ADVERTISEMENT

ಖಾಸಗಿ ಕಂಪೆನಿಗೆ ಸಾವಿರ ಎಕರೆ ಭೂಮಿ ಮಂಜೂರು

ಸಿಬಿಐ ತನಿಖೆಗೆ ಮಾಜಿ ಶಾಸಕ ಎನ್‌.ವೈ.ಗೋಪಾಲಕೃಷ್ಣ ಆಗ್ರಹ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2014, 6:27 IST
Last Updated 6 ಮಾರ್ಚ್ 2014, 6:27 IST

ಚಿತ್ರದುರ್ಗ: ನಾಯಕನಹಟ್ಟಿ ಹೋಬಳಿ ವರವು ಕಾವಲು ಗ್ರಾಮದಲ್ಲಿ 1 ಸಾವಿರ ಎಕರೆ ಸರ್ಕಾರಿ ಜಮೀನನ್ನು ಸೌರಶಕ್ತಿ ಪಾರ್ಕ್ ಅಭಿವೃದ್ಧಿ ಪಡಿಸಲು ಖಾಸಗಿ ಕಂಪೆನಿಗೆ ನೀಡಿದ್ದು, ಈ ಕುರಿತು ಸಿಬಿಐ ತನಿಖೆ ನಡೆಸಬೇಕು ಎಂದು ಮೊಳಕಾಲ್ಮುರು ಮಾಜಿ ಶಾಸಕ ಎನ್.ವೈ.ಗೋಪಾಲಕೃಷ್ಣ ಆಗ್ರಹಿಸಿದರು.

ದನ, ಕರು, ಕುರಿ ಹಾಗೂ ಮೇಕೆಗಳ ಮೇವಿಗಾಗಿ ಮೀಸಲಿರಿಸಿದ್ದ ಭೂಮಿಯಲ್ಲಿ 1 ಸಾವಿರ ಎಕರೆಯನ್ನು ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಯಾರ ಗಮನಕ್ಕೂ ತರದೆ ಬೆಂಗಳೂರಿನ ಸಾಗಿಟಾರ್ ವೆಂಚರ್‌್ಸ್‌ ಪ್ರೈ.ಲಿ. ಕಂಪೆನಿಗೆ ನೀಡಿದೆ. ಪ್ರಸ್ತುತ ಈಗಿನ ಶಾಸಕರು ಈ ಕುರಿತು ಚಕಾರ ಎತ್ತುತ್ತಿಲ್ಲ. ಆದ್ದರಿಂದ ಈ ಅವ್ಯವಹಾರದ ಹಿಂದೆ ಕೇಂದ್ರ ಮತ್ತು ರಾಜ್ಯದ ಮುಖಂಡರ ಕೈವಾಡವಿದ್ದು, ಪತ್ತೆ ಹಚ್ಚಲು ಸಿಬಿಐ ತನಿಖೆಯಿಂದ ಮಾತ್ರ ಸಾಧ್ಯ ಎಂದು ಬುಧವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಎನ್.ವೈ.ಹನುಮಂತಪ್ಪ ಮತ್ತು ನನ್ನ ಮೇಲೆ ವಿನಾಕಾರಣ ಮೊಳಕಾಲ್ಮುರು ಶಾಸಕ ತಿಪ್ಪೇಸ್ವಾಮಿ ಕುದಾಪುರ, ವರವು ಕಾವಲ್‌ಗಳನ್ನು ಇಸ್ರೋ, ಡಿಆರ್‌ಡಿಓ ಸೇರಿದಂತೆ ಇತರ ಸಂಸ್ಥೆಗಳಿಗೆ ಪರಭಾರೆ ಮಾಡಿದ್ದಾರೆ ಎಂಬುದಾಗಿ ಹೇಳಿಕೊಂಡು ಕ್ಷೇತ್ರದ ಜನತೆಯನ್ನು ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿದ್ದು, ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದೇನೆ’ ಎಂದರು.

‘18 ವರ್ಷಗಳಿಂದ ಮೊಳಕಾಲ್ಮುರು ಕ್ಷೇತ್ರಕ್ಕೆ ನಾನು ಮಾಡಿರುವ ಜನಪರ ಕೆಲಸದ ಕುರಿತು ಕ್ಷೇತ್ರದ ಜನತೆ ನನ್ನನ್ನು ಪ್ರಶ್ನಿಸಲಿ. ಅದನ್ನು ಬಿಟ್ಟು ಈಗಿನ ಶಾಸಕರಿಗೆ ನನ್ನನ್ನು ಕೇಳುವ ಹಕ್ಕಿಲ್ಲ. ನಾನು ಅಧಿಕಾರದಲ್ಲಿದ್ದ ವೇಳೆ ಎಲ್ಲಿಯಾದರೂ ಲೋಪವಾಗಿದ್ದರೆ ತೋರಿಸಲಿ ರಾಜಕೀಯದಿಂದ ನಿವೃತ್ತಿಯಾಗುವುದಾಗಿ ಸವಾಲು ಹಾಕಿದರು.

ಯಾರು ಎಷ್ಟು ಹಗರಣಗಳಲ್ಲಿ ಭಾಗಿಯಾಗಿ ಕೋಟಿಗಟ್ಟಲೇ ದೋಚಿದ್ದಾರೆ ಎಂಬುದು ಜನರಿಗೆ ಗೊತ್ತಿರುವ ವಿಚಾರ. ನಮ್ಮ ಕುಟುಂಬದ ಸದಸ್ಯರ ಮೇಲೆ ವಿನಾಕಾರಣ ಗೂಬೆ ಕೂರಿಸಿ ಪದೇ ಪದೇ ಅವಹೇಳನಕಾರಿಯಾಗಿ ಮಾತನಾಡಿ, ಜನತೆಯಲ್ಲಿ ನನ್ನ ಬಗ್ಗೆ ತಪ್ಪು ಭಾವನೆ ಮೂಡಿಸುವುದನ್ನು ಕೈಬಿಟ್ಟು ಕ್ಷೇತ್ರದ ಅಭಿವೃದ್ಧಿ ಕಡೆ ಗಮನಹರಿಸಲಿ. ನಾನು ಕೂಡ ಬೆಂಬಲಕ್ಕೆ ನಿಲ್ಲುತ್ತೇನೆ’ ಎಂದು ಹೇಳಿದರು.

ಮೊಳಕಾಲ್ಮುರು ಕ್ಷೇತ್ರಕ್ಕೆ ಸೇರಿದ ಸುಮಾರು ೩೦೦ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರನ್ನು ತುಂಗಭದ್ರಾ ಹಿನ್ನೀರಿನಿಂದ ಹರಿಯುವಂತೆ ಮಾಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಈ ವಿಷಯದಲ್ಲಿ ದುರುದ್ದೇಶ ಸಲ್ಲ ಎಂದರು.

ಕಾಂಗ್ರೆಸ್ ಜಿಲ್ಲಾ ಘಟದಕ ಅಧ್ಯಕ್ಷ ಎಂ.ಎ.ಸೇತೂರಾಂ, ಪ್ರಧಾನ ಕಾರ್ಯದರ್ಶಿ ಬಿ.ಟಿ.ಜಗದೀಶ್, ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾ ಘಟಕದ ಅಧ್ಯಕ್ಷ ಓ.ಶಂಕರ್, ಚಿತ್ರದುರ್ಗ ಲೋಕಸಭಾ ಕ್ಷೇತ್ರ ಯುವ ಕಾಂಗ್ರೆಸ್ ಅಧ್ಯಕ್ಷ ಯೋಗೀಶ್‌ಬಾಬು ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.