ADVERTISEMENT

ಕ್ಷೇತ್ರದ ಎಲ್ಲ ನಿವಾಸಿಗಳಿಗೆ ಸ್ವಂತ ಸೂರು

ಹೊಳಲ್ಕೆರೆ: ಹಕ್ಕುಪತ್ರ ವಿತರಣಾ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆಂಜನೇಯ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2018, 8:39 IST
Last Updated 15 ಮಾರ್ಚ್ 2018, 8:39 IST
ಹೊಳಲ್ಕೆರೆಯಲ್ಲಿ ಇಂದಿರಾ ಕ್ಯಾಂಟೀನ್‌ಗೆ ಸಚಿವ ಎಚ್.ಆಂಜನೇಯ ಬುಧವಾರ ಶಂಕುಸ್ಥಾಪನೆ ನೆರವೇರಿಸಿದರು.
ಹೊಳಲ್ಕೆರೆಯಲ್ಲಿ ಇಂದಿರಾ ಕ್ಯಾಂಟೀನ್‌ಗೆ ಸಚಿವ ಎಚ್.ಆಂಜನೇಯ ಬುಧವಾರ ಶಂಕುಸ್ಥಾಪನೆ ನೆರವೇರಿಸಿದರು.   

ಹೊಳಲ್ಕೆರೆ: ಕ್ಷೇತ್ರದಲ್ಲಿ ಎಲ್ಲಾ ವಸತಿರಹಿತರಿಗೂ ಸ್ವಂತ ನಿವೇಶನ ನೀಡಿ, ಮನೆ ನಿರ್ಮಿಸಿಕೊಡಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಭರವಸೆ ನೀಡಿದರು.

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಬಯಲು ರಂಗಮಂದಿರದಲ್ಲಿ ಬುಧವಾರ ಫಲಾನುಭವಿಗಳಿಗೆ ನಿವೇಶನ ಹಕ್ಕುಪತ್ರ ವಿತರಿಸಿ ಅವರು ಮಾತನಾಡಿದರು.

‘ಕಳೆದ 10 ವರ್ಷಗಳಿಂದ ತಾಲ್ಲೂಕಿನಲ್ಲಿ ನಿವೇಶನ ಹಂಚಿಕೆ ಆಗಿರಲಿಲ್ಲ. ಈಗ ಗ್ರಾಮೀಣ ಭಾಗದ 1,000 ವಸತಿರಹಿತರಿಗೆ ನಿವೇಶನ ಹಕ್ಕುಪತ್ರ ವಿತರಿಸುತ್ತಿದ್ದೇವೆ. ಪಟ್ಟಣದ ಶಿವಲಿಂಗಪ್ಪ ಬಡಾವಣೆ ಹಾಗೂ ದಾವಣಗೆರೆ ರಸ್ತೆಯ ಪಕ್ಕದಲ್ಲಿರುವ ನಿವೇಶನಗಳ ಹಕ್ಕುಪತ್ರ ವಿತರಿಸುತ್ತಿದ್ದೇವೆ. ಪಟ್ಟಣದಲ್ಲಿ ವಸತಿ ಇಲ್ಲದ 700 ಕುಟುಂಬಗಳನ್ನು ಗುರುತಿಸಿದ್ದು, ಈಗ 270 ಜನರಿಗೆ ಹಕ್ಕುಪತ್ರ ವಿತರಿಸುತ್ತಿದ್ದೇನೆ. ಮುಂದೆ ಉಳಿದವರಿಗೂ ನಿವೇಶನ ವಿತರಿಸಲಾಗುವುದು. ತುಪ್ಪದಹಳ್ಳಿಯಲ್ಲಿ 362, ಬೊಮ್ಮನಕಟ್ಟೆಯಲ್ಲಿ 155, ರಾಮಗಿರಿಯಲ್ಲಿ 140 ನಿವೇಶನ ಹಂಚಿಕೆ ಮಾಡಲಾಗಿದೆ. ಸದ್ಯದಲ್ಲೇ ಚಿತ್ರಹಳ್ಳಿ, ಗುಂಡೇರಿ, ತಾಳಕಟ್ಟ, ದುಮ್ಮಿ, ಅಮೃತಾಪುರ, ಬಸಾಪುರದಲ್ಲಿ ನಿವೇಶನ ವಿತರಿಸಲಾಗುವುದು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ನೆರವಿನಿಂದ ಮನೆಗಳನ್ನೂ ನಿರ್ಮಿಸಲಾಗುವುದು’ ಎಂದರು.

