ADVERTISEMENT

ಕ್ಷೇತ್ರ ಬಿಟ್ಟು ಹೋಗಿ, ಘನತೆ ಉಳಿಸಿಕೊಳ್ಳಿ

ಶ್ರೀರಾಮುಲು, ಜನಾರ್ದನ ರೆಡ್ಡಿ ವಿರುದ್ಧ ಶಾಸಕ ತಿಪ್ಪೇಸ್ವಾಮಿ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2018, 9:42 IST
Last Updated 28 ಏಪ್ರಿಲ್ 2018, 9:42 IST

 ನಾಯಕನಹಟ್ಟಿ: ಬಳ್ಳಾರಿ ಗಣಿದಣಿಗಳು ಸ್ವ ಇಚ್ಚೆಯಿಂದ ಮೊಳಕಾಲ್ಮುರು ಕ್ಷೇತ್ರವನ್ನು ಬಿಟ್ಟು, ಬಳ್ಳಾರಿಗೆ ತೆರಳಿದರೆ ಘನತೆ ಉಳಿಯುತ್ತದೆ. ಇಲ್ಲವಾದರೆ ಕ್ಷೇತ್ರದ ಜನತೆಯೇ ಅವರನ್ನು ಸೋಲಿಸಿ, ಹೊರಹಾಕುವ ಕೆಲಸ ಮಾಡುತ್ತಾರೆ ಎಂದು ಶಾಸಕ ಎಸ್. ತಿಪ್ಪೇಸ್ವಾಮಿ ಎಚ್ಚರಿಸಿದರು.

ಪಟ್ಟಣದಲ್ಲಿ ಗುರುವಾರ ಶಾಸಕ ತಿಪ್ಪೇಸ್ವಾಮಿ ಅಭಿಮಾನಿ ಬಳಗದ ನೂತನ ಕಚೇರಿ ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ ಶ್ರೀರಾಮುಲು ಮತ್ತು ಜನಾರ್ದನರೆಡ್ಡಿ ಅವರು ಅಧಿಕಾರದ ಆಸೆಗಾಗಿ ಜಿಲ್ಲೆಯ ಜನರಿಗೆ ಹಾಗೂ ನಾಯಕ ಸಮುದಾಯಕ್ಕೆ ಸುಳ್ಳು ಹೇಳಿಕೊಂಡು ಒಡಾಡುತ್ತಿದ್ದಾರೆ ಎಂದು ದೂರಿದರು.

ರಾಜ್ಯದಲ್ಲಿ ಬಿಜೆಪಿ ನಶಿಸಿಹೋಗಿದೆ. ವರುಣಾ ಕ್ಷೇತ್ರದಲ್ಲಿ ವಿಜಯೇಂದ್ರ ಅವರಿಗೆ ಟಿಕೆಟ್ ನೀಡದಿರುವುದೇ ಇದಕ್ಕೆ ಉದಾಹರಣೆ. ಯಡಿಯೂರಪ್ಪ ಅವರನ್ನು ಮೂಲೆಗುಂಪು ಮಾಡಲಾಗಿದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಅಸಂಭವ. ಹೀಗಾದರೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಲು ಹೇಗೆ ಸಾಧ್ಯ? ಎಂದು ವ್ಯಂಗ್ಯವಾಡಿದರು.

ADVERTISEMENT

ಬಳ್ಳಾರಿಯಲ್ಲಿ ಸತತವಾಗಿ ಆಳ್ವಿಕೆ ನಡೆಸಿದ ಶ್ರೀರಾಮುಲು ಹಾಗೂ ಜನಾರ್ದನರೆಡ್ಡಿ ಅವರ ಬಳಗ, ಆ ಜಿಲ್ಲೆಯನ್ನು ಹಿಂದುಳಿಯುಂತೆ ಮಾಡಿದೆ. ಅವರಿಗೆ ಸಾಧ್ಯವಾದರೆ ಬಳ್ಳಾರಿಯ ರಾಯಲ್ ವೃತ್ತ ಹಾಗೂ ಕೌಲ್‌ಬಜಾರ್‌ಗಳ ನಿವಾಸಿಗಳಿಗೆ ನೀರು ಒದಗಿಸಲಿ. ಈ ಕೆಲಸ ಮಾಡಿಕೊಡಲಾಗದ ಶ್ರೀರಾಮುಲು ‘ಮೊಳಕಾಲ್ಮುರು ಕ್ಷೇತ್ರದ ಜನತೆಗೆ ನೀರು ಹರಿಸುತ್ತೇವೆ’ ಎನ್ನುತ್ತಿದ್ದಾರೆ. ಈಗಾಗಲೇ ಸರ್ಕಾರದ ಮಟ್ಟದಲ್ಲಿ ಐದು ವರ್ಷಗಳಿಂದ ಹೋರಾಟ ನಡೆಸಲಾಗಿದೆ. ಮೊಳಕಾಲ್ಮುರು ಕ್ಷೇತ್ರದ ಎಲ್ಲಾ ಕೆರೆಗಳಿಗೂ ನೀರು ಹರಿಸಲು ಭದ್ರಾ ಮೇಲ್ದಂಡೆ ಯೋಜನೆ ಮತ್ತು ಸಿಂಗಟಾಲೂರು ಭದ್ರಾ ಹಿನ್ನೀರು ಕುಡಿಯುವ ನೀರಿನ ಯೋಜನೆಯನ್ನು ಮಂಜೂರು ಮಾಡಿಸಲಾಗಿದೆ ಎಂದು ತಿಳಿಸಿದರು.

