಿ ಸಾಕಾಣಿಕೆಯಲ್ಲಿ ತೊಡಗಿರುವ ರೈತರನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಬೇಕು. ಈ ನಿಟ್ಟಿನಲ್ಲಿ ರಾಜ್ಯ ಮಟ್ಟದಲ್ಲಿ ಸಭೆ ನಡೆಸಿ ಕೋಳಿ ದರ ಕುಸಿತಕ್ಕೆ ಕಾರಣವಾಗಿರುವ ಕಂಪೆನಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಕೋಳಿ ಸಾಕಾಣಿಕೆ ರೈತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಗುರುಮೂರ್ತಿ, ಸಂಘಟನಾ ಕಾರ್ಯದರ್ಶಿ ಬಷೀರ್ ಅಹಮದ್, ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಕಾರ್ಯದರ್ಶಿ ದೇವರಾಜು, ಬಾತಿ ಶಿವಕುಮಾರ್, ಕೊಂಡಜ್ಜಿ ಮಂಜುನಾಥ್, ಕೆಂಚಮ್ಮನಹಳ್ಳಿ ಬಸವರಾಜ್, ಐಗೂರು ಶಿವಮೂರ್ತಿ, ಕಿಶೋರ್‌ಶೆಟ್ಟಿ, ಕ್ಯಾರೆಕಟ್ಟೆ ಮಂಜುನಾಥ್, ಅಣುಬೂರು ನಾಗರಾಜ್, ಪ್ರಕಾಶ್, ಈರಬೊಮ್ಮಯ್ಯ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.