ADVERTISEMENT

‘ಅಕ್ರಮವಾಗಿ ಭೂಮಿ ಉಳುಮೆ ಮಾಡಿದ್ದ 202 ರೈತರ ಜಮೀನನ್ನು ಸಕ್ರಮ ಮಾಡಿ, ಸಾಗುವಳಿ ಪತ್ರ ವಿತರಿಸುತ್ತಿದ್ದೇನೆ. ಇವರು ಇನ್ನು ಮುಂದೆ ಬೆಳೆ ಸಾಲ, ಬೆಳೆ ಪರಿಹಾರ, ಗಂಗಾ ಕಲ್ಯಾಣ ಮತ್ತಿತರ ಸೌಲಭ್ಯ ಪಡೆಯಲು ಅರ್ಹರಾಗುತ್ತಾರೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬಡವರ ಪರವಾಗಿದ್ದು, ಅನೇಕ ಜನೋಪಯೋಗಿ ಕಾರ್ಯಗಳನ್ನು ಮಾಡಿದೆ. ರಾಜ್ಯದಲ್ಲಿ ಒಟ್ಟು 15 ಲಕ್ಷ ಮನೆಗಳನ್ನು ನಿರ್ಮಿಸಲಾಗುತ್ತಿದೆ. ತಾಲ್ಲೂಕಿನಲ್ಲಿ 12 ಸಾವಿರ ಮನೆಗಳನ್ನು ನಿರ್ಮಿಸಲಾಗಿದೆ. ಗಂಗಾ ಕಲ್ಯಾಣ ಯೋಜನೆಯಲ್ಲಿ ಎಲ್ಲಾ ವರ್ಗದ ರೈತರಿಗೆ ಕೊಳವೆಬಾವಿ ಮಂಜೂರು ಮಾಡಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ರಸ್ತೆ, ಶಾಲೆ–ಕಾಲೇಜು, ಸಮುದಾಯ ಭವನ ನಿರ್ಮಿಸಲಾಗಿದೆ. ಹೊಳಲ್ಕೆರೆ ತಾಲ್ಲೂಕು ಹಾಗೂ ಭರಮಸಾಗರ ಭಾಗದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಮಂಜೂರಾತಿ ನೀಡಲಾಗಿದೆ’ ಎಂದು ತಿಳಿಸಿದರು.

ಇಂದಿರಾ ಕ್ಯಾಂಟೀನ್‌ಗೆ ಅಡಿಗಲ್ಲು: ಆಂಜನೇಯ ಅವರು ಬಸ್‌ನಿಲ್ದಾಣದ ಮುಂಭಾಗದಲ್ಲಿ ಇಂದಿರಾ ಕ್ಯಾಂಟೀನ್‌ಗೆ ಶಂಕುಸ್ಥಾಪನೆ ನೆರವೇರಿಸಿದರು. ಇನ್ನು 15 ದಿನಗಳಲ್ಲಿ ಕ್ಯಾಂಟೀನ್ ಕಾರ್ಯಾರಂಭ ಮಾಡಲಿದ್ದು, ₹ 5ಕ್ಕೆ ತಿಂಡಿ, ₹ 10ಕ್ಕೆ ಊಟ ದೊರೆಯಲಿದೆ. ಬಡವರು, ಕಾರ್ಮಿಕರಿಗೆ ಇದರಿಂದ ಅನುಕೂಲ ಆಗಲಿದೆ ಎಂದರು.

ಪಟ್ಟಣದ ಮುಖ್ಯವೃತ್ತದಲ್ಲಿ ನಿರ್ಮಿಸಿರುವ ಹೈಟೆಕ್ ಶೌಚಾಲಯವನ್ನು ಸಚಿವರು ಉದ್ಘಾಟಿಸಿದರು.

ಪಟ್ಟಣ ಪಂಚಾಯ್ತಿಯಲ್ಲಿ ಕೈಚೀಟಿ ಗುತ್ತಿಗೆ ಆಧಾರದಲ್ಲಿ ನೇಮಕವಾದ ಕಾರ್ಮಿಕರು ‘8 ತಿಂಗಳಿಂದ ವೇತನ ಇಲ್ಲದೆ ಜೀವನ ನಿರ್ವಹಣೆ ಕಷ್ಟವಾಗಿದೆ. ದಯಮಾಡಿ ನಮಗೆ ವೇತನ ನೀಡಿ’ ಎಂದು ಸಚಿವರಿಗೆ ಮನವಿ ಸಲ್ಲಿಸಿದರು.

ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಸವಿತಾ ಬಸವರಾಜು, ಸದಸ್ಯರಾದ ಮುರುಗೇಶ್, ರಾಜಪ್ಪ, ಸಯೀದ್, ಸಜಿಲ್, ಚಂದ್ರಕಲಾ ಪ್ರಕಾಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತಪ್ಪ, ಬಿ.ಎಚ್.ಪ್ರಕಾಶ್, ಸೌಭಾಗ್ಯಮ್ಮ, ಪಾಡಿಗಟ್ಟೆ ಸುರೇಶ್, ಮಧುಪಾಲೇಗೌಡ, ಜಗದೀಶ ನಾಡಿಗ್, ತಾಲ್ಲೂಕು ಪಂಚಾಯ್ತಿ ಇಒ ಬಾಲಸ್ವಾಮಿ ದೇಶಪ್ಪ, ತಹಶೀಲ್ದಾರ್ ತಿಪ್ಪೇಸ್ವಾಮಿ, ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಡಿ.ಉಮೇಶ್, ನಟರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.