‘ನೀವು ಬಳ್ಳಾರಿಯ ಅಮೂಲ್ಯ ಗಣಿ ಸಂಪತ್ತನ್ನು ದೋಚಿದ್ದೀರಿ. ಸುಂಕಲಮ್ಮ ದೇವಾಲಯವನ್ನು ನಾಶಮಾಡಿದ್ದೀರಿ. ಅಷ್ಟು ಸಾಲದೆಂಬಂತೆ ಈಗ ಚಿತ್ರದುರ್ಗದ ಕೋಟೆ, ನುಂಕಿಮಲೆ ಬೆಟ್ಟ, ಹೊಸಗುಡ್ಡಗಳಲ್ಲಿರುವ ಸಂಪತ್ತಿನ ಮೇಲೆ ಕಣ್ಣು ಹಾಕಿದ್ದೀರಿ. ಇದಕ್ಕೆಲ್ಲಾ ನಾನು ಅವಕಾಶ ನೀಡುವುದಿಲ್ಲ. ಇಲ್ಲಿನ ಜನರು ಸ್ವಾಭಿಮಾನಿಗಳು. ನಿಮ್ಮ ಮೋಸದ ಹುನ್ನಾರಗಳು ಜನರಿಗೆ ತಿಳಿದಿವೆ. ನೀವೇ ಚುನಾವಣೆಯಿಂದ ಹಿಂದೆ ಸರಿದು, ಬಳ್ಳಾರಿಗೆ ತೆರಳಿ ಎಂದರು.

ಇದೇವೇಳೆ ತಾಲ್ಲೂಕು ಪಂಚಾಯ್ತಿ ಸದಸ್ಯರಾದ ಟಿ.ತಿಪ್ಪೇಸ್ವಾಮಿ, ಕಾಲುವೆಹಳ್ಳಿ ಶ್ರೀನಿವಾಸ್, ಮುಖಂಡರಾದ ಮಲ್ಲೇಶ್ ಚನ್ನಗಾನಹಳ್ಳಿ, ಬಿ. ತಿಪ್ಪೇಶ್, ಡಿ.ಓ.ಮೋರಾರ್ಜಿ, ಸೈಯದ್‌ ಮೆಹಬೂಬ್, ಪ.ಮ.ಗುರುಲಿಂಗಯ್ಯ, ಬಿ.ಎಂ. ತಿಪ್ಪೇರುದ್ರಸ್ವಾಮಿ ಇದ್ದರು.

ಚಿತ್ರದುರ್ಗದ ರಕ್ತವೋ? ಬಳ್ಳಾರಿಯ ರಕ್ತವೋ?

ಐದು ವರ್ಷಗಳಿಂದ ನನ್ನ ಬಳಿ ಇದ್ದು, ಬೇಕಾದ ಸವಲತ್ತುಗಳನ್ನು ಪಡೆದುಕೊಂಡ ಕೆಲವರು ಈಗ ಹಣದ ಆಸೆಗೆ ರೆಡ್ಡಿ ಪಾಳಯವನ್ನು ಸೇರುತ್ತಿದ್ದಾರೆ. ಇಲ್ಲಿನ ಕೆಲ ಡೋಂಗಿ ರಾಜಕಾರಣಿಗಳ ಮೈಯಲ್ಲಿ ಹರಿಯುತ್ತಿರುವುದು ಚಿತ್ರದುರ್ಗ ಜಿಲ್ಲೆಯ ಪೌರುಷದ ರಕ್ತವೋ? ಅಥವಾ ಬಳ್ಳಾರಿಯ ರಕ್ತವೋ? ನನಗೆ ತಿಳಿಯುತ್ತಿಲ್ಲ ಎಂದು ಖಾರವಾಗಿ ಹೇಳಿದರು.

ಹಾಲುಮತಸ್ಥ ಸಮುದಾಯ ಬೆಂಬಲ

ಹಾಲುಮತಸ್ಥ ಕುರುಬ ಸಮುದಾಯವು ಕ್ಷೇತ್ರದಲ್ಲಿ ಶಾಸಕ ತಿಪ್ಪೇಸ್ವಾಮಿ ಅವರನ್ನು ಬೆಂಬಲಿಸಲಿದೆ ಎಂದು ರಾಜ್ಯ ಉಣ್ಣೆ ಮತು ಕೈಮಗ್ಗ ನಿಗಮದ ನಿರ್ದೇಶಕ ಎಂ. ಚನ್ನಪ್ಪ ಹೇಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸೋಲಿಸಲು ಬಾದಾಮಿಯಲ್ಲಿ ಶ್ರೀರಾಮುಲು ಸ್ಪರ್ಧಿಸಿದ್ದಾರೆ. ಇದು ದ್ವೇಷದ ರಾಜಕಾರಣಕ್ಕೆ ಸಾಕ್ಷಿ. ಹೀಗಾಗಿ, ನಮ್ಮ ಸಮಾಜ ಶ್ರೀರಾಮುಲು ಮತ್ತು ಅವರ ತಂಡದ ವಿರುದ್ಧ ವಾಗಿ ಮೊಳಕಾಲ್ಮುರು, ಬಾದಾಮಿಯಲ್ಲಿ ಪ್ರಚಾರ ಮಾಡಲಿದೆ. ಶ್ರೀರಾಮುಲು ಅವರನ್ನು ಸೋಲಿಸಲಿದೆ ಎಂದರು.

**
ರೆಡ್ಡಿ, ಶ್ರೀರಾಮುಲು ಬಳ್ಳಾರಿಗೆ ಹಿಂತಿರುಗದಿದ್ದರೆ ಕ್ಷೇತ್ರದ ಜನತೆ ಅವರನ್ನು ಭಯಂಕರವಾಗಿ ಸೋಲಿಸಿವುದು ನಿಶ್ಚಿತ
- ಎಸ್‌. ತಿಪ್ಪೇಸ್ವಾಮಿ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.